ಬೆಂಗಳೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (ಸಿಆರ್‌ಪಿಎಫ್) 9,212 ಕಾನ್ಸ್‌ಟೇಬಲ್ (ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್) ನೇಮಕಕ್ಕೆ ಅಧಿಸೂಚನೆ (CRPF Recruitment 2023) ಹೊರಡಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ರಾಜ್ಯವಾರು ಖಾಲಿ ಇರುವ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ನಮ್ಮ ರಾಜ್ಯದಲ್ಲಿ ಪುರುಷ ಅಭ್ಯರ್ಥಿಗಳಿಗೆ 460 ಹುದ್ದೆಗಳು ಹಾಗೂ ಮಹಿಳೆಯರಿಗೆ 6 ಹುದ್ದೆಗಳಿವೆ. ಆದರೆ ಈ ಹುದ್ದೆಗಳ ನೇಮಕಕ್ಕೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿರುವ ಖಾಲಿ ಹುದ್ದೆಗಳಿಗೂ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಅಭ್ಯರ್ಥಿಗಳು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ʻʻನಮ್ಮ ರಾಜ್ಯದಲ್ಲಿರುವ ಹುದ್ದೆಗಳಿಗೆ ಹಿಂದಿಯಲ್ಲಿ, ಇಂಗ್ಲಿಷ್‌ನಲ್ಲಿ ಏಕೆ ಪರೀಕ್ಷೆ ನಡೆಸಬೇಕುʼʼ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಜತೆಗೆ ಹಿಂದಿಯ ಬದಲು ಕನ್ನಡದಲ್ಲಿ ಪರೀಕ್ಷೆ ನಡೆಸಿ ಎಂದು ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿರುವ ಹುದ್ದೆಗಳ ಮಾಹಿತಿ;
ಬಹುತೇಕ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಕೆಲವು ಹುದ್ದೆಗಳಿಗೆ ಮಾತ್ರ ದ್ವಿತೀಯ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಇವರಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸಿದರೆ ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ. ಹಿಂದಿಯಲ್ಲಿ ಪರೀಕ್ಷೆ ಬರೆಯಬಲ್ಲ ಉತ್ತರ ಭಾರತೀಯರಿಗೆ ಇದರಿಂದ ಲಾಭವಾಗಲಿದೆ ಎಂದು ಅವರುಗಳು ದೂರಿದ್ದಾರೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯು ಮುಂದಿನ ಜುಲೈ 1ರಿಂದ 13ರ ವರೆಗೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಅರ್ಹತಾ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ವೃತ್ತಿ ಪರೀಕ್ಷೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ನೇಮಕದ ಸಂಪೂರ್ಣ ಮಾಹಿತಿಗೆ ಇಲ್ಲಿ ಓದಿ : CRPF Recruitment 2023 : ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು
ಈ ಪರೀಕ್ಷೆಯು ನೂರು ಅಂಕಗಳಿಗೆ ನಡೆಯಲಿದ್ದು, ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸಿದರೂ, ಹಿಂದಿ/ಇಂಗ್ಲಿಷ್ ತಿಳಿದಿರುವ ಕುರಿತು ಮತ್ತೊಂದು ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಹೀಗಾಗಿ ಹಿಂದಿ ಅಥವಾ ಇಂಗ್ಲಿಷ್ ಬಾರದೇ ಇರುವ ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆಯುವ ಸಾಧ್ಯತೆಯೇ ಇಲ್ಲ. ಇದರಿಂದ ಪ್ರಾದೇಶಿಕ ಭಾಷೆಯೊಂದನ್ನೇ ಬಲ್ಲ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://crpf.gov.in/
ಸಹಾಯವಾಣಿ ಸಂಖ್ಯೆ: 02261087529
ಇದನ್ನೂ ಓದಿ: Agneepath Recruitment 2022 | ಅಗ್ನಿಪಥ್ ಮೂಲಕ ನೇಮಕ; ಕನ್ನಡದಲ್ಲಿ ನಡೆಯೋಲ್ಲ ನೇಮಕಾತಿ ಪರೀಕ್ಷೆ