Site icon Vistara News

Agnipath : ಸೇನೆ ಸೇರಲು ಯುವಕರಿಗೆ ಸುವರ್ಣ ಅವಕಾಶ; ಅಗ್ನಿಪಥ್‌ ಯೋಜನೆಗೆ ಕೇಂದ್ರದ ಅನುಮೋದನೆ

Agnipath

ನವ ದೆಹಲಿ: ಕೇಂದ್ರ ಸರ್ಕಾರ ಇಂದಿನಿಂದ (ಜೂ.15) ಸಶಸ್ತ್ರ ಪಡೆಗಳಿಗಾಗಿ ಟೂರ್‌ ಆಫ್‌ ಡ್ಯೂಟಿ ಅಥವಾ ಅಗ್ನಿಪಥ್‌ ನೇಮಕಾತಿ ಯೋಜನೆಯನ್ನು ಪ್ರಾರಂಭಿಸಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಮತ್ತು ಕೇಂದ್ರ ಸಚಿವ ಸಂಪುಟ ಜಂಟಿಯಾಗಿ ಈ ಯೋಜನೆಗೆ ಅನುಮೋದನೆ ನೀಡಿದೆ. ಸೇನೆ ಸೇರಬೇಕೆಂಬ ಮಹದಾಸೆ ಇಟ್ಟುಕೊಂಡ ಯುವಜನರಿಗೆ ಇದೊಂದು ಸುವರ್ಣಾವಕಾಶ. ಅಗ್ನಿಪಥ್‌ ನೇಮಕಾತಿ ಯೋಜನೆಯಡಿ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ನೇಮಕ ಮಾಡಿಕೊಳ್ಳಲಾಗುವುದು. ಆ ನಾಲ್ಕು ವರ್ಷಗಳ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ, ವೃತ್ತಿಪರರು ಎನಿಸಿಕೊಂಡ ಶೇ.25ರಷ್ಟು ಅಗ್ನಿವೀರರು (ಅಗ್ನಿಪಥ್‌ ವಿಭಾಗಕ್ಕೆ ನೇಮಕಗೊಂಡು ಅಲ್ಲಿ ಕೆಲಸ ಮಾಡುವವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ) ಮಾತ್ರ ಸೇನೆಯಲ್ಲಿ ಶಾಶ್ವತ ಸೇವೆಗೆ ಅಂದರೆ 15 ವರ್ಷಗಳ ಸೇವೆಗೆ ಅರ್ಹರಾಗುತ್ತಾರೆ.

ಈ ಯೋಜನೆಯ ಅಧಿಕೃತ ಘೋಷಣೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ʼʼಅಗ್ನಿಪಥ್‌ ನೇಮಕಾತಿ ಯೋಜನೆ ಜಾರಿಗೆ ಬಂದರೆ ಸಾವಿರಾರು ಯುವಕರ ಸೇನೆ ಸೇರುವ ಆಸೆ ನೆರವೇರುತ್ತದೆ. ಈಗ ರಕ್ಷಣಾ ಬಜೆಟ್‌ನಲ್ಲಿ ಶೇ.50ರಷ್ಟು ಹಣ ಸೇನಾ ಸಿಬ್ಬಂದಿ ವೇತನ ಮತ್ತು ಪಿಂಚಣಿಗೆ ಹೋಗುತ್ತಿದೆ. ಇದನ್ನು ಕಡಿತಗೊಳಿಸಿ, ಉಳಿತಾಯದ ಹಣವನ್ನು ರಕ್ಷಣಾ ಕ್ಷೇತ್ರದ ಇನ್ನಿತರ ಸುಧಾರಣೆ, ಆಧುನೀಕರಣಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಈ ಟೂರ್‌ ಆಫ್‌ ಡ್ಯೂಟಿ ಅಥವಾ ಅಗ್ನಿಪಥ್‌ ನೇಮಕಾತಿ ಯೋಜನೆಯನ್ನು ಜಾರಿಗೊಳಿಸಲಾಗಿದೆʼʼ ಎಂದು ತಿಳಿಸಿದರು. ಅಗ್ನಿಪಥ್‌ ವಿಭಾಗಕ್ಕೆ ಸೇರುವವರ ಸೇವಾ ಅವಧಿ ನಾಲ್ಕು ವರ್ಷವಾಗಿರುತ್ತದೆ. ನಿವೃತ್ತರಾದ ಬಳಿಕ ಅವರಿಗೆ ಪಿಂಚಣಿ ನೀಡುವ ಅಗತ್ಯವಿರುವುದಿಲ್ಲ. ಹೀಗಾಗಿ ಸಹಜವಾಗಿಯೇ ಹಣ ಉಳಿತಾಯವಾಗುತ್ತದೆ ಎನ್ನುವುದು ಸರಕಾರದ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ₹ 76,390 ಕೋಟಿ ಬೆಲೆಯ ದೇಶಿ ತಯಾರಿಯ ರಕ್ಷಣಾ ಸಾಮಗ್ರಿ ಖರೀದಿ

