ರಾಮಸ್ವಾಮಿ ಹುಲಕೋಡು
ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ನೇಮಕಾತಿ ಯೋಜನೆ ʼಅಗ್ನಿಪಥ್ʼ ಮೂಲಕ ಭಾರತೀಯ ಸೇನೆಯು ನೇಮಕ ಪ್ರಕ್ರಿಯೆಯನ್ನು ರಾಜ್ಯದಲ್ಲಿಯೂ (Agneepath Recruitment 2022) ಆರಂಭಿಸಿದೆ. ಆದರೆ ಈ ನೇಮಕಾತಿ ರ‍್ಯಾಲಿಯಲ್ಲಿ ನಡೆಸುವ ಲಿಖಿತ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಿರುವುದು ರಾಜ್ಯದ ಅಭ್ಯರ್ಥಿಗಳಿಗೆ ನಿರಾಸೆ ಮೂಡಿಸಿದೆ.
ಬಹುತೇಕವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳೇ ಸೇನೆ ಸೇರಲು ಮುಂದಾಗುತ್ತಾರೆ. ಕನ್ನಡ ಮಾಧ್ಯಮದಲ್ಲಿ ಓದಿರುವ ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸೇನೆ ಸೇರುವ ಕನಸು ಹೊತ್ತ ಸಾವಿರಾರು ಅಭ್ಯರ್ಥಿಗಳಿಗೆ ಅಗ್ನಿವೀರರಾಗಲು ಸಾಧ್ಯವಾಗುತ್ತಿಲ್ಲ.
ಅಗ್ನಿಪಥ್ ಮಾತ್ರವಲ್ಲ, ಈ ಹಿಂದೆ ನಡೆಯುತ್ತಿದ್ದ ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಕೂಡ ಲಿಖಿತ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಆದರೆ ರ‍್ಯಾಲಿ ನೇಮಕಗೊಂಡರೆ ಸೇನೆಯಲ್ಲಿ ಕಾಯಂ ಆಗಿ ಕೆಲಸ ಸಿಗುತ್ತದೆ ಎಂದು ಅಭ್ಯರ್ಥಿಗಳು ಕೋಚಿಂಗ್‌ಗೆ ಸೇರಿ, ಕಷ್ಟಪಟ್ಟು ಹಿಂದಿಯನ್ನು ಕಲಿತು ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ಹೊಸ ಅಗ್ನಿಪಥ್ ಯೋಜನೆಯಲ್ಲಿ ಉದ್ಯೋಗದ ಖಾತ್ರಿ ಇಲ್ಲ. ಕೇವಲ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಲು ಒಂದೆರಡು ವರ್ಷ ಕೋಚಿಂಗ್‌ಗೆ ಸೇರುವುದೇಕೆ ಎಂದು ಗ್ರಾಮೀಣ ಅಭ್ಯರ್ಥಿಗಳು ಯೋಚಿಸುವಂತಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲ ಹುದ್ದೆಗಳ ನೇಮಕಕ್ಕೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಸುತ್ತಿದೆ. ಬ್ಯಾಂಕ್ ಹುದ್ದೆಗಳಿಗೆ ಐಬಿಪಿಎಸ್, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ಎಸ್‌ಎಸ್‌ಸಿ, ರೈಲ್ವೆ ಇಲಾಖೆಯ ಹುದ್ದೆಗಳಿಗೆ ಆರ್‌ಆರ್‌ಬಿ ಸ್ಥಳೀಯ ಭಾಷೆಗಳಲ್ಲಿಯೇ ಪರೀಕ್ಷೆ ನಡೆಸುತ್ತಿವೆ. ಇದೇ ಪ್ರಕಾರವಾಗಿ ಸೇನೆ ಕೊನೆಯ ಪಕ್ಷ ಅಗ್ನಿಪಥ್ ಯೋಜನೆಯ ಮೂಲಕ ಮಾಡಿಕೊಳ್ಳುವ ಸೈನಿಕ ಹುದ್ದೆಗಳಿಗಾದರೂ ಕನ್ನಡದಲ್ಲಿ ಪರೀಕ್ಷೆ (Common Entrance Examination- CEE) ನಡೆಸಬೇಕೆಂಬುದು ಅಭ್ಯರ್ಥಿಗಳ ಒತ್ತಾಯವಾಗಿದೆ.
