Site icon Vistara News

Agneepath | ನೀವೂ ʼಅಗ್ನಿಪಥ್‌ʼನಲ್ಲಿ ಸಾಗಿ ಸೇನೆ ಸೇರಬೇಕೇ? ನೇಮಕ ಹೇಗೆ ನಡೆಯುತ್ತದೆ ಗೊತ್ತೆ?

agneepath

ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಬೇಕೆಂಬ ಕನಸು ಹೊತ್ತಿರುವ ಯುವ ಜನರಿಗೆ ಕೇಂದ್ರ ಸರ್ಕಾರ ಜೂನ್‌ 14ರಂದು ಸಿಹಿ ಸುದ್ದಿ ನೀಡಿತ್ತು. ‘ದೇಶ ಭಕ್ತ ಮತ್ತು ಸ್ಫೂರ್ತಿದಾಯಕʼ ಯುವಕ – ಯುವತಿಯರು ಸೇನೆ ಸೇರಿ ಕನಿಷ್ಠ ನಾಲ್ಕು ವರ್ಷ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವ ‘ಅಗ್ನಿಪಥ್‌ʼ (agneepath) ಎಂಬ ಹೊಸ ಯೋಜನೆ ಪ್ರಕಟಿಸಿತ್ತು. ಈ ಯೋಜನೆಯ ಮೂಲಕ ಯಾರು ಸೇನೆ ಸೇರಬಹುದು? ನೇಮಕ ಹೇಗೆ ನಡೆಯುತ್ತದೆ? ನಾಲ್ಕು ವರ್ಷದ ನಂತರದ ಭವಿಷ್ಯವೇನು? ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಅಗ್ನಿಪಥ್‌ನ ವಿಶೇಷವೇನು?

ಭಾರತೀಯ ಸೇನೆಯು ವಿವಿಧ ಸೈನಿಕ ಹುದ್ದೆಗಳಿಗೆ ಇದುವರೆಗೂ ನೇಮಕಾತಿ ರ‍್ಯಾಲಿಗಳ ಮೂಲಕ ಅರ್ಹರನ್ನು ಗುರುತಿಸಿ, ನೇಮಕ ಮಾಡಿಕೊಳ್ಳುತ್ತಾ ಬಂದಿತ್ತು. ಹೀಗೆ ನೇಮಕಗೊಂಡವರು ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಿದ್ದರು. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿನ ಸೈನಿಕ ಹುದ್ದೆಗಳಿಗೆ ಮಾತ್ರ ಈ ರೀತಿ ನೇಮಕ ನಡೆಯುತ್ತಿತ್ತು.

ಈಗ ಅಗ್ನಿಪಥ್‌ ಜಾರಿಗೆ ಬಂದಿರುವುದರಿಂದ ಈ ನೇಮಕ ಪ್ರಕ್ರಿಯೆಯಲ್ಲಿ ಒಂದಿಷ್ಟು ಬದಲಾವಣೆಗಳಾಗಲಿವೆ. ಈ ಹಿಂದಿನಂತೆಯೇ ರ‍್ಯಾಲಿ ನಡೆಸಲು ಸೇನೆ ಉದ್ದೇಶಿಸಿದೆ. ಜತೆಗೆ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಂಪಸ್‌ ಸಂದರ್ಶನದ ಮಾದರಿಯಲ್ಲಿ ನೇಮಕ ಪ್ರಕ್ರಿಯೆ ನಡೆಸಲಿದೆ. ಆದರೆ ರ‍್ಯಾಲಿಯಲ್ಲಿ ನಡೆಸಲಾಗುತ್ತಿದ್ದ ಲಿಖಿತ ಪರೀಕ್ಷೆಯನ್ನು ದೇಶಾದ್ಯಂತ ಏಕರೂಪದಲ್ಲಿ ನಡೆಸಲಾಗುತ್ತದೆ. ಇಲ್ಲಿ ಮೆರಿಟ್‌ ಆಧಾರದಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ನೇಮಕ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಒಟ್ಟಾರೆಯಾಗಿ ಕೇಂದ್ರಿಕೃತ ನೇಮಕಾತಿ ವ್ಯವಸ್ಥೆ ಜಾರಿಗೆ ಬರಲಿದೆ.

