ಬೆಂಗಳೂರು: ಕೇಂದ್ರ ಸರ್ಕಾರವು ಸೇನಾ ನೇಮಕಾತಿಗೆ ಹೊಸ ಯೋಜನೆ ʼಅಗ್ನಿಪಥʼ (Agneepath) ಘೋಷಿಸಿದ ಸಂದರ್ಭದಲ್ಲಿ ಅಗ್ನಿವೀರರನ್ನು ಪಾರದರ್ಶವಾಗಿ ನೇಮಕ ಮಾಡಿಕೊಳ್ಳಲಾಗುವುದು, ಇದಕ್ಕಾಗಿ ದೇಶಾದ್ಯಂತ ಏಕರೂಪದ ಪರೀಕ್ಷೆ ನಡೆಸಲಾಗುವುದು ಎಂದೆಲ್ಲಾ ಹೇಳಿತ್ತು.
ಈಗ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಭಾರತೀಯ ಸೇನೆ ಹೊರಡಿಸಿದ್ದು, ಇದರ ಪ್ರಕಾರ ನೇಮಕ ಪ್ರಕ್ರಿಯೆಯಲ್ಲಿ, ಅರ್ಹತೆಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಈ ಹಿಂದೆ ಸೈನಿಕ ಹುದ್ದೆಗಳಿಗೆ ಹೇಗೆ ರ‍್ಯಾಲಿ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತಿತ್ತೋ ಅದೇ ರೀತಿಯಲ್ಲಿ ಇನ್ನು ಮುಂದೆಯೂ ನೇಮಕ ನಡೆಯಲಿದೆ.
ಮಹತ್ವದ ಬದಲಾವಣೆ ಎಂದರೆ ನೇಮಕಗೊಳ್ಳುವ ಅಭ್ಯರ್ಥಿಗಳು ಇನ್ನು ಮುಂದೆ ನಾಲ್ಕು ವರ್ಷಗಳ ಕಾಲ ಮಾತ್ರ ಖಚಿತವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬಹುದಾಗಿರುತ್ತದೆ. ಈ ಸಂದರ್ಭದಲ್ಲಿ ಅತ್ಯುತ್ತಮ ಸಾಧನೆ ತೋರಿಸಿದರೆ ಮಾತ್ರ ಕಾಯಂ ಸೈನಿಕ ಹುದ್ದೆಗಳಿಗೆ ನೇಮಕಗೊಳ್ಳಲಿದ್ದಾರೆ.
ಭಾರತೀಯ ಸೇನೆಯು ಬಿಡುಗಡೆ ಮಾಡಿರುವ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಏಕರೂಪದ ಪರೀಕ್ಷೆ ಇಲ್ಲ
ಅಗ್ನಿಪಥ ಯೋಜನೆ ಘೋಷಿಸಿದ ಸಂದರ್ಭದಲ್ಲಿ ಅಗ್ನಿವೀರರ (ಸೈನಿಕರ) ನೇಮಕವನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುವುದು. ಇದಕ್ಕಾಗಿ ದೇಶಾದ್ಯಂತ ಏಕರೂಪದ ಪರೀಕ್ಷೆ ನಡೆಸಲಾಗುವುದು ಎಂದೆಲ್ಲಾ ಹೇಳಲಾಗಿತ್ತು. ಆದರೆ ಈಗ ಹೊರಡಿಸಿರುವ ಅಧಿಸೂಚನೆಯಲ್ಲಿ ಪರೀಕ್ಷೆಯನ್ನು ಈ ಹಿಂದಿನಂತೆಯೇ ನಡೆಸಲಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.
ನೇಮಕಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ (CEE)ಯನ್ನು ರ‍್ಯಾಲಿಯನ್ನು ವೈದ್ಯಕೀಯವಾಗಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ನಡೆಸಲಾಗುತ್ತದೆ. ರ‍್ಯಾಲಿಯಲ್ಲಿಯೇ ಈ ಬಗ್ಗೆ ಅಭ್ಯರ್ಥಿಗಳಿಗೆ ಸೂಚನೆ ನೀಡಿ, ಪ್ರವೇಶ ಪತ್ರ ಒದಗಿಸಲಾಗುತ್ತದೆ. ನಿಗದಿತ ಸ್ಥಳದಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ. ಎನ್‌ಸಿಸಿಯಲ್ಲಿ “ಸಿʼʼ ಸರ್ಟಿಫಿಕೇಟ್ ಹೊಂದಿವರಿಗೆ ಮಾತ್ರ ಲಿಖಿತ ಪರೀಕ್ಷೆಯಿಂದ ರಿಯಾಯಿತಿ ನೀಡಲಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CEE) ಎಂದು, ಎಲ್ಲಿ ನಡೆಸಲಾಗುತ್ತದೆ ಎಂದು ರ‍್ಯಾಲಿಯಲ್ಲಿಯೇ ಅಭ್ಯರ್ಥಿಗಳಿಗೆ ಈ ಹಿಂದಿನಂತೆಯೇ ತಿಳಿಸಲಾಗುವುದರಿಂದ ಈ ಹಿಂದಿನಂತೆಯೇ ಪರೀಕ್ಷೆ ನಡೆಯುತ್ತದೆ ಎಂದೇ ಹೇಳಲಾಗುತ್ತಿದೆ. ರ‍್ಯಾಲಿಗಳಲ್ಲಿನ ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೂಡ ಬದಲಾವಣೆಗಳನ್ನೇನೂ ಮಾಡಲಾಗಿಲ್ಲ.
ದೈಹಿಕ ಅರ್ಹತೆಯಲ್ಲಿ ಬದಲಾವಣೆ ಇಲ್ಲ
ಭಾರತೀಯ ಸೇನೆ ಸೇರಬೇಕೆಂದರೆ ಅಭ್ಯರ್ಥಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲೇಬೇಕು. ಈ ಅರ್ಹತೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಸೈನಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲ ಹುದ್ದೆಗಳಿಗೆ 162 ಮತ್ತು ಇನ್ನು ಕೆಲವು ಹುದ್ದೆಗಳಿಗೆ 165 ಸೆಂ.ಮೀ. ಎತ್ತರ ಇರಲೇಬೇಕಿರುತ್ತದೆ. ಎತ್ತರಕ್ಕೆ ತಕ್ಕ ತೂಕವನ್ನೂ ಹೊಂದಿರಬೇಕು. ಎಷ್ಟು ಎತ್ತರದವರು ಎಷ್ಟು ತೂಕ ಹೊಂದಿರಬೇಕೆಂಬ ಮಾಹಿತಿಯನ್ನು ಸೇನೆಯೇ ನಿಗದಿಪಡಿಸಿರುತ್ತದೆ. ಅಭ್ಯರ್ಥಿಗಳು ಅದನ್ನು ನೋಡಿಕೊಂಡೇ ಅರ್ಜಿ ಸಲ್ಲಿಸಬೇಕು. ಇದಲ್ಲದೆ 77 ಸೆಂ.ಮೀ. ಎದೆಯ ಸುತ್ತಳತೆ (ಹಿಗ್ಗಿಸಿದಾಗ 5 ಸೆಂ.ಮೀ ಹೆಚ್ಚು) ಹೊಂದಿರಲೇಬೇಕು. ಈಗ ಪ್ರಕಟಿಸಿರುವ ಅಧಿಸೂಚನೆಯಲ್ಲಿ ʼಈ ಹಿಂದಿನ ದೈಹಿಕ ಅರ್ಹತೆಯನ್ನೇ ಮುಂದುವರಿಸಲಾಗಿದೆʼ ಎಂದು ಪ್ರಕಟಿಸಲಾಗಿದೆ.
ದೈಹಿಕ ಸಾಮರ್ಥ್ಯ ಪರೀಕ್ಷೆ ಹೇಗೆ?
ಈ ಹಿಂದಿನಂತೆಯೇ ರ‍್ಯಾಲಿಯ ಆರಂಭದಲ್ಲಿ ಸಾಮಾನ್ಯ ಸ್ಕ್ರೀನಿಂಗ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ದೈಹಿಕ ಸದೃಢತೆಯನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯನ್ನು (ಪಿಇಟಿ)ಯನ್ನು ಎಲ್ಲಾ ವರ್ಗದ ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ತಕ್ಕಂತೆ ನಡೆಸಲಾಗುತ್ತದೆ.
