Site icon Vistara News

Education Guide : ಬಹು ಬೇಡಿಕೆಯ ಜಾಬ್‌ ಡೇಟಾ ಸೈಂಟಿಸ್ಟ್‌, ಡೇಟಾ ಅನಾಲಿಸ್ಟ್‌; ಕಲಿಕೆ ಹೇಗೆ?

data scientist job Education Guide

ನಮ್ಮ ದೇಶದಲ್ಲಿ ಚಿಕ್ಕಮಕ್ಕಳಿಗೆ ಮುಂದೆ ನೀನು ಡಾಕ್ಟರ್‌ ಆಗಬೇಕು, ಎಂಜಿನಿಯರ್‌ ಆಗಬೇಕು ಎಂದು ತಲೆಗೆ ತುಂಬಲಾಗುತ್ತದೆ. ಹೌದು, ಇವೆರಡೂ ಹೆಚ್ಚು ಬೇಡಿಕೆಯಲ್ಲಿರುವ ವೃತ್ತಿಗಳು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಇಂದು ಇದೇ ರೀತಿಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಹಲವಾರು ಉದ್ಯೋಗಗಳಿವೆ. ಈ ಉದ್ಯೋಗಿಗಳ ವೇತನ ಕೆಲವೊಮ್ಮೆ ಡಾಕ್ಟರ್‌, ಎಂಜಿನಿಯರ್‌ ವೇತನಕ್ಕಿಂತಲೂ ಜಾಸ್ತಿಯೂ ಇರುತ್ತದೆ!

ಸದ್ಯ ಅತಿ ಹೆಚ್ಚು ಬೇಡಿಕೆಯಲ್ಲಿರುವ ಉದ್ಯೋಗವೆಂದರೆ ಡೇಟಾ ಸೈಂಟಿಸ್ಟ್‌ (data scientist) ಎನ್ನುತ್ತವೆ ವಿವಿಧ ಸಮೀಕ್ಷೆಗಳು. ಆನಂತರದ ಸ್ಥಾನ ಡೇಟಾ ಅನಾಲಿಸ್ಟ್‌ (data analyst). ಮೂರನೇ ಸ್ಥಾನದಲ್ಲಿ ಬ್ಲಾಕ್‌ಚೈನ್‌ ಎಂಜಿನಿಯರ್‌ (Blockchain Engineer) ಹುದ್ದೆ ಇದೆ. ನಾಲ್ಕನೇ ಸ್ಥಾನದಲ್ಲಿ ಯುಎಕ್ಸ್‌ಡಿಸೈನರ್‌ (UX Designer) ಹಾಗೂ ಐದನೇ ಸ್ಥಾನದಲ್ಲಿ ಸೈಬರ್‌ ಸೆಕ್ಯುರಿಟಿ ಎಂಜಿನಿಯರ್‌ (Cyber Security Engineer) ಹುದ್ದೆ ಇದೆ. 2030ರ ವರೆಗೂ ಈ ಹುದ್ದೆಗಳಿಗೆ ಡಿಮ್ಯಾಂಡ್‌ ಇದ್ದೇ ಇರಲಿದೆ ಎಂದು ಉದ್ಯೋಗ ಮಾರುಕಟ್ಟೆಯ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಇಂದು ಡೇಟಾ ಸೈಂಟಿಸ್ಟ್‌ ಮತ್ತು ಡೇಟಾ ಅನಾಲಿಸ್ಟ್‌ ಹುದ್ದೆಗಳ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಇರುವ ಹುದ್ದೆಗಳಿಗೆ ಹೋಲಿದರೆ, ಅರ್ಹ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವುದು ಈ ಚರ್ಚೆಗೆ ಕಾರಣವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಕ್ಷಣ ಕ್ಷಣದ ಬದಲಾವಣೆಯಿಂದಾಗಿ ನೈಪುಣ್ಯತೆ ಹೊಂದಿರುವ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚುತ್ತಿರುವಂತೆಯೇ ಡೇಟಾ ಸೈಂಟಿಸ್ಟ್‌ ಮತ್ತು ಅನಾಲಿಸ್ಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಮೀಕ್ಷೆಯೊಂದರ ಪ್ರಕಾರ ನಮ್ಮ ದೇಶದಲ್ಲಿಯೇ 2025ರ ವೇಳೆಗೆ 1,37,630 ಡೇಟಾ ಸೈನ್ಸ್‌ಗೆ ಸಂಬಂಧಿಸಿದ ಹುದ್ದೆಗಳು ಸೃಷ್ಟಿಯಾಗಲಿವೆ. ಮುಂದಿನ ವರ್ಷವೇ 72,337 ಹುದ್ದೆಗಳಿರಲಿವೆ.

