ಬೆಂಗಳೂರು: ರಾಜ್ಯದ ಅರಣ್ಯ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ACF), ವಲಯ ಅರಣ್ಯಾಧಿಕಾರಿ (RFO) ಮತ್ತು ಉಪ ವಲಯ ಅರಣ್ಯ ಅಧಿಕಾರಿ (DRFO) ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಸದಸ್ಯ ಗೋಪಾಲಕೃಷ್ಣ ಬೇಳೂರು ಅವರ ಪ್ರಶ್ನೆಗೆ ಲಿಖಿತವಾಗಿ ಉತ್ತರ ಲಭಿಸಿದ್ದು, ಬಾಕಿ ಉಳಿದಿರುವ ಹುದ್ದೆಗಳನ್ನು ಅರಣ್ಯ ಇಲಾಖೆ ಹೊರತಾಗಿ ವಿವಿಧ ಇಲಾಖೆ / ಸಂಸ್ಥೆಗಳ ಮೂಲಕ ಭರ್ತಿ ಮಾಡಬೇಕಾಗಿದೆ ಎಂದು ತಿಳಿಸಲಾಗಿದೆ (Belagavi Winter Session).
ಎಷ್ಟು ಹುದ್ದೆ ಖಾಲಿ?
231 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಮಂಜೂರಾಗಿದ್ದು, ಆ ಪೈಕಿ 156 ಹುದ್ದೆ ಭರ್ತಿಯಾಗಿದೆ. 75 ಖಾಲಿ ಉಳಿದಿದೆ. 785 ವಲಯ ಅರಣ್ಯಾಧಿಕಾರಿ ಹುದ್ದೆ ಮಂಜಾರಾಗಿದ್ದು, 671 ಭರ್ತಿಯಾಗಿ ಇನ್ನೂ 114 ಹುದ್ದೆ ಬಾಕಿ ಉಳಿದಿದೆ. ಇನ್ನು 3,008 ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳ ಪೈಕಿ 1,919 ಹುದ್ದೆ ಭರ್ತಿಯಾಗಿದ್ದು 1,089 ಹುದ್ದೆ ಬಾಕಿ ಇದೆ. ಈ ಕುರಿತು ಗೋಪಾಲಕೃಷ್ಣ ಬೇಳೂರು ಗಮನ ಸೆಳೆದಿದ್ದರು.
ಲಿಖಿತ ಉತ್ತರದಲ್ಲೇನಿದೆ?
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೃಂದದಲ್ಲಿ ಒಟ್ಟು ಮಂಜೂರಾದ 231 ಹುದ್ದೆಗಳ ಪೈಕಿ 161 ಹುದ್ದೆಗಳು ಮಾತ್ರ ಅರಣ್ಯ ಇಲಾಖೆಯಲ್ಲಿದ್ದು, ಉಳಿದ ಹುದ್ದೆಗಳನ್ನು ವಿವಿಧ ಇಲಾಖೆ / ಸಂಸ್ಥೆಗಳು ನಿಯೋಜನೆ ಮಾಡಬೇಕಿದೆ. ಒಟ್ಟು ಮಂಜೂರಾದ 785 ವಲಯ ಅರಣ್ಯಾಧಿಕಾರಿ ಹುದ್ದೆಗಳ ಪೈಕಿ ಅರಣ್ಯ ಇಲಾಖೆಯಲ್ಲಿ 538 ಹುದ್ದೆಗಳು ಮಾತ್ರ ಇದ್ದು, ಉಳಿದ ಹುದ್ದೆಗಳು ವಿವಿಧ ಇಲಾಖೆ / ಸಂಸ್ಥೆಗಳಿಗೆ ಒಳಪಟ್ಟಿವೆ. ಇನ್ನು 3,008 ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳ ಪೈಕಿ 2,747 ಹುದ್ದೆಗಳು ಮಾತ್ರ ಅರಣ್ಯ ಇಲಾಖೆಯಲ್ಲಿದ್ದು, ಉಳಿದ ಹುದ್ದೆಗಳನ್ನು ವಿವಿಧ ಇಲಾಖೆ / ಸಂಸ್ಥೆ ಭರ್ತಿ ಮಾಡಬೇಕಿದೆ ಎಂದು ಸ್ಪಷ್ಟ ಪಡಿಸಲಾಗಿದೆ.
ಕೈಗೊಂಡ ಕ್ರಮಗಳು
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ. ಆ ಬಗೆಗಿನ ವಿವರ ಇಲ್ಲಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
24 ಉಳಿಕೆ ಮೂಲ ವೃಂದದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ನೇರ ನೇಮಕಾತಿ ಮೂಲಕ ಆಯ್ಕೆಯಾಗಿದ್ದು, ಪ್ರಸ್ತುತ ತರಬೇತಿಯಲ್ಲಿದ್ದಾರೆ. ಇನ್ನು ಉಳಿದ 16 ಮೂಲ ವೃಂದದ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ವಲಯ ಅರಣ್ಯಾಧಿಕಾರಿ
2022-23ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ವಲಯ ಅರಣ್ಯಾಧಿಕಾರಿ ವೃಂದದ ನೇರ ನೇಮಕಾತಿಯಂತೆ 10 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಜತೆಗೆ 26 ಹುದ್ದೆಗಳ ಭರ್ತಿಯ ಪ್ರಸ್ತಾವ ಪರಿಶೀಲನೆ ಹಂತದಲ್ಲಿದೆ.
ಉಪ ವಲಯ ಅರಣ್ಯಾಧಿಕಾರಿ
143 ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಸೂಚಿಸಲಾಗಿದೆ ಎಂದು ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Holiday List 2024: ಈ ವರ್ಷ ಸರ್ಕಾರಿ ನೌಕರರಿಗೆ ಪರಿಮಿತ ರಜೆಗಳೆಷ್ಟು? ಇಲ್ಲಿದೆ ಪಟ್ಟಿ