ಈ ಯೋಜನೆಯ ಮೂಲಕ ನೇಮಕಗೊಳ್ಳುವ ಸೈನಿಕರನ್ನು ‘ಆಗ್ನಿ ವೀರʼರೆಂದು ಕರೆಯಲಾಗುತ್ತದೆ. ಹೀಗೆ ನೇಮಕಗೊಂಡವರು ಸೇನೆಯಲ್ಲಿ ನಿವೃತ್ತರಾಗುವವರೆಗೂ ಸೇವೆ ಸಲ್ಲಿಸಲಿದ್ದಾರೆಂದೇನೂ ಇಲ್ಲ. ಕನಿಷ್ಠ 4 ವರ್ಷ ಮಾತ್ರ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ನಾಲ್ಕು ವರ್ಷದಲ್ಲಿ ಅತ್ಯುತ್ತಮ ಸಾಧನೆ ತೋರಿದ ಶೇ. 25 ಸೈನಿಕರನ್ನು ಮಾತ್ರ ಶಾಶ್ವತ ಸೇವೆಗೆ, ಅಂದರೆ 15 ವರ್ಷಗಳವರೆಗೆ ಸೇವೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಹತೆ ನಿಗದಿಯಾಗಿದೆಯೇ?

ಇದುವರೆಗೆ ನಡೆಯುತ್ತಿದ್ದ ರ‍್ಯಾಲಿಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಓದಿದ ಅಭ್ಯರ್ಥಿಗಳು ನೇಮಕಕ್ಕೆ ಅರ್ಹರೆಂದು ಪರಿಗಣಿಸಲಾಗುತ್ತಿತ್ತು. ಇನ್ನು ಮುಂದೆಯೂ ಇದೇ ವಿದ್ಯಾರ್ಹತೆ ಮುಂದುವರಿಯಲಿದೆ. ಮುಖ್ಯವಾಗಿ ಜನರಲ್‌ ಡ್ಯೂಟಿ (ಸಾಮಾನ್ಯ ಕರ್ತವ್ಯ), ತಾಂತ್ರಿಕ, ಕ್ಲರ್ಕ್‌, ಸ್ಟೋರ್‌ ಕೀಪರ್‌, ನರ್ಸಿಂಗ್‌ ಅಸಿಸ್ಟೆಂಟ್‌, ಟ್ರೇಡ್ಸ್‌ಮನ್‌ ಮತ್ತಿತರ ಸೈನಿಕ ಹುದ್ದೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ ಸಾಮಾನ್ಯ ಕರ್ತವ್ಯದ ಸೈನಿಕ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದವರು, ತಾಂತ್ರಿಕ ಸೈನಿಕ ಹುದ್ದೆಗಳಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇದನ್ನೂ ಓದಿ| Agnipth: ಅಗ್ನಿವೀರರಿಗೆ ಸೇವಾವಧಿಯಲ್ಲೇ ಪದವಿ ಶಿಕ್ಷಣ ಪಡೆಯಲು ಅವಕಾಶ

ವಯೋಮಿತಿ ಎಷ್ಟು?

ಭಾರತೀಯ ಸೇನೆಗೆ ತಾರುಣ್ಯದ ಟಚ್‌ ನೀಡುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ. ಇದುವರೆಗೆ ಸಾಮಾನ್ಯ ಕರ್ತವ್ಯದ (ಜನರಲ್‌ ಡ್ಯೂಟಿ) ಸೈನಿಕ ಹುದ್ದೆಗಳಿಗೆ 17.5 ವರ್ಷದಿಂದ 21 ವರ್ಷದೊಳಗಿನವರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಕೆಲ ಸೈನಿಕ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 23 ವರ್ಷ ಎಂದು ನಿಗದಿಪಡಿಸಲಾಗಿತ್ತು. ಆದರೆ ಅಗ್ನಿಪಥ್‌ ಯೋಜನೆಯಲ್ಲಿ ಎಲ್ಲರಿಗೂ ಒಂದೇ ವಯೋಮಿತಿ ಇರುತ್ತದೆ. ಇನ್ನು ಮುಂದೆ ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ಮಾತ್ರ ಸೈನಿಕ ಹುದ್ದೆಗಳ ನೇಮಕಕ್ಕೆ ನಡೆಯುವ ರ‍್ಯಾಲಿಗಳಲ್ಲಿ ಭಾಗವಹಿಸಬಹುದಾಗಿದೆ.