ಎಫ್‌ಎಂಸಿಜಿ, ದೊಡ್ಡ ರಿಟೇಲ್‌ ಚೈನ್‌ ಉದ್ಯಮ, ಸಾರ್ವಜನಿಕ ಉದ್ಯಮ, ಕಾರ್ಪೊರೇಟ್‌ ಕಂಪನಿಗಳಲ್ಲಿ, ವಿಮಾನಯಾನ ಸೇರಿದಂತೆ ಸಾರಿಗೆ ಉದ್ಯಮ, ಪ್ರವಾಸೋದ್ಯಮ, ಇ-ಕಾಮರ್ಸ್‌, ಬ್ಯಾಂಕಿಂಗ್‌, ಹಣಕಾಸಿನ ವ್ಯವಹಾರಗಳ ಉದ್ಯಮಗಳಲ್ಲಿ, ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಇವರಿಗೆ ಉದ್ಯೋಗಾವಕಾಶಗಳಿರುತ್ತವೆ.

ಏನಿದು ಡೇಟಾ ಸೈಂಟಿಸ್ಟ್‌, ಅನಾಲಿಸ್ಟ್‌ ಹುದ್ದೆ?

ಡೇಟಾ ಸೈಂಟಿಸ್ಟ್‌ ಹುದ್ದೆಯನ್ನು ಸರಳವಾಗಿ ವಿವರಿಸುವುದು ಬಹಳ ಕಷ್ಟ. ಡೇಟಾ ಸೈನ್ಸ್‌ (ದತ್ತಾಂಶ ವಿಜ್ಞಾನ) ಮೂಲಭೂತವಾಗಿ ಗಣಿತ, ಪ್ರೋಗ್ರಾಮಿಂಗ್‌, ಸ್ಟ್ಯಾಟಿಸ್ಟಿಕ್ಸ್‌ ಮತ್ತು ಮೈನಿಂಗ್‌ ಇವೆಲ್ಲವನ್ನೂ ಒಳಗೊಂಡ ಉದ್ಯೋಗ. ಲಭ್ಯವಿರುವ ಡೇಟಾಗಳಲ್ಲಿ ಅಗತ್ಯವಾದದನ್ನು ಸಂಗ್ರಹಿಸುವ, ಅವಗಳನ್ನು ಸೂಕ್ತ ರೀತಿಯಲ್ಲಿ ಆರ್ಗನೈಜ್‌, ಪ್ಯಾಕೇಜಿಂಗ್‌ ಮಾಡಿ, ಡೇಟಾ ಅಗತ್ಯವಿರುವವರಿಗೆ ಒದಗಿಸುವ ಕೆಲಸವೆಂದು ಸರಳವಾಗಿ ಹೇಳಬಹುದು. ಆದರೆ ಇಲ್ಲಿ ಅಗತ್ಯವಾಗಿರುವ ಮಾಹಿತಿಯನ್ನು ಗುರುತಿಸುವ, ಅದನ್ನು ವಿಶ್ಲೇಷಣೆಗೊಳಪಡಿಸುವ, ಸಂಬಂಧಿಸಿದ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಹಲವು ವಿಷಯಗಳು ಸೇರಿರುತ್ತವೆ.

