Site icon Vistara News

Job Fair: ಕಡಿಮೆ ಸಂಬಳವಿದ್ದರೂ ಮೊದಲು ಸಿಕ್ಕ ಕೆಲಸ ಮಾಡಿ: ಸ್ವಾಮಿ ಮುಕ್ತಿದಾನಂದಜೀ ಸಲಹೆ

Job fair

ಮೈಸೂರು: ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿದೆ. ಆದರೆ, ಈ ವಾಕ್ಯವನ್ನು ಬದಲಿಸಬೇಕಾಗುತ್ತದೆ. ಯಾಕೆಂದರೆ ಈಗ ಉದ್ಯೋಗಂ ಸ್ತ್ರೀ, ಪುರುಷ ಲಕ್ಷಣಂ ಆಗಿದೆ. ಸ್ತ್ರೀಯರು ಕೂಡ ಉದ್ಯೋಗ (Job Fair) ಮಾಡುತ್ತಾ, ಮನೆಯ ಜವಾಬ್ದಾರಿ, ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಸ್ಥಿತಿಗೆ ಬಂದಿದ್ದಾರೆ. ಕಡಿಮೆ ಸಂಬಳ ಸಿಕ್ಕರೂ ಪರವಾಗಿಲ್ಲ, ಸಿಕ್ಕ ಕೆಲಸ ಮಾಡಬೇಕು ಎಂದು ಯುವಜನತೆಗೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಲಹೆ ನೀಡಿದರು.

ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ʼಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳʼದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ಸ್ವಾಮಿ ವಿವೇಕಾನಂದು ಹೇಳುತ್ತಿದ್ದರು, ಒಂದು ಹಕ್ಕಿ ಒಂದೇ ರೆಕ್ಕೆಯಿಂದ ಹಾರಲು ಸಾಧ್ಯವಿಲ್ಲ, ಎರಡು ರೆಕ್ಕೆಗಳ ಸಹಾಯ ಬೇಕೇಬೇಕು. ಆದ್ದರಿಂದ ಸ್ತ್ರೀ-ಪುರುಷರಿಬ್ಬರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಪ್ರತಿಯೊಂದು ಸಂಸಾರ, ಪ್ರತಿಯೊಂದು ಸಮಾಜ ಯೋಗ್ಯ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಇಂತಹ ಉದ್ಯೋಗ ಮೇಳಕ್ಕೆ ಬಂದಾಗ ಮೊದಲು ಯಾವುದು ಸಿಕ್ಕಿದರೆ ಅದಕ್ಕೆ ಸೇರ್ಪಡೆಯಾಗಬೇಕು. ಇದರಿಂದ ಅನುಭವ ಗಳಿಸಿ ಮುನ್ನಡೆಯಬೇಕು ಎಂದು ಹೇಳಿದರು.

ಇದನ್ನೂ ಓದಿ | SBI Recruitment 2023 : 8,283 ಹುದ್ದೆಗಳಿಗೆ ನೇಮಕ; ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು!

ಅಕ್ಷರ, ಅನ್ನದ ಜತೆ ಉದ್ಯೋಗ ಕಲ್ಪಿಸುವುದು ದೊಡ್ಡ ಸವಾಲು. ಈ ಸವಾಲನ್ನು ಯಶಸ್ವಿಯಾಗಿ ಎದುರಿಸಲು ಒಕ್ಕಲಿಗ ಯುವ ಬ್ರಿಗೇಡ್ ಹಾಗೂ NRI ಒಕ್ಕಲಿಗರ ಬ್ರಿಗೇಡ್ ಸಜ್ಜಾಗಿತ್ತು. ಹಲವಾರು ಕಂಪನಿಗಳನ್ನು ಒಂದೇ ಸೂರಿನಡಿ ಸೇರಿಸಿ ಉದ್ಯೋಗ ಕಲ್ಪಿಸುವ ಮಹತ್ಕಾರ್ಯವನ್ನು ಮಾಡುತ್ತಿದೆ. ಅವರ ಈ ಕಾರ್ಯ ಯಶಸ್ವಿಯಾಗಲಿ ಎಂದ avru, ತಂತ್ರಜ್ಞಾನದಲ್ಲಿ ನಿಪುಣ ಹೊಂದಿರುವವರು ತಂತ್ರಜ್ಞಾನ ಉದ್ಯೋಗವನ್ನು ಹರಿಸಿಕೊಳ್ಳಿ ಉಳಿದವರು ಅವರ ವಿದ್ಯಾಭ್ಯಾಸ ಮತ್ತು ಅನುಭವಕ್ಕೆ ತಕ್ಕಂತೆ ಉದ್ಯೋಗಗಳನ್ನು ಹುಡುಕಿಕೊಳ್ಳಿ ಎಂದು ಹೇಳಿದರು.