ದೈಹಿಕ ಅರ್ಹತೆ ಏನು?

ಭಾರತೀಯ ಸೇನೆ ಸೇರಬೇಕೆಂದರೆ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲೇಬೇಕು. ಸೈನಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲ ಹುದ್ದೆಗಳಿಗೆ 162 ಮತ್ತು ಇನ್ನು ಕೆಲವು ಹುದ್ದೆಗಳಿಗೆ 165 ಸೆಂ.ಮೀ. ಎತ್ತರ ಇರಲೇಬೇಕಿರುತ್ತದೆ. ಎತ್ತರಕ್ಕೆ ತಕ್ಕ ತೂಕವನ್ನೂ ಹೊಂದಿರಬೇಕು. ಎಷ್ಟು ಎತ್ತರದವರು ಎಷ್ಟು ತೂಕ ಹೊಂದಿರಬೇಕೆಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ. ಅಭ್ಯರ್ಥಿಗಳು ಅದನ್ನು ನೋಡಿಕೊಂಡೇ ಅರ್ಜಿ ಸಲ್ಲಿಸಬೇಕು. ಇದಲ್ಲದೆ 77 ಸೆಂ.ಮೀ. ಎದೆಯ ಸುತ್ತಳತೆ (ಹಿಗ್ಗಿಸಿದಾಗ 5 ಸೆಂ.ಮೀ ಹೆಚ್ಚು) ಹೊಂದಿರಲೇಬೇಕು.

ದೈಹಿಕವಾಗಿ ಅರ್ಹತೆ ಇಲ್ಲದವರು ತಾವು ಸೇನೆ ಸೇರಬೇಕೆಂದು ಕನಸು ಕಂಡರೆ ಖಂಡಿತಾ ಅದು ಈಡೇರದು. ಇದನ್ನು ಅಭ್ಯರ್ಥಿಗಳು ಅರ್ಥಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಭಾರತೀಯ ಸೇನೆಯು ರಾಜ್ಯದ ವಿವಿಧೆಡೆ ನೇಮಕಾತಿ ರ‍್ಯಾಲಿಗಳನ್ನು ಆಯೋಜಿಸುತ್ತದೆ. ಆಗ ಸುತ್ತಮುತ್ತಲಿನ ಜಿಲ್ಲೆಗಳ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕೆ ಮೊದಲಿಗೆ ಸೇನೆಯು ತನ್ನ ವೆಬ್‌ನಲ್ಲಿ (http://joinindianarmy.nic.in ) ಅಧಿಸೂಚನೆ ಪ್ರಕಟಿಸುತ್ತದೆ, ಮಾತ್ರವಲ್ಲದೆ, ಸ್ಥಳೀಯ ಮಾಧ್ಯಮಗಳ ಮೂಲಕ ಈ ಕುರಿತು ವ್ಯಾಪಕ ಪ್ರಚಾರ ನೀಡಲಿದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ, ರ‍್ಯಾಲಿ ನಡೆಯುವ ದಿನಾಂಕ, ಸ್ಥಳ ಮತ್ತಿತರ ಮಾಹಿತಿಯನ್ನು ಈ ಸಂದರ್ಭದಲ್ಲಿ ಒದಗಿಸಲಾಗುತ್ತದೆ.

ಹೀಗೆ ಅಧಿಸೂಚನೆ ಪ್ರಕಟಗೊಂಡಾಗ ಆಸಕ್ತರು ಸೇನೆಯ ವೆಬ್‌ಗೆ ತೆರಲಿ ಅಲ್ಲಿ ಮೊದಲು ಹೆಸರು ನೊಂದಾಯಿಸಿಕೊಳ್ಳಬೇಕು. ಅಲ್ಲಿ ಕೇಳಲಾಗುವ ವಿದ್ಯಾರ್ಹತೆ, ವಯಸ್ಸು, ಊರು, ವಿಳಾಸ, ಇ-ಮೇಲ್‌ ವಿಳಾಸ ಮತ್ತಿತರ ಮಾಹಿತಿಯನ್ನು ಸರಿಯಾಗಿ ಒದಗಿಸಬೇಕು.