ಮಾಹಿತಿಯೂ ಕನ್ನಡದಲ್ಲಿಲ್ಲ!
ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಪ್ರಕಟಿಸುತ್ತಿದ್ದಂತೆಯೇ ಈ ಬಗ್ಗೆ ದೇಶಾದ್ಯಂತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಯೋಜನೆ ಕುರಿತು ಅಭ್ಯರ್ಥಿಗಳಲ್ಲಿ ಈಗಲೂ ಸಾಕಷ್ಟು ಗೊಂದಲವಿದೆ. ಆದರೆ ಈ ಯೋಜನೆಯ ಮಾಹಿತಿ ಕೂಡ ಕನ್ನಡದಲ್ಲಿ ಲಭ್ಯವಿಲ್ಲ. ಸದ್ಯ ರ‍್ಯಾಲಿಯ ಅಧಿಸೂಚನೆ ಹೊರಡಿಸಿರುವ ಬೆಂಗಳೂರು ಮತ್ತು ಮಂಗಳೂರು ನೇಮಕಾತಿ ಘಟಕಗಳ ಸಹಾಯವಾಣಿಗೆ ಕರೆ ಮಾಡಿದರೂ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿಯೇ ಪ್ರಶ್ನೆ ಕೇಳಿ ಎನ್ನುತ್ತಾರೆ. ಬೇಕಾದ ಮಾಹಿತಿಯನ್ನು ಹಿಂದಿಯಲ್ಲಿ ಮಾತ್ರ ನೀಡುತ್ತಾರೆ. ಹೀಗಾದರೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಈ ಯೋಜನೆಯ ಲಾಭ ಪಡೆಯವುದಾದರೂ ಹೇಗೆ?
ʼʼನಾನು ಸೇನೆ ಸೇರಬೇಕೆಂದುಕೊಂಡಿದ್ದೆ. ಇದಕ್ಕಾಗಿ ಪ್ರತಿನಿತ್ಯ ಕಸರತ್ತು ನಡೆಸಿ ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರೀಕ್ಷೆ ಸಿದ್ಧವಾಗಿದ್ದೆ. ಹಾವೇರಿಯಲ್ಲಿ ಈ ಹಿಂದೆ ನಡೆದ ರ‍್ಯಾಲಿ ಭಾಗವಹಿಸಿ ಅಂದುಕೊಂಡಂತೆ ದೈಹಿಕ ಪರೀಕ್ಷೆಯಲ್ಲಿ ಅರ್ಹತೆಯನ್ನೂ ಪಡೆದೆ. ಆದರೆ ಲಿಖಿತ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಬರೆಯಬೇಕೆಂದು ಕೇಳಿದಾಗಲೇ ನಾನು ಕುಸಿದು ಹೋಗಿದ್ದೆ. ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಸಾಧ್ಯವೇ ಆಗಲಿಲ್ಲ. ಸೇನೆ ಸೇರಿ ದೇಶ ಸೇವೆ ಮಾಡಬೇಕೆಂಬ ನನ್ನ ಕನಸು ಕನಸಾಗಿಯೇ ಉಳಿಯಿತುʼʼ ಎಂದು ಗದಗ ಜಿಲ್ಲೆ ಬೆಟಗೇರಿಯ ಎನ್. ಶಿವಕುಮಾರ್ ಹೇಳಿದ್ದಾರೆ.
