Site icon Vistara News

Agnipath | ಅಗ್ನಿವೀರರ ನೇಮಕಕ್ಕೆ ರಾಜ್ಯದಲ್ಲಿ ನಡೆಯಲಿದೆ ನಾಲ್ಕು ರ‍್ಯಾಲಿ

Agnipath

ನವ ದೆಹಲಿಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್‌ʼ (Agnipath) ಅಡಿಯಲ್ಲಿ ಭಾರತೀಯ ಸೇನೆಯು ರ‍್ಯಾಲಿಗಳ ಮೂಲಕ ʼಅಗ್ನಿವೀರʼ ರನ್ನು (ಸೈನಿಕರನ್ನು) ನೇಮಿಸಿಕೊಳ್ಳಲಿದ್ದು, ಈ ವರ್ಷ ನಡೆಸಲಿರುವ ನೇಮಕಾತಿ ರ‍್ಯಾಲಿಗಳ ತಾತ್ಕಾಲಿಕ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.

ರಾಜ್ಯದಲ್ಲಿ ಒಟ್ಟು ನಾಲ್ಕು ಕಡೆ ನೇಮಕಾತಿ ರ‍್ಯಾಲಿಗಳನ್ನು ಆಯೋಜಿಸಲಾಗುತ್ತದೆ. ಬರುವ ಆಗಸ್ಟ್‌ನಿಂದಲೇ ರ‍್ಯಾಲಿಗಳು ಆರಂಭವಾಗಲಿವೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಭಾರತೀಯ ಸೇನೆಯು ತಿಳಿಸಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ನಡೆಯಲಿದೆ ರ‍್ಯಾಲಿ?

ಮೊದಲ ರ‍್ಯಾಲಿಯು ಆಗಸ್ಟ್‌ ೧೦ ರಿಂದ ೨೨ರವರೆಗೆ ಕೋಲಾರದಲ್ಲಿ ನಡೆಯಲಿದೆ. ಬೆಂಗಳೂರು (ನಗರ ಮತ್ತು ಗ್ರಾಮೀಣ), ಕೋಲಾರ, ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ಚಿತ್ರದುರ್ಗ, ಹಾಸನ, ಬಳ್ಳಾರಿ ಮತ್ತು ಹೊಸ ಜಿಲ್ಲೆ ವಿಜಯನಗರದ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.

ಹಾವೇರಿಯಲ್ಲಿ ಸೆಪ್ಟೆಂಬರ್‌ ೧ರಿಂದ ೨೦ರವರೆಗೆ ರ‍್ಯಾಲಿ ನಡೆಯಲಿದೆ. ಮಂಗಳೂರು ವಿಭಾಗೀಯ ಕಚೇರಿಯ ಅಡಿಯಲ್ಲಿ ನಡೆಯುವ ಈ ರ‍್ಯಾಲಿಯಲ್ಲಿ ಉತ್ತರಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬಾಗಲಕೋಟದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ತಾತ್ಕಾಲಿಕ ವೇಳಾಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು ವಿಭಾಗೀಯ ಕಚೇರಿಯ ಅಡಿಯಲ್ಲಿ ಮೂರನೇ ರ‍್ಯಾಲಿಯು ಬೆಂಗಳೂರಿನಲ್ಲಿಯೇ ನವೆಂಬರ್‌ ೧ ರಿಂದ ೩ರ ವರೆಗೆ ನಡೆಯಲಿದ್ದು, ಈ ರ‍್ಯಾಲಿಯಲ್ಲಿ ವಿಶೇಷವಾಗಿ ಮಹಿಳಾ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ರಾಜ್ಯದ ಅಭ್ಯರ್ಥಿಗಳು ಮಾತ್ರವಲ್ಲದೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಲಕ್ಷದ್ವೀಪ, ಅಂಡಮಾನ್‌ ಮತ್ತು ನಿಕೋಬಾರ್‌ನ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಬೆಳಗಾವಿಯ ವಿಭಾಗೀಯ ಕಚೇರಿಯ ಅಡಿಯಲ್ಲಿ ಬೀದರ್‌ನಲ್ಲಿ ಡಿಸೆಂಬರ್‌ ೫ ರಿಂದ ೨೨ರವರೆಗೆ ರ‍್ಯಾಲಿ ನಡೆಯಲಿದ್ದು, ಇದರಲ್ಲಿ ಬೆಳಗಾವಿ, ರಾಯಚೂರು, ಬೀದರ್‌, ಕೊಪ್ಪಳ, ಗದಗ ಮತ್ತು ಯಾದಗಿರಿಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಈ ರ‍್ಯಾಲಿಗಳಲ್ಲಿ ಭಾಗವಹಿಸಲು ಸೇನೆಯ ವೆಬ್‌ನಲ್ಲಿ ಮೊದಲೇ ಹೆಸರು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ರ‍್ಯಾಲಿಗಿಂತಲೂ ಮೊದಲೇ ಸೇನೆಯು ಅಧಿಕೃತ ವೆಬ್‌ನಲ್ಲಿ (https://joinindianarmy.nic.in/) ಈ ಕುರಿತು ಅಧಿಸೂಚನೆ ಪ್ರಕಟಿಸುತ್ತದೆ. ಆಗ ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೀಗೆ ಹೆಸರು ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಅವರ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತದೆ. ಇದರ ಪ್ರಿಂಟ್‌ ಔಟ್‌ ತಂದ ಅಭ್ಯರ್ಥಿಗಳಿಗೆ ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ| Agneepath | ಅಗ್ನಿವೀರರ ನೇಮಕ; ಸೇನಾ ರ‍್ಯಾಲಿಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ!

ಅಗ್ನಿಪಥ್‌ ಯೋಜನೆಯ ಕುರಿತು ಅಭ್ಯರ್ಥಿಗಳಿಗೆ ಏನಾದರೂ ಅನುಮಾನವಿದ್ದಲ್ಲಿ ಮೊಬೈಲ್‌ ನಂ: 9289914527ಗೆ ಕರೆ ಮಾಡಿ ಅಥವಾ ಇ-ಮೇಲ್‌ ವಿಳಾಸ : wm.joinindianarmy@ gov.in ಇಲ್ಲಿಗೆ ಮೇಲ್‌ ಮಾಡಿ ಮಾಹಿತಿ ಪಡೆದುಕೊಳ್ಳಬಹುದೆಂದು ಭಾರತೀಯ ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ವೆಬ್‌: https://joinindianarmy.nic.in

Exit mobile version