ಸೇನೆಯಲ್ಲಿ ಅಗ್ನಿಪಥ್‌ ಯೋಜನೆಯಡಿ ನೇಮಕಗೊಳ್ಳಲು ಅರ್ಜಿ ಸಲ್ಲಿಸುವವರಿಗೆ ವಯಸ್ಸಿನ ಮಿತಿಯನ್ನು ನಿಗದಿಗೊಳಿಸಲಾಗಿದೆ. ಅದರ ಅನ್ವಯ 17.5 ಇಂದ 21 ವರ್ಷದವರೆಗಿನ ಆಸಕ್ತ ಯುವಕರು ಅರ್ಜಿ ಸಲ್ಲಿಸಬಹುದು. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ- ಈ ಮೂರು ವಿಭಾಗಗಳಲ್ಲಿ ಅವಕಾಶವಿದೆ. ಆಯಾ ಅಭ್ಯರ್ಥಿಯ ಆಸಕ್ತಿ, ಕೌಶಲದ ಆಧಾರದ ಮೇಲೆ, ಯಾವ ವಿಭಾಗಕ್ಕೆ ಸೂಕ್ತ ಎಂಬುದನ್ನು ನೋಡಿಕೊಂಡು ನೇಮಕ ಮಾಡಲಾಗುತ್ತದೆ. ತಿಂಗಳಿಗೆ 30-40 ಸಾವಿರ ರೂ. ವೇತನ ನೀಡಲಾಗುತ್ತದೆ. ಮಹಿಳೆಯರೂ ಅಗ್ನಿವೀರರಾಗಿ ಅರ್ಜಿ ಸಲ್ಲಿಸಬಹುದು.

ಅಗ್ನಿವೀರರು ಸೇನೆಯ ಮುಖ್ಯ ಯೋಧರು ಎಂದು ಎನಿಸಿಕೊಳ್ಳದೆ ಇದ್ದರೂ ಅವರೂ ಸಹ ಅಪಾಯವನ್ನು ಮೈಮೇಲೆ ಎಳೆದುಕೊಂಡೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಅವರು ಸೇವೆ ಸಲ್ಲಿಸುವ ನಾಲ್ಕು ವರ್ಷಗಳ ಅವಧಿಯಲ್ಲಿ ಅವರಿಗೆ ಆಕರ್ಷಕ ವೇತನದ ಜತೆ ಕಷ್ಟ ಪರಿಹಾರ ಭತ್ಯೆಯನ್ನು ನೀಡಲಾಗುತ್ತದೆ. ಕೊನೇದಾಗಿ ನಾಲ್ಕು ವರ್ಷಗಳ ಬಳಿಕ ಸೇವೆಯಿಂದ ನಿವೃತ್ತರಾಗುವ ವೇಳೆ ಅವರಿಗೆ ಸೇವಾ ನಿಧಿ ನೀಡಲಾಗುತ್ತದೆ. ಅಂದರೆ ಸೈನಿಕರ ಸಂಬಳದಲ್ಲಿ ಕಡಿತಗೊಂಡ ಹಣದಷ್ಟೇ ಮೊತ್ತವನ್ನು ಸರ್ಕಾರವೂ ನೀಡಿ ಅದನ್ನು ಸೇರಿಸಿ ಕೊಡಲಾಗುತ್ತದೆ. ಈಗ ಸುಮಾರು 1.25 ಲಕ್ಷ ಅಗ್ನಿವೀರರ ಅವಶ್ಯಕತೆ ಇದೆ. ಈ ಸಲ 46 ಸಾವಿರ ಜನರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಭಾರತೀಯ ನೌಕಾದಳ ವಿಶ್ವದಲ್ಲೇ ಅತ್ಯಂತ ಸಶಕ್ತ: ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್

Exit mobile version