ಬೆಂಗಳೂರು: ಬೆಂಗಳೂರಿನ ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ (NSure) ಭಾರತದಲ್ಲಿ ಲಿಥಿಯಂ-ಅಯಾನ್ ಸೆಲ್ ತಯಾರಕರ ಸಾಲಿಗೆ ಸೇರಲಿದೆ. ಬೆಂಗಳೂರಿನ ಸಮೀಪದ ಮಾಲೂರು ಘಟಕದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ.
ಎನ್‌ಶ್ಯೂರ್‌ನ ಸ್ಥಾಪಕ ಮತ್ತು ಸಿಇಒ ಆಗಿರುವ ಚಂದ್ರಕಾಂತ್ ರಾಮಲಿಂಗಂ ಈ ಘಟಕಕ್ಕಾಗಿ 1,050 ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಸುಮಾರು 80 ಎಕರೆ ಜಾಗದಲ್ಲಿ ಘಟಕವನ್ನು ಸ್ಥಾಪಿಸುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ, ಇವಿ ಹಬ್ ಆಗಲಿರುವ ಮಾಲೂರಿನಲ್ಲಿ ಪೂರ್ಣ ಪ್ರಮಾಣದ ಉತ್ಪಾದನಾ ಘಟಕ ಆರಂಭವಾಗಲಿದೆ. ಈ ಘಟಕವು ಎಲ್‌ಇಪಿ ಸೆಲ್‌ಗಳ 1.0 GWh ಸಾಮರ್ಥ್ಯ ಹೊಂದಿದೆ. ಮುಂದಿನ ಹಂತದಲ್ಲಿ ಈ ಫ್ಯಾಕ್ಟರಿಯನ್ನು 5 GWh ಅಥವಾ ಇದಕ್ಕೂ ಹೆಚ್ಚು ಸಾಮರ್ಥ್ಯಕ್ಕೆ ವಿಸ್ತರಿಸುವ ಅವಕಾಶವೂ ಇದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ, ಪರಿಸರವಾದಿಗಳು ಉತ್ತೇಜನ ನೀಡುತ್ತಿದ್ದರೂ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ಶಕ್ತಿ, ದೀರ್ಘಾವಧಿಯ ಬಾಳಿಕೆ ಹಾಗೂ ಸುರಕ್ಷತೆ ಕುರಿತು ಜನಸಾಮಾನ್ಯರಲ್ಲಿ ಇನ್ನೂ ಅನುಮಾನ ಇದೆ. ಇದಕ್ಕೆ ಪರಿಹಾರವಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಹಾಗೂ ಸುರಕ್ಷಿತವಾದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಎನ್‌ಶ್ಯೂರ್ ಪರಿಚಯಿಸಲು ಮುಂದಾಗಿದೆ. ಈ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹಲವಾರು ರೀತಿಯಲ್ಲಿ ಬಳಸಬಹುದು.
ಇದನ್ನೂ ಓದಿ: TMB Recruitment 2023: ಬ್ಯಾಂಕ್ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್; ಆಫೀಸರ್, ಪ್ರೊಬೆಷನರಿ ಕ್ಲರ್ಕ್ ಹುದ್ದೆಗಳಿವೆ!
ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯ ಅನುಮೋದನೆ ಪಡೆದಿರುವ ಕಂಪನಿಗಳಲ್ಲಿ ಎನ್‌ಶ್ಯೂರ್ ಮುಂಚೂಣಿ ಸ್ಥಾನ ಪಡೆದಿದೆ. “ಎನ್‌ಶ್ಯೂರ್‌ನ ಪೂರ್ಣ ಪ್ರಮಾಣದಲ್ಲಿ ಅಯಾನ್ ಸೆಲ್ ಉತ್ಪಾದನಾ ಪ್ರಾಯೋಗಿಕ ಘಟಕವು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಕಾರ್ಯಾರಂಭಿಸಲು ಯೋಜಿಸಲಾಗಿದೆ” ಎಂದು ಚಂದ್ರಕಾಂತ್ ರಾಮಲಿಂಗಂ ತಿಳಿಸಿದ್ದಾರೆ.
ಎನ್‌ಶ್ಯೂರ್ ದೇಶೀಯವಾಗಿ ಅಥವಾ ಸ್ಥಳೀಯವಾಗಿ ಉತ್ಪಾದಿಸಲು ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆತ್ಮನಿರ್ಭರ ಭಾರತದ ಆಶಯಕ್ಕೆ ಪೂರಕವಾಗಿ, ಎನ್‌ಶ್ಯೂರ್ ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿಯ International Advanced Research Centre for Powder Metallurgy and New Materials (ARCI) ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ವದೇಶಿತನವನ್ನು ಬೆಂಬಲಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ವರ್ಗಾವಣೆ ಮತ್ತು ತರಬೇತಿಗಾಗಿ ಈ ಒಪ್ಪಂದ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಉಷ್ಣ ಸ್ಥಿರತೆಗೆ ಎಲ್‌ಇಪಿ (LEP) ಕೆಮಿಸ್ಟ್ರಿ ಆಯ್ಕೆ
ಆಸಕ್ತಿಯ ವಿಷಯವೆಂದರೆ, ಎನ್‌ಶ್ಯೂರ್ ಕಂಪನಿಯು ಎನ್‌ಎಂಸಿ ಮತ್ತಿತರ ಕೆಮಿಸ್ಟ್ರಿಗಳ ಬದಲು, ಎಲ್‌ಇಪಿ ಕೆಮಿಸ್ಟ್ರಿಯನ್ನು ತನ್ನ ತಂತ್ರಜ್ಞಾನಕ್ಕಾಗಿ ಆಯ್ಕೆ ಮಾಡಿಕೊಂಡಿದೆ. ಇದು ಹೆಚ್ಚು ಉಷ್ಣ ಸ್ಥಿರತೆಯನ್ನು ನೀಡುತ್ತದೆ. ಜತೆಗೆ ಹೆಚ್ಚು ಸುರಕ್ಷತೆ, ದೀರ್ಘ ಬಾಳಿಕೆ, ಕೈಗೆಟುಕುವ ದರ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಉಷ್ಣವಲಯದ ಹವಾಮಾನಕ್ಕೆ ಸೂಕ್ತವಾಗಿರಲಿದೆ.
ಅಗ್ನಿ ಅವಘಡ ಕಡಿಮೆ
ಉತ್ಪನ್ನದ ಸೆಲ್‌ಗಳು ನಿಕಲ್ ಅಥವಾ ಕೋಬಾಲ್ಟ್‌ನಂತಹ ಅಪರೂಪದ ಲೋಹಗಳನ್ನು ಹೊಂದಿಲ್ಲ. ಇದು ಅಗ್ನಿ ಅವಘಡದ ಅನಾಹುತದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಪರಿಸರದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಿಲ್ಲ. ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ವಿವಿಧ ರೀತಿಯ ಬಳಕೆಗೆ ಆಗುವಂತೆ ಲಿ-ಅಯಾನ್ ಸೆಲ್‌ಗಳನ್ನು ತಯಾರಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ನೀಡಿದ್ದೇವೆ ಎಂದು ಚಂದ್ರಕಾಂತ್ ರಾಮಲಿಂಗಂ ಮಾಹಿತಿ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