ಈ ರೀತಿ ಆನ್‌ಲೈನ್ ಅರ್ಜಿ ಸಲ್ಲಿಸಿದವರನ್ನು ಮಾತ್ರ ರ‍್ಯಾಲಿಗೆ ಆಹ್ವಾನಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ
ಪ್ರವೇಶಪತ್ರವನ್ನು ಅಭ್ಯರ್ಥಿ ನೀಡಿದ ಇ-ಮೇಲ್ವಿ ವಿಳಾಸಕ್ಕೆ ರವಾನಿಸಲಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ತಂದ ಅಭ್ಯರ್ಥಿಗಳಿಗೆ ಮಾತ್ರ ನಿಗದಿತ ದಿನಾಂಕದಂದು ನಡೆಸಲಾಗುವ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಯು ಎಂದು, ಯಾವ ಸಮಯದಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಬೇಕೆಂಬ ಮಾಹಿತಿಯನ್ನು ಪ್ರವೇಶಪತ್ರದಲ್ಲಿ ನೀಡಲಾಗಿರುತ್ತದೆ. ನಿಗದಿತ ದಿನದಂದೇ ಅಭ್ಯರ್ಥಿಗಳು ರ‍್ಯಾಲಿಗೆ ಹಾಜರಾಗಬೇಕು. ಬೇರೆ ದಿನ ಹಾಜರಾದರೆ ಅವಕಾಶ ನೀಡಲಾಗುವುದಿಲ್ಲ.

ನೇಮಕಾತಿ ಅಧಿಸೂಚನೆ ಇಲ್ಲಿ ದೊರೆಯಲಿದೆ | https://joinindianarmy.nic.in/Notificationdetail.htm?857

ಅಭ್ಯರ್ಥಿಗಳಿಗೇನು ಲಾಭ?
ಅಗ್ನಿಪಥ್‌ ಯೋಜನೆಯ ಮೂಲಕ ಸೇನೆ ಸೇರಿ ನಾಲ್ಕು ವರ್ಷ ಸೇವೆ ಸಲ್ಲಿಸುವುದರಿಂದ ಯುವಕ/ಯುವತಿಯರು ಹಲವು ರೀತಿಯ ಲಾಭ ಪಡೆದುಕೊಳ್ಳಬಹುದು.
1. ಸೇನಾ ತರಬೇತಿಯಿಂದಾಗಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬಹುದು, ದೈಹಿಕವಾಗಿ ಸದೃಢರಾಗಬಹುದು, ಸವಾಲನ್ನು ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬಹುದು.
2. ಅಗ್ನಿವೀರರಾಗಿ ದೇಶ ಸೇವೆ ಮಾಡಿದ ಹೆಮ್ಮೆ, ಜೀವನ ಪರ್ಯಂತ ದೇಶಕ್ಕಾಗಿ ಕೊಡುಗೆ ನೀಡಿದ್ದೇನೆ ಎಂಬ ನೆಮ್ಮದಿ.
3. ಉದ್ಯೋಗಕ್ಕಾಗಿ ಸಲ್ಲಿಸುವ ಅರ್ಜಿಗಳಲ್ಲಿ ವಿಶೇಷವಾಗಿ ಈ ಸೇವೆಯನ್ನು ಪ್ರಸ್ತಾಪಿಸಬಹುದು. ಸಾಮಾಜಿಕ ಮನ್ನಣೆ ಪಡೆಯಬಹುದು.
4. ಅಗ್ನಿವೀರರಿಗೆ ನೀಡಲಾಗುವ ಕ್ರೆಡಿಟ್‌ ನೆರವಿನಿಂದ ಸುಲಭವಾಗಿ ಡಿಪ್ಲೊಮಾ, ಪದವಿ, ಉನ್ನತ ಪದವಿ ಪಡೆಯಬಹುದು. ವಿವಿಧ ಕೌಶಲಗಳನ್ನು ಕಲಿತು ವೃತ್ತಿ ಜೀವನ ರೂಪಿಸಿಕೊಳ್ಳಬಹುದು.
5. ಚಿಕ್ಕ ವಯಸ್ಸಿನಲ್ಲಿಯೇ ಆರ್ಥಿಕವಾಗಿ ಸದೃಢರಾಗಬಹುದು. ಸೇವಾ ನಿಧಿಯಾಗಿ 11. 70 ಲಕ್ಷ ರೂ. ಜತೆಗೆ ಈ ನಿಧಿಯ ಮೇಲೆ 18 ಲಕ್ಷದವರೆಗೆ ಬ್ಯಾಂಕ್‌ ಸಾಲ ಪಡೆಯಬಹುದು.
6. ಸೇನಾ ತರಬೇತಿ ಪಡೆಯುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು, ಮಾತ್ರವಲ್ಲದೆ ದೇಶದ ಅತ್ಯುತ್ತಮ ನಾಗರಿಕರಾಗಬಹುದು.

