ನವ ದೆಹಲಿ: ಭಾರತೀಯ ನೌಕಾಪಡೆಯು ಅಗ್ನಿವೀರರ ನೇಮಕಾತಿ (Agneepath Recruitment 2022) ಪ್ರಕ್ರಿಯೆ ಆರಂಭಿಸಿದ್ದು, ಅವಿವಾಹಿತ ಮಹಿಳೆಯರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಮೊದಲ ಮೂರು ದಿನಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ನಡುವೆ ಶೇ. ೨೦ ರಷ್ಟು ಅಗ್ನಿವೀರರ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ನೌಕಾಪಡೆ ಪ್ರಕಟಿಸಿದೆ.
ಸದ್ಯ ೩೦ ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳು ನೌಕಾಪಡೆಯ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಂದ ಪ್ರೇರಣೆಗೊಂಡು ಇನ್ನೂ ಹೆಚ್ಚಿನ ಮಹಿಳೆಯರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರನ್ನು ನೌಕಾಪಡೆಯ ಎಲ್ಲ ವಿಭಾಗಗಳಲ್ಲಿಯೂ ನಿಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೊದಲಿಗೆ ಅಗ್ನಿಪಥ್ ಯೋಜನೆ ಮೂಲಕ ಒಟ್ಟು ೨೮೦೦ ಸೀನಿಯರ್ ಸೆಕೆಂಡರಿ ರಿಕ್ರೂಟ್ (ಎಸ್‌ಎಸ್‌ಆರ್) ಹುದ್ದೆಗಳಿಗೆ ಅಗ್ನಿವೀರರ ನೇಮಕ ನಡೆಯಲಿದೆ. ಇದರಲ್ಲಿ ೫೬೦ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಪ್ರಕಟಿಸಿದಂತೆ ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ಜು.೧ ರಿಂದಲೇ ರಿಜಿಸ್ಟೇಷನ್ ಪ್ರಕ್ರಿಯೆ ಶುರುವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿರುತ್ತದೆ. ಹೀಗೆ ಹೆಸರು ನೋಂದಾಯಿಸಿಕೊಂಡವರಲ್ಲಿ ನಿರೀಕ್ಷೆಗೂ ಮೀರಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಮಹಿಳೆಯರಿಗೆ ಅವಕಾಶ ನೀಡಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ವಾಯುಪಡೆ ಮತ್ತು ಭೂಸೇನೆ ಕೂಡ ಈಗಾಗಲೇ ಅಗ್ನಿವೀರರ ನೇಮಕ ಪ್ರಕ್ರಿಯೆ ಆರಂಭಿಸಿವೆ. ಆದರೆ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ.
ನೌಕಾಪಡೆ ನೇಮಕದ ವೇಳಾಪಟ್ಟಿ;
ನೌಕಾಪಡೆಯಲ್ಲಿ ನೇಮಕ ಹೇಗೆ?
ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರರಾಗಲು ಅಭ್ಯರ್ಥಿಗಳು ಮೊದಲಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುತ್ತದೆ. ಹೆಸರು ನೋಂದಾಯಿಸಿಕೊಳ್ಳಲು ಭಾರತೀಯ ನೌಕಾಪಡೆಯು ನೇಮಕಾತಿಗೆ ಸಂಬಂಧಿಸಿದ ವೆಬ್ ಸೈಟ್‌ನಲ್ಲಿ (http://www.joinindiannavy.gov.in) ಅವಕಾಶ ನೀಡಿದೆ. ಜು.೯ರಂದು ಈ ನೇಮಕಾತಿಗೆ ಸಂಬಂಧಿಸಿದ ವಿವರವಾದ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ನಂತರ ಜುಲೈ ೧೫ ರಿಂದ ೩೦ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಹೆಸರು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದವರು ನೌಕಾಪಡೆಯ ಅಗ್ನವೀರರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆ, ಫೋಟೊ (Good Quality With Blue Background) ಅಪ್‌ಲೋಡ್ ಮಾಡಬೇಕಿರುತ್ತದೆ. ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಪುರುಷ ಅಭ್ಯರ್ಥಿಗಳು ೧೫೭ ಸೆಂ.ಮೀ, ಮಹಿಳಾ ಅಭ್ಯರ್ಥಿಗಳು ೧೫೨ ಸೆಂ.ಮೀ. ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು. ನೇಮಕ ಪ್ರಕ್ರಿಯೆಯ ಮೊದಲಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
೧೯೯೯ರ ನವೆಂಬರ್ ೧ ರಿಂದ ೨೦೦೫ರ ಏಪ್ರಿಲ್ ೩೦ರ ಒಳಗೆ ಜನಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಭೂಸೇನೆಯು ಬೆಂಗಳೂರು ವಿಭಾಗೀಯ ಕಚೇರಿಯ ಅಡಿಯಲ್ಲಿ ನವೆಂಬರ್ ೧ ರಿಂದ ೩ರ ವರೆಗೆ ಬೆಂಗಳೂರಿನಲ್ಲಿ ರ‍್ಯಾಲಿ ನಡೆಸಲಿದ್ದು, ಇದರಲ್ಲಿ ವಿಶೇಷವಾಗಿ ಮಹಿಳಾ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ | Agnipath | ಅಗ್ನಿವೀರರ ನೇಮಕಕ್ಕೆ ರಾಜ್ಯದಲ್ಲಿ ನಡೆಯಲಿದೆ ನಾಲ್ಕು ರ‍್ಯಾಲಿ