ʼʼಹಿಂದಿನಿಂದಲೂ ಸೇನೆಯಲ್ಲಿ ಹಿಂದಿಯನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ಎಲ್ಲ ವ್ಯವಹಾರಗಳೂ ಹಿಂದಿಯಲ್ಲಿಯೇ ಇರುತ್ತವೆ. ಹೀಗಾಗಿ ಸೇನೆ ಸೇರುವ ಸೈನಿಕರು ಹಿಂದಿ ಕಲಿತಿರಬೇಕೆಂಬುದು ಸರಿ ಇರಬಹುದು. ಆದರೆ ಹಿಂದಿ ಅಥವಾ ಇಂಗ್ಲಿಷ್ ಗೊತ್ತಿದ್ದರೆ ಮಾತ್ರ ಸೇನೆಗೆ ಸೇರಬಹುದು ಎನ್ನುವುದು ಸರಿಯಲ್ಲ. ಸೇನೆಗೆ ನೇಮಕ ಮಾಡಿಕೊಳ್ಳುವಾಗ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಸಿ, ಆ ನಂತರ ಬೇಕಾದರೆ ಹಿಂದಿ ಕಲಿಯಲು ಅವಕಾಶ ಮಾಡಿಕೊಡಬಹುದು. ಇದರಿಂದ ಎಲ್ಲ ಭಾಷಿಗರಿಗೂ ಸೇನೆ ಸೇರಲು ಅವಕಾಶ ಸಿಕ್ಕಂತಾಗುತ್ತದೆʼʼ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು.
ರಾಜ್ಯ ಸರ್ಕಾರವೇ ಉಚಿತ ತರಬೇತಿ ನೀಡಲಿ
ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಭಾಗವಹಿಸುವವರು ಶೇ.90 ರಷ್ಟು ಗ್ರಾಮೀಣ ಪ್ರದೇಶದವರು. ಅವರಿಗೆ ಒಂದು ಪರೀಕ್ಷೆಯನ್ನು ಎದುರಿಸುವಷ್ಟು ಇಂಗ್ಲಿಷ್ ಅಥವಾ ಹಿಂದಿಯ ಜ್ಞಾನವಿರುವುದು ಕಡಿಮೆ. ಹೀಗಾಗಿ ಹೆಚ್ಚಿನವರಿಗೆ ಸೇನೆಯ ತಳಮಟ್ಟದ ಹುದ್ದೆಗಳಿಗೆ ಸೇರಲೂ ಆಗುತ್ತಿಲ್ಲ. ಸ್ಥಳೀಯ ಭಾಷೆಗಳಲ್ಲಿಯೇ ಈ ಪರೀಕ್ಷೆ ನಡೆಸಿದರೆ ಹೆಚ್ಚಿನ ಕನ್ನಡಿಗರು ಇದರ ಲಾಭ ಪಡೆಯಬಹುದು. ಹಾಗೆಯೇ ರಾಜ್ಯ ಸರ್ಕಾರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉಚಿತವಾಗಿ ತರಬೇತಿ ನೀಡುವಂತೆ ಸೇನೆಯ ಹುದ್ದೆಗಳಿಗೂ ಉಚಿತವಾಗಿ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಬೇಕು.
– ಗುರುರಾಜ ಎಮ್. ಬುಲಬುಲೆ | ಬುಲಬುಲೆ ಕರಿಯರ್ ಅಕಾಡೆಮಿ ಮತ್ತು ಸ್ಕೂಲ್ ಆಫ್ ಬ್ಯಾಂಕಿಂಗ್, ಧಾರವಾಡ
ರಾಜ್ಯದಲ್ಲಿ ನಡೆಯುವ ನೇಮಕಾತಿ ರ‍್ಯಾಲಿ ಕೂಡ ಹಿಂದಿಮಯವಾಗಿರುತ್ತದೆ. ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರೀಕ್ಷೆ ಸಂದರ್ಭದಲ್ಲಿ ಹಿಂದಿಯಲ್ಲಿ ಮಾತನಾಡುವ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಹಿಂದಿ ಗೊತ್ತಿಲ್ಲದವರು ರ‍್ಯಾಲಿಯ ಸಂದರ್ಭದಲ್ಲಿಯೇ ಪರದಾಡಬೇಕಾಗುತ್ತದೆ ಇದು ಬದಲಾದರೆ ಹೆಚ್ಚಿನ ಅಭ್ಯರ್ಥಿಗಳು ಸೇನೆ ಸೇರಲು ಮುಂದಾಗಬಹುದು ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ಸದ್ಯವೇ ಅಗ್ನಿಪಥ್ ರ‍್ಯಾಲಿಗಳು ನಡೆಯಲಿವೆ. ಮೊದಲ ರ‍್ಯಾಲಿಯು