ಏನೇನು ದಾಖಲೆಗಳು ಬೇಕು?

1. ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳು
2. ವಯೋಮಿತಿಗೆ ಸಂಬಂಧಿಸಿದ ದಾಖಲೆ
3. ವಾಸ ದೃಢೀಕರಣ ಪತ್ರ
4. ಜಾತಿ ಮತ್ತು ಧರ್ಮ ಪ್ರಮಾಣ ಪತ್ರ
5. ನಡತೆಗೆ ಸಂಬಂಧಿಸಿದ ಪ್ರಮಾಣ ಪತ್ರ
6. ಅವಿವಾಹಿತರೆಂಬುದಕ್ಕೆ ದೃಢೀಕರಣ ಪತ್ರ.
7. ಕ್ರೀಡೆ/ಎನ್‌ಸಿಸಿ ಸರ್ಟಿಫಿಕೇಟ್‌

ರ‍್ಯಾಲಿಯಲ್ಲಿ ನೇಮಕ ಪ್ರಕ್ರಿಯೆ ಹೇಗಿರುತ್ತದೆ?

ರ‍್ಯಾಲಿಯ ಆರಂಭದಲ್ಲಿ ಸಾಮಾನ್ಯ ಸ್ಕ್ರೀನಿಂಗ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ
ಅಭ್ಯರ್ಥಿಯ ದೈಹಿಕ ಸದೃಢತೆಯನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯನ್ನು (ಪಿಇಟಿ)ಯನ್ನು ಎಲ್ಲಾ ವರ್ಗದ ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ತಕ್ಕಂತೆ ನಡೆಸಲಾಗುತ್ತದೆ.
ಪಿಇಟಿ ಹಂತದ ಪರೀಕ್ಷೆಗಳು ಈ ಕೆಳಗಿನಂತೆ ನಡೆಯುವ ಸಾಧ್ಯತೆಗಳಿರುತ್ತವೆ. ಆದರೆ ಈ ಕುರಿತು ಸೇನೆಯು ಇನ್ನೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ;
1. ತಾಳ್ವಿಕೆ ಪರೀಕ್ಷೆ 1.6 ಕಿ.ಮೀ. ಓಟ
2. ಬಲದ ಪರೀಕ್ಷೆಗಾಗಿ ಬೀಮ್ಸ್‌ಗಳಲ್ಲಿ ಫುಲ್ ಅಪ್ಸ್.
3. ಧೈರ್ಯದ ಪರೀಕ್ಷೆಗಾಗಿ 9 ಅಡಿ ಆಳದ ಹಳ್ಳ ನೆಗೆತ.
4. ಸಮತೋಲನದ ಪರೀಕ್ಷೆಗಾಗಿ ಜಿಗ್‌ಜಾಗ್‌ ನಡಿಗೆ.
ದೈಹಿಕ ಅರ್ಹತೆ ಮತ್ತು ದೈಹಿಕ ಸದೃಢತೆ ಪರೀಕ್ಷೆಯ ಜತೆಗೆ ವೈದ್ಯಕೀಯ ಪರೀಕ್ಷೆಯೂ ನಡೆಯಲಿದೆ. ಇದಾದ ಮೇಲೆ ಲಿಖಿತ ಪರೀಕ್ಷೆ ಇರುತ್ತದೆ. ಈ ಮೇಲಿನ ಎಲ್ಲಾ ಹಂತಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗುತ್ತದೆ. ದೇಶಾದ್ಯಂತ ಏಕರೂಪದ ಪರೀಕ್ಷೆ ನಡೆಯಲಿದ್ದು, ಮೆರಿಟ್‌ ಆಧಾರದಲ್ಲಿ ಅರ್ಹರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಆಯಾ ಹುದ್ದೆಯ ವಿದ್ಯಾರ್ಹತೆಗೆ ಅನುಗುಣವಾದ ಪಠ್ಯಕ್ರಮವನ್ನು ಒಳಗೊಂಡ ಪರೀಕ್ಷೆ ಇದಾಗಿರುತ್ತದೆ. ಪರೀಕ್ಷೆಯ ದಿನಾಂಕ, ಸ್ಥಳ, ಸಿಲಬಸ್ ವಿವರವನ್ನು ಸೇನೆಯ ವೆಬ್‌ನಲ್ಲಿ ನೀಡಲಾಗುತ್ತದೆ.