ಲಭ್ಯ ನಿರ್ದಿಷ್ಟ ಡೇಟಾವನ್ನು ಅಗತ್ಯ ಸಾಫ್ಟ್‌ವೇರ್‌ಗಳ ಸಹಾಯದಿಂದ ಅಧ್ಯಯನ ನಡೆಸಿ, ವಿಶ್ಲೇಷಿಸಿ, ಅಗತ್ಯವಾಗಿರುವ ಮಾಹಿತಿಯನ್ನು ಸರಣಿ ರೂಪದಲ್ಲಿ ನೀಡುವುದು ಡೇಟಾ ಅನಾಲಿಸ್ಟ್‌ ಕೆಲಸವಾಗಿರುತ್ತದೆ. ಈ ಎರಡೂ ಹುದ್ದೆಗಳಿಗೂ, ಸಂಕೀರ್ಣ ಡೇಟಾ ವ್ಯವಸ್ಥೆಯನ್ನು ಏಕೀಕೃತಗೊಳಿಸುವ ಸಾಮರ್ಥ್ಯ, ಎಸ್‌ಕ್ಯೂಎಲ್‌, ಫೈಥಾನ್‌, ಆರ್‌ ಮತ್ತು ಎಸ್‌ಎಎಸ್‌ ಮೊದಲಾದ ಪ್ರಮುಖ ಕಂಪ್ಯೂಟರ್‌ ಭಾಷೆಗಳ ಜ್ಞಾನ ಹೊಂದಿರಬೇಕಾಗುತ್ತದೆ. ಜತೆಗೆ ಜಾವಾ, ಸ್ಕಾಲಾ, ಜ್ಯೂಲಿಯಾ ಸೇರಿದಂತೆ ಇತರ ಕಂಪ್ಯೂಟರ್‌ ಭಾಷೆಗಳ ಅರಿವು ಇರಬೇಕು. ಗಣಿತದ ವಿಷಯದಲ್ಲಿ ನೈಪುಣ್ಯತೆ ಹೊಂದಿರಬೇಕು. ಮೈಕ್ರೊಸಾಫ್ಟ್‌ ಎಕ್ಸೆಲ್‌ನಲ್ಲಿ ಪರಿಣಿತಿ ಹೊಂದಿರಬೇಕು ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನೈಪುಣ್ಯತೆ ಅತ್ಯಗತ್ಯ.

ಮೆಷಿನ್‌ ಲರ್ನಿಂಗ್‌, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸಿ, ಇನ್‌ಫಾರ್ಮೆಷನ್‌ ಸೈನ್ಸ್‌, ಸ್ಟ್ಯಾಟಿಸ್ಟಿಕ್ಸ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಕಲಿತ ಡೇಟಾ ಸೈಂಟಿಸ್ಟ್‌ಗಳಿಗೆ ಈಗ ಬೇಡಿಕೆ ಹೆಚ್ಚಿದೆ.

ಮುಖ್ಯವಾಗಿ ಮಾರಾಟ ಕ್ಷೇತ್ರದಲ್ಲಿ ಈ ಹುದ್ದೆಗೆ ಬಹಳ ಬೇಡಿಕೆ ಇದ್ದರೂ, ಇಂದು ಈ ರೀತಿಯ ಮಾಹಿತಿ ಸಂಗ್ರಹ ಹಾಗೂ ವಿಶ್ಲೇಷಣೆ ಎಲ್ಲ ಕ್ಷೇತ್ರಗಳಿಗೂ ಅಗತ್ಯವಾಗಿದೆ. ಕಂಪನಿಯೊಂದರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಮಾನವ ಸಂಪನ್ಮೂಲ ವಿಭಾಗದಿಂದ ಹಿಡಿದು, ಸಾರಿಗೆ ವಿಭಾಗದವರೆಗೆ ಎಲ್ಲ ವಿಭಾಗಗಳೂ ಮಾಹಿತಿ ಮತ್ತು ವಿಶ್ಲೇಷಕರ ಸಲಹೆ ಪಡೆದೇ ಮುಂದಿನ ತೀರ್ಮಾನ ತೆಗೆದುಕೊಳ್ಳುವುದು ಈಗ ಸಾಮಾನ್ಯವಾಗಿದೆ.

ಏನು ಕೆಲಸ ಮಾಡುತ್ತಾರೆ?

ಲಭ್ಯವಿರುವ ಅಗಾಧ ಡೇಟಾ ಯಾವುದಕ್ಕೆ ಸಂಬಂಧಿಸಿದ್ದು ಎಂಬುದನ್ನು ಪರಿಶೀಲಿಸಿ, ಅದನ್ನು ವಿಶ್ಲೇಷಿಸುತ್ತಾರೆ. ಯಾವ ಕಾರಣಕ್ಕಾಗಿ ಈ ಮಾಹಿತಿಯ ಅಗತ್ಯವಿದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು, ಅದಕ್ಕೆ ಸಂಬಧಿಸಿದ ಮಾಹಿತಿಗಳನ್ನೆಲ್ಲಾ ವರ್ಗೀಕರಿಸಲಾಗುತ್ತದೆ. ಹೈಎಂಡ್‌ ಅನಾಲೈಟಿಕ್ಸ್‌ ಪ್ರೋಗ್ರಾಂ ಮತ್ತು ಮೆಷಿನ್‌ ಲರ್ನಿಂಗ್‌ ಹಾಗೂ ಅಂಕ ಗಣಿತೀಯ ವಿಧಾನಗಳ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿಡಲಾಗುತ್ತದೆ. ಇದರಲ್ಲಿ ಯಾವೆಲ್ಲಾ ವಿಷಯಗಳಿವೆ, ಇದರಲ್ಲಿ ಅಗತ್ಯವಾಗಿರುವ ಮಾಹಿತಿಯೇನು ಎಂಬುದರ ವಿಶ್ಲೇಷಣೆ ನಡೆಸಿ, ಅಂತಿಮವಾಗಿ ಬಂದ ಫಲಿತಾಂಶ ಅಥವಾ ತಮ್ಮ ವಿಶ್ಲೇಷಣೆಯ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸುವ ಕೆಲಸವನ್ನು ಇವರು ಮಾಡುತ್ತಾರೆ.

