ನವ ದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿನ (ಸಿಆರ್‌ಪಿಎಫ್) 1.30 ಲಕ್ಷ ಕಾನ್ಸ್‌ಟೇಬಲ್ ( ಜನರಲ್ ಡ್ಯೂಟಿ/ ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್) ನೇಮಕ ಮಾಡಿಕೊಳ್ಳಲಾಗುವುದು ಎಂದು (CRPF Recruitment 2023) ಗೃಹ ಸಚಿವಾಲಯವು ಪ್ರಕಟಿಸಿದೆ. ಈ ಸಂಬಂಧ ಸದ್ಯವೇ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗುತ್ತದೆ.
ಇದು ಗ್ರೂಪ್ ʻಸಿʼಯ ಹುದ್ದೆಗಳಾಗಿದ್ದು, ಗೃಹ ಸಚಿವಾಲಯವು ಈ ಸಂಬಂಧ ಏಪ್ರಿಲ್ 5 ರಂದು ಅಧಿಸೂಚನೆ ಹೊರಡಿಸಿದೆ. ಒಟ್ಟು 1,29,929 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಇದರಲ್ಲಿ 1,25,262 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಮೀಸಲಾಗಿದ್ದರೆ, 4,667 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,700 – 69,100. ವೇತನ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ಗಮನಿಸಿ: ಈ ನೇಮಕ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕೇವಲ ಗೃಹ ಸಚಿವಾಲಯ ಅಧಿಸೂಚನೆ ಮಾತ್ರ ಹೊರಡಿಸಿದೆ. ನೇಮಕಾತಿ ಅಧಿಸೂಚನೆಯನ್ನು ಮುಂದೆ ಸಿಆರ್‌ಪಿಎಫ್ ಹೊರಡಿಸಲಿದ್ದು, ಅರ್ಜಿ ಸಲ್ಲಿಕೆಯ ಕುರಿತು ಸಂಪೂರ್ಣ ಮಾಹಿತಿ ಒದಗಿಸಲಿದೆ.
ಗೃಹ ಸಚಿವಾಲಯದ ಅಧಿಸೂಚನೆ ಇಲ್ಲಿದೆ;
ಅರ್ಹತೆಗಳೇನು?
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದವರು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
21 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಈ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗಿರುತ್ತದೆ. ಮಾಜಿ ಅಗ್ನಿವೀರರಿಗೂ ವಯೋಮಿತಿಯಲ್ಲಿ ಐದು ವರ್ಷ ಸಡಿಲಿಕೆ ಇರುತ್ತದೆ.
ಪುರುಷ ಅಭ್ಯರ್ಥಿಗಳು 170 ಸೆಂ.ಮೀ. ಎತ್ತರವಿರಬೇಕು. ಎದೆಯ ಸುತ್ತಳತೆ 80 ಸೆಂ.ಮೀ. ಹೊಂದಿರಬೇಕು. ಮಹಿಳಾ ಅಭ್ಯರ್ಥಿಗಳು 157 ಸೆಂ.ಮೀ. ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕಾದದು ಅವಶ್ಯಕ. ಮಾಜಿ ಅಗ್ನಿವೀರರಿಗೆ ದೈಹಿಕ ಪರೀಕ್ಷೆ ನಡೆಸಲಾಗುವುದಿಲ್ಲ. ಒಟ್ಟು ಹುದ್ದೆಗಳಲ್ಲಿ ಶೇ.10 ರಷ್ಟು ಹುದ್ದೆಗಳನ್ನು ಮಾಜಿ ಅಗ್ನಿವೀರರಿಗೆ ಮೀಸಲಿಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ?
ಸಾಮಾನ್ಯ, ಇಡಬ್ಲ್ಯುಎಸ್ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ನೋಡುತ್ತಿರಬೇಕಾದ ವೆಬ್‌ಸೈಟ್: https://crpf.gov.in/
ಸಹಾಯವಾಣಿ ಸಂಖ್ಯೆ: 02261087529
ನೇಮಕ ಹೇಗೆ ನಡೆಯಲಿದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಅರ್ಹತಾ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ವೃತ್ತಿ ಪರೀಕ್ಷೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಯು ನೂರು ಅಂಕಗಳಿಗೆ ನಡೆಯಲಿದ್ದು, ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಹಿಂದಿ/ ಇಂಗ್ಲಿಷ್ ತಿಳಿದಿರುವ ಕುರಿತು ಪರೀಕ್ಷೆ ಕೂಡ ನಡೆಸಲಾಗುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ರಾಜ್ಯದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಪುತ್ತೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿಯಲ್ಲಿ ನಡೆಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: CRPF Recruitment 2023 : ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು