ಬೆಂಗಳೂರು: ಮಾರ್ಚ್ ೧೪ರಂದು ನಡೆದಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಆಯ್ಕೆ ಪರೀಕ್ಷೆಯ ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ೧೦ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಏನೇನಿದೆ ಎಂಬ ಬಗ್ಗೆ ವಿಸ್ತಾರ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಮಾಹಿತಿಗಳು ಲಭ್ಯವಾಗಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಈಗಾಗಲೇ ಕರ್ನಾಟಕ ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ. ಎಚ್. ನಾಗರಾಜ್ ಮತ್ತು ಅವರ ಪಿಎಚ್‌ಡಿ ವಿದ್ಯಾರ್ಥಿನಿ ಸೌಮ್ಯಾ ಅವರನ್ನು ಪ್ರಧಾನ ಆರೋಪಿಗಳೆಂದು ಗುರುತಿಸಲಾಗಿದೆ. ಮೈಸೂರು ವಿವಿಯಲ್ಲಿ ಭೂಗೋಳ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ. ಎಚ್. ನಾಗರಾಜ್ ಅವರನ್ನು ಕೆಲ ತಿಂಗಳ ಹಿಂದಷ್ಟೇ ಕರ್ನಾಟಕ ವಿವಿ ಕುಲಸಚಿವರಾಗಿ ನೇಮಕಗೊಂಡಿದ್ದರು. ಅವರ ಅನುಭವದ ಆಧಾರದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸುವ ಹೊಣೆಯನ್ನು ಅವರಿಗೆ ವಹಿಸಲಾಗಿತ್ತು.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಪ್ರಕರಣದ ಪ್ರಮುಖ ಆರೋಪಿ ಸೌಮ್ಯ, ಡಾಕ್ಟರ್ ನಾಗರಾಜ್, ಸೌಮ್ಯ ಗೆಳತಿ ಕುಸುಮಾ ಮತ್ತು ಕುಸುಮಾನ ಗೆಳೆಯ ಸೇರಿ ನಾಲ್ವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ. ಪ್ರಶ್ನೆ ಪತ್ರಿಕೆ ಹೇಗೆ ಸೋರಿಕೆ ಆಯಿತು ಎನ್ನುವ ಬಗ್ಗೆ ಉಲ್ಲೇಖಿಸಲಾಗಿದೆ.
ಆರೋಪಿ ಸೌಮ್ಯ ಪ್ರಾಧ್ಯಾಪಕ ಡಾ . ನಾಗರಾಜ್ ಬಳಿ ಪಿಎಚ್ ಡಿ ವಿದ್ಯಾರ್ಥಿಯಾಗಿರುತ್ತಾರೆ. ಡಾ ನಾಗರಾಜ್ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಯಾರಾಗಿದ್ದ ಪ್ರಶ್ನೆ ಪತ್ರಿಕೆಯ ಬಂಡಲ್ ಗಳಲ್ಲಿ ಮನೆಯಲ್ಲಿ ಇಟ್ಟಿದ್ದರು. ಸೌಮ್ಯ ಮನೆಯಲ್ಲಿದ್ದ ಪ್ರಶ್ನೆ ಪತ್ರಿಕೆಗಳ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ತಾನು ಓದಿಕೊಂಡಿದ್ದಲ್ಲದೆ ತನ್ನೊಬ್ಬ ಗೆಳತಿಗೂ ಚಿತ್ರ ತೆಗೆದು ಸೆಂಡ್ ಮಾಡಿದ್ದಾರೆ. ಆಕೆ ಅವಳ ಗೆಳೆಯನಿಗೆ ಫಾರ್ವರ್ಡ್ ಮಾಡಿದ್ದಳು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ನಿಜವೆಂದರೆ ಆ ಯುವಕ ಈ ಪ್ರಶ್ನೆ ಪತ್ರಿಕೆ ಕಡೆ ಅಷ್ಟೆಲ್ಲ ಗಮನ ಕೊಟ್ಟಿಲ್ಲ. ಆದರೆ, ಪರೀಕ್ಷೆ ಬರೆದು ಹೊರಬಂದ ಅವನಿಗೆ ಶಾಕ್ ಕಾದಿರುತ್ತದೆ. ಸೌಮ್ಯಳ ಗೆಳತಿ ಕುಸುಮಾ ಕಳುಹಿಸಿಕೊಟ್ಟಿದ್ದ ಪತ್ರಿಕೆಯಲ್ಲಿ 18 ಪ್ರಶ್ನೆಗಳು ಬಂದಿದ್ದವು. ಇದರಿಂದ ಸಿಟ್ಟಿಗೆದ್ದ ಆತ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ತಕರಾರು ಎತ್ತಿದ್ದ. ಈತನಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕೆಇಎಗೆ ಗೊತ್ತಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.