ಬೆಂಗಳೂರು: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತವಾದರೂ ಭಾರತದಲ್ಲಿ ಮಾತ್ರ ಜಿಡಿಪಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲೂ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ ಎಂದು ವಿತ್ತೀಯ ತಜ್ಞರು ತಿಳಿಸಿದ್ದಾರೆ. ಹೀಗಿದ್ದರೂ, ಪ್ರಮುಖ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದು ಆತಂಕ ಮೂಡಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಆನ್‌ಲೈನ್ ಶಿಕ್ಷಣ ಸಂಸ್ಥೆ ಬೈಜೂಸ್ (BYJU’s Layoffs) ಈಗ ಒಂದು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಕಂಪನಿಗೆ ಆಗುತ್ತಿರುವ ವೆಚ್ಚವನ್ನು ತಗ್ಗಿಸಲು ಮುಂದಿನ ಆರು ತಿಂಗಳಲ್ಲಿ ಒಂದು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಬೈಜೂಸ್ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಇದರಿಂದ ಕಂಪನಿಯ ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಹೆಚ್ಚಿನ ಜನ ಉದ್ಯೋಗ ಕಳೆದುಕೊಂಡು ತೊಂದರೆ ಅನುಭವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಇರುವ ಬೈಜೂಸ್‌ನ 280 ಟ್ಯೂಷನ್ ಸೆಂಟರ್‌ಗಳಲ್ಲಿರುವ ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಉದ್ಯೋಗಿಗಳನ್ನು ವಜಾಗೊಳಿಸುವಂತೆ ಮ್ಯಾನೇಜರ್‌ಗಳಿಗೆ ಕಂಪನಿಯ ಆಡಳಿತ ಮಂಡಳಿ ಸೂಚಿಸಿದೆ. ಅಷ್ಟೇ ಅಲ್ಲ, 150 ಮಾರ್ಕೆಟಿಂಗ್ ಮ್ಯಾನೇಜರ್‌ಗಳಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತಿದೆ. ವಜಾಗೊಳ್ಳುವ ನೌಕರರಿಗೆ ಕಂಪನಿಯು ಎರಡು ತಿಂಗಳ ವೇತನ ನೀಡಲಿದೆ ಎಂದು ತಿಳಿದುಬಂದಿದೆ. ಇನ್ನು, ವಜಾಗೊಳಿಸುವ ಕುರಿತು ಸುದ್ದಿಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ಒಂದಷ್ಟು ಸೀನಿಯರ್ ಮ್ಯಾನೇಜರ್‌ಗಳು, ಅಸಿಸ್ಟಂಟ್ ಜನರಲ್ ಮ್ಯಾನೇಜರ್‌ಗಳು ಈಗಾಗಲೇ ಕೆಲಸ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
ಬೈಜೂಸ್ ಕಂಪನಿಯು ನಾಲ್ಕು ತಿಂಗಳ ಹಿಂದೆಯೂ ಒಂದು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿತ್ತು. 2022ರ ಅಕ್ಟೋಬರ್‌ನಲ್ಲಂತೂ 2,500 ನೌಕರರನ್ನು ಕಂಪನಿಯು ಮನೆಗೆ ಕಳುಹಿಸಿತ್ತು. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮದ ಭೀತಿಯಿಂದ ಮೈಕ್ರೋಸಾಫ್ಟ್, ಟ್ವಿಟರ್, ಮೆಟಾ ಸೇರಿ ಈಗಾಗಲೇ ಜಾಗತಿಕ ಮಟ್ಟದ ಕಂಪನಿಗಳೇ ಸಾವಿರಾರು ಜನರ ನೌಕರಿಗೆ ಕತ್ತರಿ ಹಾಕಿವೆ.
ಇ.ಡಿ ದಾಳಿ ನಡೆಸಿತ್ತು
ಜಾರಿ ನಿರ್ದೇಶನಾಲಯಕ್ಕೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ಎಜುಟೆಕ್ ಕಂಪೆನಿ ಆಗಿರುವ ಬೈಜೂಸ್ ಸಂಸ್ಥೆಯ ಮೇಲೆ ಇ.ಡಿ. ದಾಳಿ ನಡೆಸಿತ್ತು. ಬೈಜೂಸ್ ಸಂಸ್ಥೆಯ ಮಾಲೀಕ ಬೈಜು ರವೀಂದ್ರನ್ ಅವರ ಬೆಂಗಳೂರಿನಲ್ಲಿರುವ ಮನೆ ಹಾಗೂ 2 ಕಚೇರಿಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಮಾಡಿರುವ ಆರೋಪದಡಿ ಈ ದಾಳಿ ನಡೆದಿದ್ದು, ಡಿಜಿಟಲ್ ಡೇಟಾ ಹಾಗೂ ಕೆಲ ದಾಖಲೆಗಳು ಪತ್ತೆ ಆಗಿದ್ದವು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Meta Layoffs : ಭಾರತದಲ್ಲೂ ಫೇಸ್‌ಬುಕ್ ಜನಪ್ರಿಯತೆ ಕುಸಿಯುತ್ತಿದೆಯೇ?! ಪ್ರಮುಖರಿಗೆ ಕಂಪನಿಯ ಗೇಟ್‌ಪಾಸ್