ನವ ದೆಹಲಿ: ಭಾರತೀಯ ಸೇನೆಗೆ ತಾರುಣ್ಯದ ಟಚ್ ನೀಡುವ ಉದ್ದೇಶದಿಂದ ಇತ್ತೀಚೆಗೆ ಜಾರಿಗೆ ತಂದಿದ್ದ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್ʼ (Agnipath) ನಲ್ಲಿನ ವಯೋಮಿತಿಯನ್ನು ಒಂದು ವರ್ಷದ ಮಟ್ಟಿಗೆ 23ವರ್ಷಗಳಿಗೆ ಹೆಚ್ಚಿಸಲಾಗಿದೆ.
ಈ ಯೋಜನೆಯನ್ನು ವಿರೋಧಿಸಿ ದೇಶದ ಅನೇಕ ಕಡೆ ಭಾರಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಯೋಮಿತಿಯನ್ನು ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿದೆ. ʼʼಕಳೆದ ಎರಡು ವರ್ಷ ಕೋವಿಡ್ -19 ಕಾರಣದಿಂದಾಗಿ ಸೇನಾ ನೇಮಕಾತಿ ರ‍್ಯಾಲಿ ನಡೆಸಲಾಗಿರಲಿಲ್ಲ. ಹೀಗಾಗಿ ಒಂದು ವರ್ಷದ ಮಟ್ಟಿಗೆ ವಯೋಮಿತಿಯನ್ನು ಹೆಚ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆʼʼ ಎಂದು ಕೇಂದ್ರ ಸರ್ಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಸಾಮಾನ್ಯ ಕರ್ತವ್ಯದ (ಜನರಲ್ ಡ್ಯೂಟಿ) ಸೈನಿಕ ಹುದ್ದೆಗಳಿಗೆ 17.5 ವರ್ಷದಿಂದ 21 ವರ್ಷದೊಳಗಿನವರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಕೆಲ ಸೈನಿಕ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 23 ವರ್ಷ ಎಂದು ನಿಗದಿಪಡಿಸಲಾಗಿತ್ತು. ಆದರೆ ಅಗ್ನಿಪಥ್ ಯೋಜನೆಯಲ್ಲಿ ಎಲ್ಲರಿಗೂ ಒಂದೇ ವಯೋಮಿತಿ ನಿಗದಿಪಡಿಸಲಾಗಿತ್ತು. ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ಮಾತ್ರ ಸೈನಿಕ ಹುದ್ದೆಗಳ ನೇಮಕಕ್ಕೆ ನಡೆಯುವ ರ‍್ಯಾಲಿಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಲಾಗಿತ್ತು.
ಆದರೆ ಈ ವರ್ಷ ನಡೆಯು ನೇಮಕದಲ್ಲಿ ವಯೋಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ. ಮುಂದಿನ ಮೂರು ತಿಂಗಳ ಒಳಗೆ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಈಗಾಗಲೇ ಪ್ರಕಟಿಸಿದೆ. ಸದ್ಯ 46 ಸಾವಿರ ಜನರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆಯಾದರೂ ಹುದ್ದೆಗಳ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆಗಳಿವೆ.
ನಾಲ್ಕು ವರ್ಷದ ನಂತರ ಮುಂದೇನು?
ಈ ಯೋಜನೆ ವಿರೋಧಿಸಿ ಪ್ರತಿಭಟೆ ಜೋರಾಗಿರುವ ಹಿನ್ನೆಲೆಯಲ್ಲಿ ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ಇರುವ ಅವಕಾಶಗಳ ಕುರಿತೂ ಕೇಂದ್ರ ಗುರುವಾರ ಮಾಹಿತಿ ನೀಡಿದೆ.
ಉದ್ಯೋಗ ಭದ್ರತೆಯ ಕುರಿತು ಅಭ್ಯರ್ಥಿಗಳು ಆತಂಕ ಪಡಬೇಕಾಗಿಲ್ಲ. ಸೇವೆ ಸಲ್ಲಿಸಿದ ಅಗ್ನಿವೀರರಿಗೆ ಸಿಎಪಿಎಫ್, ಅಸ್ಸಾಂ ರೈಫಲ್ಸ್ ಮತ್ತಿತರ ಅರೆಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವಾಗ ಆದ್ಯತೆ ನೀಡಲಾಗುತ್ತದೆ. ಅಲ್ಲದೆ ದೊಡ್ಡ ದೊಡ್ಡ ಕಂಪನಿಗಳೂ ನೇಮಕ ಮಾಡಿಕೊಳ್ಳುವಾಗ ಅಗ್ನಿವೀರರಗೆ ಆದ್ಯತೆ ನೀಡುವುದಾಗಿ ಈಗಾಗಲೇ ಪ್ರಕಟಿಸಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ|Agneepath | ನೀವೂ ʼಅಗ್ನಿಪಥ್ʼನಲ್ಲಿ ಸಾಗಿ ಸೇನೆ ಸೇರಬೇಕೇ? ನೇಮಕ ಹೇಗೆ ನಡೆಯುತ್ತದೆ ಗೊತ್ತೆ?