ಉದ್ಯೋಗ ಬೇಕೆಂದರೆ ಅರಸಿಕೊಂಡು ಹೋಗಬೇಕು : ಸೋಮೇಶ್ವರನಾಥ ಸ್ವಾಮೀಜಿ

“ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈ:, ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ:” ಎಂಬ ಸಂಸ್ಕೃತ ಸುಭಾಷಿತವಿದೆ. ಅದರ ಅರ್ಥ ಇಷ್ಟೇ, ಉದ್ಯೋಗ ಬೇಕು ಎಂದರೆ ನಾವು ಹುಡುಕಿಕೊಂಡು ಹೋಗಬೇಕು, ಆಗ ನಮಗೆ ಅನುಕೂಲಕರವಾದ ಕೆಲಸ ಸಿಗುತ್ತದೆ. ಸುಮ್ಮನೆ ಪದವಿ ಪಡೆದು ಉದ್ಯೋಗವಿಲ್ಲ ಎಂದು ಕುಳಿತುಕೊಂಡರೆ ಪ್ರಯೋಜನವಿಲ್ಲ. ಕಾಡಿನ ರಾಜ ಸಿಂಹ ಕೂಡ ಒಂದೆಡೆ ಕುಳಿತರೆ ಆಹಾರ ಸಿಗಲ್ಲ, ಅದು ಕೂಡ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಹೀಗಾಗಿ ನಿರಂತರ ಪ್ರಯತ್ನ ಪಟ್ಟು ಉದ್ಯೋಗ ಗಳಿಸಬೇಕು ಎಂದು ಮೈಸೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಗೌರವ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.

ಒಕ್ಕಲಿಗ ಯುವ ಬ್ರಿಗೇಡ್ ಮತ್ತು NRI ಒಕ್ಕಲಿಗರ ಬ್ರಿಗೇಡ್ ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ’ ಆಯೋಜಿಸುವ ಮೂಲಕ ಜಾತಿ-ಮತ ಬೇಧ ಭಾವ ಮರೆತು ರೈತರ ಮಕ್ಕಳಿಗೆ ಮತ್ತು ಇತರರಿಗೆ ಉದ್ಯೋಗ ಕೊಡಿಸುವ ಮೂಲಕ ‘ಅನ್ನ’ ಸಂಪಾದಿಸುವ ಅಮೂಲ್ಯ ಕೆಲಸ ಮಾಡುತ್ತಿದೆ ಸ್ವಾಮೀಜಿ ಹೇಳಿದರು.

ಸಂಬಳ ಎಷ್ಟು ಎಂದು ಕೇಳದೆ ಉದ್ಯೋಗವನ್ನು ಪಡೆದುಕೊಂಡು ಅನುಭವವನ್ನು ಹೆಚ್ಚಿಸಿಕೊಳ್ಳಿ. ನೀವು ಕೆಲಸ ಹುಡುಕಿಕೊಂಡು ಹೋದರೆ ಸಂಬಳ ನಿಮ್ಮನ್ನು ಹುಡುಕಿಕೊಂಡು ಬರುವ ಹಾಗೆ ಅನುಭವ ಹೊಂದಬೇಕು. ಇಂದು ಹಲವಾರು ಉದ್ಯೋಗ ನೀಡುವ ಸಂಸ್ಥೆಗಳು ಬಂದಿದ್ದು ಅವರವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಉದ್ಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್ ಆರ್ ಐ ಒಕ್ಕಲಿಗರ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷರಾದ ನಂಜೇಗೌಡ ನಂಜುಂಡ ಅವರು ಮಾತನಾಡಿ, ಸುಮಾರು 50ಕ್ಕೂ ಅಧಿಕ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದು, ನೂರಾರು ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದಿದ್ದಾರೆ. ಹತ್ತನೇ ತರಗತಿ ಪಾಸ್ ಅಥವಾ ಫೈಲ್ ಯುವಕರಿಂದ ಹಿಡಿದು ಪದವಿಯನ್ನು ಪಡೆದ ಯುವಕರು ಸಹ ಈ ಉಚಿತ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು.

ಕಳೆದ ಬಾರಿ ಬೆಂಗಳೂರಿನಲ್ಲಿ ಉಚಿತ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ ಅಭೂತಪೂರ್ವ ಯಶಸ್ಸು ಕಂಡು ಸುಮಾರು 600ಕ್ಕೂ ಅಧಿಕ ಮಕ್ಕಳಿಗೆ ಉದ್ಯೋಗ ಲಭಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ | KSOU Mysuru: ಕೆಎಸ್‌ಒಯುನಿಂದ ಕೆಎಎಸ್‌, ಐಎಎಸ್‌ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆ ಸ್ಥಾನಿಕ ಸಂಪಾದಕರಾದ ಸತ್ಯನಾರಾಯಣ್, ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಸಿ. ಕಿಶೋರ್ ಚಂದ್ರ, ಸಿಬಿಐ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ದಿವಾಕರ್‌ ಮತ್ತು ಪತ್ರಕರ್ತ ಚಂದ್ರಶೇಖರ್ .ಜಿ ಮತ್ತಿತರರು ಉಪಸ್ಥಿತಿರಿದ್ದರು. ನಂಜೇಗೌಡ ಅವರು ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು.

ಉದ್ಯೋಗ ಮೇಳದಲ್ಲಿ 937 ಅಭ್ಯರ್ಥಿಗಳ ಆಯ್ಕೆ

ಉದ್ಯೋಗಮೇಳದಲ್ಲಿ ಭಾಗವಹಿಸಲು 1356 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದ 452 ಅಭ್ಯರ್ಥಿಗಳಿಗೆ ಆಫರ್‌ ಲೆಟರ್‌ ನೀಡಲಾಗಿದ್ದು, 486 ಅಭ್ಯರ್ಥಿಗಳು ಅಂತಿಮ ಸುತ್ತಿಗೆ ಹೋಗಿದ್ದು, ಒಟ್ಟು 937 ಮಂದಿ ಆಯ್ಕೆಯಾಗಿದ್ದಾರೆ ಎಂದು ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ಸ್ಥಾಪಕ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ನಂಜೇಗೌಡ ನಂಜುಂಡ ಅವರು ಮಾಹಿತಿ ನೀಡಿದ್ದಾರೆ.

Exit mobile version