ನೇಮಕದ ನಂತರ ಮುಂದೇನು?

ರ‍್ಯಾಲಿ ಮತ್ತು ಲಿಖಿತ ಪರೀಕ್ಷಗಳಲ್ಲಿ ಅರ್ಹತೆ ಪಡೆದು ನೇಮಕಗೊಳ್ಳಲಿರುವ ಅಗ್ನಿವೀರರಿಗೆ ಮೊದಲಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ತರಬೇತಿ ವೇಳೆಯಲ್ಲಿಯೂ ವೇತನ ನೀಡಲಾಗುತ್ತದೆ. ತರಬೇತಿ ನಂತರ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಅಗ್ನಿವೀರರಿಗೆ ಮಾಸಿಕ 30 ರಿಂದ 40 ಸಾವಿರ ರೂ. ವೇತನ ದೊರೆಯಲಿದೆ. ನಾಲ್ಕು ವರ್ಷ ಪೂರೈಸಿದ ಬಳಿಕ ಸೇನಾ ನಿಧಿಯಾಗಿ 11.70 ಲಕ್ಷ ರೂ. ತೆರಿಗೆ ರಹಿತ ಕೊಡುಗೆ ನೀಡಲಾಗುತ್ತದೆ. ಸೇವೆ ಸಲ್ಲಿಸುವಾಗ ವಿಮಾ ಸೌಲಭ್ಯ ಇರಲಿದೆ. ಆದರೆ ಪಿಂಚಣಿ ಸೌಲಭ್ಯ ಇರುವುದಿಲ್ಲ.

ನಾಲ್ಕು ವರ್ಷಗಳ ಸೇವೆಯ ಸಂದರ್ಭದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಗ್ನಿವೀರರನ್ನು ಕಾಯಂ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಆಯ್ಕೆಮಾಡುವಾಗ ಕಟ್ಟುನಿಟ್ಟಿನ ಮತ್ತು ಪಾರದರ್ಶಕವಾದ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಸೇನೆ ಈಗಾಗಲೇ ಸ್ಪಷ್ಟಪಡಿಸಿದೆ. ಇದಲ್ಲದೆ ಸಿಎಪಿಎಫ್‌, ಅಸ್ಸಾಂ ರೈಫಲ್ಸ್‌ ಮತ್ತಿತರ ಅರೆಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವಾಗ ಅಗ್ನಿವೀರರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಗೃಹ ಸಚಿವರು ಪ್ರಕಟಿಸಿದ್ದಾರೆ.

ಇದನ್ನೂ ಓದಿ| ವಿಸ್ತಾರ Explainer: ಸೇನಾ ನೇಮಕಾತಿಯಲ್ಲಿ ‘ಅಗ್ನಿ’ ಕ್ರಾಂತಿ

Exit mobile version