Site icon Vistara News

CRPF Recruitment 2023 : ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆ; ರಾಜ್ಯದಲ್ಲಿಯೂ 466 ಹುದ್ದೆಗಳಿಗೆ ನೇಮಕ

CRPF Recruitment 2023 notification for 9212 constable posts details in kannada

crpf

ನವ ದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (ಸಿಆರ್‌ಪಿಎಫ್‌) 9,212 ಕಾನ್ಸ್‌ಟೇಬಲ್‌ (ಟೆಕ್ನಿಕಲ್‌ ಮತ್ತು ಟ್ರೇಡ್ಸ್‌ಮನ್‌) ನೇಮಕಕ್ಕೆ ಅಧಿಸೂಚನೆ (CRPF Recruitment 2023) ಹೊರಡಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್‌ 27 ರಿಂದ ಏಪ್ರಿಲ್‌ 24 ರವರೆಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಒಟ್ಟು 9,212 ಹುದ್ದೆಗಳ ಪೈಕಿ 9,105 ಹುದ್ದೆಗಳು ಪುರುಷರಿಗೆ ಮೀಸಲಾಗಿದ್ದರೆ, 107 ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಶ್ರೇಣಿ: ರೂ. 21,700 – 69,100. ನಂತೆ ವೇತನ ನೀಡಲಾಗುತ್ತದೆ.

ಈ ಹುದ್ದೆಗಳು ರಾಜ್ಯವಾರು ಹಂಚಿಕೆಯಾಗಿದ್ದು, ರಾಜ್ಯದಲ್ಲಿ ಪುರುಷ ಅಭ್ಯರ್ಥಿಗಳಿಗೆ 460 ಹುದ್ದೆಗಳು ಹಾಗೂ ಮಹಿಳೆಯರಿಗೆ 6 ಹುದ್ದೆಗಳಿವೆ. ಹುದ್ದೆಗಳ ಹಂಚಿಕೆಯ ಮಾಹಿತಿ ಇಲ್ಲಿದೆ;

ಅರ್ಹತೆಗಳೇನು?

ಬಹುತೇಕ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಕೆಲವು ಹುದ್ದೆಗಳಿಗೆ ಮಾತ್ರ ದ್ವಿತೀಯ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

21 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಈ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಯೋಮಿತಿಯನ್ನು ದಿನಾಂಕ 01/08/2023 ಕ್ಕೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗಿರುತ್ತದೆ.

ಪುರುಷ ಅಭ್ಯರ್ಥಿಗಳು 170 ಸೆಂ.ಮೀ. ಎತ್ತರವಿರಬೇಕು. ಎದೆಯ ಸುತ್ತಳತೆ 80 ಸೆಂ.ಮೀ. ಹೊಂದಿರಬೇಕು. ಮಹಿಳಾ ಅಭ್ಯರ್ಥಿಗಳು 157 ಸೆಂ.ಮೀ. ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕಾದದು ಅವಶ್ಯಕ.

ನೇಮಕಾತಿಯ ವೇಳಾಪಟ್ಟಿ ಇಂತಿದೆ;

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ, ಇಡಬ್ಲ್ಯುಎಸ್‌ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿರುತ್ತದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://crpf.gov.in/

ನೇಮಕ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯು ಮುಂದಿನ ಜುಲೈ ಒಂದರಿಂದ 13ರ ವರೆಗೆ ನಡೆಯಲಿದೆ. ಜೂನ್‌20 ರಿಂದ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಒದಗಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಅರ್ಹತಾ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ವೃತ್ತಿ ಪರೀಕ್ಷೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಕಂಪ್ಯೂಟರ್‌ ಆಧಾರಿತ ಪರೀಕ್ಷೆಯು ನೂರು ಅಂಕಗಳಿಗೆ ನಡೆಯಲಿದ್ದು, ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಹಿಂದಿ/ ಇಂಗ್ಲಿಷ್‌ ತಿಳಿದಿರುವ ಕುರಿತು ಪರೀಕ್ಷೆ ಕೂಡ ನಡೆಸಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು ರಾಜ್ಯದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೀದರ್‌, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಪುತ್ತೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿಯಲ್ಲಿ ನಡೆಸಲಾಗುತ್ತದೆ.

ಇದನ್ನೂ ಓದಿ : KPSC Recruitment 2023 : 67 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕ; ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನ

Exit mobile version