ಪಿಇಟಿ ಹಂತದ ಪರೀಕ್ಷೆಗಳು ಈ ಕೆಳಗಿನಂತೆ ನಡೆಯಲಿವೆ.
1. ತಾಳ್ವಿಕೆ ಪರೀಕ್ಷೆ 1.6 ಕಿ.ಮೀ. ಓಟ
2. ಬಲದ ಪರೀಕ್ಷೆಗಾಗಿ ಬೀಮ್ಸ್‌ಗಳಲ್ಲಿ ಫುಲ್ ಅಪ್ಸ್.
3. ಧೈರ್ಯದ ಪರೀಕ್ಷೆಗಾಗಿ 9 ಅಡಿ ಆಳದ ಹಳ್ಳ ನೆಗೆತ. (ಅರ್ಹತಾ ಪರೀಕ್ಷೆ)
4. ಸಮತೋಲನದ ಪರೀಕ್ಷೆಗಾಗಿ ಜಿಗ್‌ಜಾಗ್ ನಡಿಗೆ. (ಅರ್ಹತಾ ಪರೀಕ್ಷೆ)
ದೈಹಿಕ ಅರ್ಹತೆ ಮತ್ತು ದೈಹಿಕ ಸದೃಢತೆ ಪರೀಕ್ಷೆಯ ಜತೆಗೆ ವೈದ್ಯಕೀಯ ಪರೀಕ್ಷೆಯೂ ನಡೆಯಲಿದೆ. ಇದಾದ ಮೇಲೆ ಲಿಖಿತ ಪರೀಕ್ಷೆ ಇರುತ್ತದೆ. ಈ ಮೇಲಿನ ಎಲ್ಲಾ ಹಂತಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗುತ್ತದೆ.
ಹಿಂದಿನಂತೆಯೇ ಅರ್ಜಿ ಸಲ್ಲಿಕೆ
ಅಗ್ನಿಪಥ್ ಯೋಜನೆಯ ಮೂಲಕ ನಡೆಯುವ ನೇಮಕಾತಿ ರ‍್ಯಾಲಿಗೂ ಈ ಹಿಂದಿನಂತೆಯೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುತ್ತದೆ. ಸೇನೆಯು ವೆಬ್‌ನಲ್ಲಿ (http://joinindianarmy.nic.in ) ಅಧಿಸೂಚನೆ ಪ್ರಕಟಿಸುತ್ತದೆ, ಆಗ ಅಭ್ಯರ್ಥಿಗಳು ವೆಬ್‌ಗೆ ತೆರಲಿ ಅಲ್ಲಿ ಮೊದಲು ಹೆಸರು ನೊಂದಾಯಿಸಿಕೊಳ್ಳಬೇಕು. ಅಲ್ಲಿ ಕೇಳಲಾಗುವ ವಿದ್ಯಾರ್ಹತೆ, ವಯಸ್ಸು, ಊರು, ವಿಳಾಸ, ಇ-ಮೇಲ್ ವಿಳಾಸ ಮತ್ತಿತರ ಮಾಹಿತಿಯನ್ನು ಸರಿಯಾಗಿ ಒದಗಿಸಬೇಕು.
ಸೇನೆಯು ಅರ್ಜಿ ಸಲ್ಲಿಸದ ಅಭ್ಯರ್ಥಿಯ ಇ-ಮೇಲ್ ವಿಳಾಸಕ್ಕೆ ಪ್ರವೇಶ ಪತ್ರವನ್ನು (Admit Card) ಕಳುಹಿಸಿಕೊಡಲಿದ್ದು, ಇದನ್ನು ಪ್ರಿಂಟ್‌ಔಟ್ ತೆಗೆದುಕೊಂಡು ಬಂದವರಿಗೆ ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಜುಲೈನಿಂದ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಈಗಾಗಲೇ ಸೇನೆಯು ಪ್ರಕಟಿಸಿದೆ.
ಇದನ್ನೂ ಓದಿ | Agneepath | ನೀವೂ ʼಅಗ್ನಿಪಥ್ʼನಲ್ಲಿ ಸಾಗಿ ಸೇನೆ ಸೇರಬೇಕೇ? ನೇಮಕ ಹೇಗೆ ನಡೆಯುತ್ತದೆ ಗೊತ್ತೆ?