Site icon Vistara News

Eklavya Recruitment: ಕೇಂದ್ರದಿಂದ ಬಂಪರ್‌ ಜಾಬ್ಸ್;‌ ಶೀಘ್ರವೇ ಏಕಲವ್ಯ ಶಾಲೆಗಳಿಗೆ 38 ಸಾವಿರ ಶಿಕ್ಷಕರ ನೇಮಕ

EMRS Recruitment 2023

Centre to recruit 38,800 teachers for Eklavya model schools

ನವದೆಹಲಿ: ಶಿಕ್ಷಕರಾಗುವ ಆಕಾಂಕ್ಷೆಯಿಂದ ಪರೀಕ್ಷೆಗೆ ಸಿದ್ಧರಾಗುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ (EMRS) 38,800 ಶಿಕ್ಷಕರು ಸೇರಿ ಇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು (Eklavya Recruitment) ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್‌ ಮುಂಡಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮುಂದಿನ ಮೂರು ವರ್ಷದಲ್ಲಿ 38,800 ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಬುಡಕಟ್ಟು ಸಮುದಾಯದ ಮಕ್ಕಳಿಗಾಗಿ 1997-98ರಲ್ಲಿ ದೇಶಾದ್ಯಂತ ಏಕಲವ್ಯ ಶಾಲೆಗಳನ್ನು ನಿರ್ಮಿಸಲಾಗಿದೆ.

“ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಏಕಲವ್ಯ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ದೇಶಾದ್ಯಂತ 2013-14ರಲ್ಲಿ 119 ಏಕಲವ್ಯ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಅವುಗಳ ಸಂಖ್ಯೆಯನ್ನು 401ಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ, 2013-14ರಲ್ಲಿ ಏಕಲವ್ಯ ಶಾಲೆಗಳಿಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 34,365 ಇತ್ತು. 2023-24ರಲ್ಲಿ ಅದು 1.13 ಲಕ್ಷಕ್ಕೆ ಏರಿಕೆಯಾಗಿದೆ” ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Industries: ಕೈಗಾರಿಕಾ ಇಲಾಖೆಗೆ ಅರಣ್ಯ ಸೇವೆ ಅಧಿಕಾರಿ ನೇಮಕ: ಉದ್ಯಮಿಗಳಿಗೆ ಸರ್ಕಾರದ ಭರವಸೆ

ಕೇಂದ್ರ ಸರ್ಕಾರವು 2019ರಲ್ಲಿ ಹೊಸ ಯೋಜನೆ ಜಾರಿಗೊಳಿಸಿದಂತೆ 2011ರ ಜನಗಣತಿ ಅನ್ವಯ ದೇಶಾದ್ಯಂತ ಪ್ರತಿಯೊಂದು ಘಟಕದಲ್ಲಿ ಶೇ.50ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಜನ ಪರಿಶಿಷ್ಟ ಪಂಗಡದವರಿದ್ದರೆ ಅಥವಾ 20 ಸಾವಿರ ಜನ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ, ಅಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಹಾಗೆಯೇ, ಕೇಂದ್ರ ಸರ್ಕಾರವು 2025-26ರ ವೇಳೆಗೆ 740 ಬ್ಲಾಕ್‌ಗಳಲ್ಲಿ ಏಕಲವ್ಯ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಹಾಗೆಯೇ, ಸುಮಾರು 3.5 ಲಕ್ಷ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ” ಎಂದು ವಿವರಿಸಿದರು.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version