ಆಗಸ್ಟ್ 10 ರಿಂದ 22ರವರೆಗೆ ಕೋಲಾರದಲ್ಲಿ ನಡೆಯಲಿದೆ. ಬೆಂಗಳೂರು (ನಗರ ಮತ್ತು ಗ್ರಾಮೀಣ), ಕೋಲಾರ, ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ಚಿತ್ರದುರ್ಗ, ಹಾಸನ, ಬಳ್ಳಾರಿ ಮತ್ತು ಹೊಸ ಜಿಲ್ಲೆ ವಿಜಯನಗರದ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಹಾವೇರಿಯಲ್ಲಿ ಸೆಪ್ಟೆಂಬರ್ 1 ರಿಂದ 20ರವರೆಗೆ ರ‍್ಯಾಲಿ ನಡೆಯಲಿದೆ. ಮಂಗಳೂರು ವಿಭಾಗೀಯ ನೇಮಕಾತಿ ಕಚೇರಿಯ ಅಡಿಯಲ್ಲಿ ನಡೆಯುವ ಈ ರ‍್ಯಾಲಿಯಲ್ಲಿ ಉತ್ತರಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬಾಗಲಕೋಟದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಕನ್ನಡದಲ್ಲಿಯೇ ಪರೀಕ್ಷೆ ನಡೆಸಿ
ಉದ್ಯೋಗದ ದೃಷ್ಟಿಯಿಂದ ಅಗ್ನಿಪಥ್ ಮಹತ್ವಾಕಾಂಕ್ಷೆಯ ಯೋಜನೆ. ಇದರ ಅಡಿಯಲ್ಲಿ ಸೇನಾ ನೇಮಕಾತಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಇಂಗ್ಲಿಶ್ ಮತ್ತು ಹಿಂದಿ ಮಾಧ್ಯಮದಲ್ಲಿ ಮಾತ್ರ ನಡೆಸುತ್ತಿರುವುದು ದುರದೃಷ್ಟಕರ. ಬಹುತೇಕ ಕಡಿಮೆ ಶಿಕ್ಷಣ ಪಡೆದಿರುವವರೇ ಬರೆಯುವ ಈ ಪರೀಕ್ಷೆಯನ್ನು ಕನ್ನಡವೂ ಸೇರಿದಂತೆ ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಮಾನ್ಯ ಮಾಡಿರುವ ಇಪ್ಪತ್ತೆರಡು ಭಾಷೆಗಳಲ್ಲಿಯೂ ನಡೆಸಬೇಕು.
– ಗಿರೀಶ್ ಮತ್ತೇರ | ಕನ್ನಡ ಪರ ಹೋರಾಟಗಾರ,ಹೊಳಲ್ಕೆರೆ
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೋಲಾದರಲ್ಲಿ ನಡೆಯುವ ರ‍್ಯಾಲಿಗೆ ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನವಾಗಿದೆ. ಹಾವೇರಿಯಲ್ಲಿ ನಡೆಯಲಿರುವ ರ‍್ಯಾಲಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 4ರವರೆಗೆ ಅವಕಾಶವಿರುತ್ತದೆ. 8ನೇ ತರಗತಿಯಲ್ಲಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದವರು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿರುತ್ತದೆ. ಕಡಿಮೆ ವಿದ್ಯಾರ್ಹತೆ ಬೇಡುವ ಹುದ್ದೆಗಳಿಗೆ ಸ್ಥಳೀಯ ಭಾಷೆಯಲ್ಲಿಯೇ ಪರೀಕ್ಷೆ ನಡೆಸಬೇಕೆಂದು ಸಂವಿಧಾನವೇ ಹೇಳಿದೆ. ಹೀಗಿರುವಾಗ ಸೈನಿಕ ಹುದ್ದೆಗಳಿಗೆ ಏಕೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ | Agnipath | ಅಗ್ನಿವೀರರ ನೇಮಕಕ್ಕೆ ರಾಜ್ಯದಲ್ಲಿ ನಡೆಯಲಿದೆ ನಾಲ್ಕು ರ‍್ಯಾಲಿ