ಈ ಕೆಲಸ ಮಾಡುವವರಿಗೆ ತಾವು ಕೆಲಸ ಮಾಡುತ್ತಿರುವ ಕ್ಷೇತ್ರ, ಅದರಲ್ಲಿನ ದಿನನಿತ್ಯದ ಬೆಳವಣಿಗೆ, ಮಾರುಕಟ್ಟೆಯ ಜ್ಞಾನ, ಒಳನೋಟ, ಉದ್ಯಮಕ್ಕೆ ಮತ್ತು ತಮ್ಮ ಸಂಸ್ಥೆಗೆ ಯಾವೆಲ್ಲಾ ಮಾಹಿತಿಯ ಅಗತ್ಯವಿದೆ ಎಂಬ ಸಾಮಾನ್ಯ ತಿಳುವಳಿಕೆ, ಸಣ್ಣ-ಪುಟ್ಟ ಮಾಹಿತಿಯನ್ನೂ ಹೆಕ್ಕಿ ತೆಗೆದು, ಅದರ ಅವಶ್ಯಕತೆಯನ್ನು ಅರಿಯುವ ಸೂಕ್ಷ್ಮತೆ ಎಲ್ಲವೂ ತೀರಾ ಅವಶ್ಯವಾಗಿರುತ್ತದೆ.

ಕಂಪನಿಗೆ ಏನು ಲಾಭ?

ಡೇಟಾ ಸೈಂಟಿಸ್ಟ್‌ ಅಥವಾ ಅನಾಲಿಸ್ಟ್‌ ನೇಮಕ ಮಾಡಿಕೊಳ್ಳುವ ಕಂಪನಿಗೆ ವೇಗವಾಗಿ ಮಾಹಿತಿಗಳು ಲಭ್ಯವಾಗಲಿದೆ. ಹೆಚ್ಚು ನಿಖರವಾದ ವರದಿಗಳು ಲಭ್ಯವಾಗುವುದರಿಂದ ಉತ್ತಮ ವ್ಯವಹಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಹಕರ ಅಥವಾ ಬಳಕೆದಾರರು ಏನನ್ನು ಅಪೇಕ್ಷಿಸುತ್ತಾರೆ, ಅವರ ಆಸಕ್ತಿಗಳೇನು ಎಂಬುದನ್ನು ನಿಖರವಾಗಿ ತಿಳಿದುಕೊಂಡು, ಈ ಸಂಬಂಧ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ.

ಜತೆಗೆ ಮಾರುಕಟ್ಟೆಯ ಗಾತ್ರ, ಮುಂದಿನ ಅವಕಾಶಗಳ ಮಾಹಿತಿ ಸಂಗ್ರಹಿಸಿಕೊಂಡು, ಬೆಳವಣಿಗೆಗೆ ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಬಹುದುಗಿದೆ. ಪ್ರತಿಸ್ಪರ್ಧಿಗಳ ತಂತ್ರಗಳನ್ನು ಊಹಿಸಲು, ಅವರ ಮಾರುಕಟ್ಟೆಯ ಬೆಳವಣಿಗೆಗಳನ್ನು ತಿಳಿದುಕೊಂಡು ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಸಂಸ್ಥೆಯ ಅಥವಾ ಕಂಪನಿಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಲೂ ಈ ರೀತಿಯ ಡೇಟಾ ವಿಶ್ಲೇಷಣೆ ನೆರವು ನೀಡುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಏನು ಓದಬೇಕು?

ಸೂಕ್ತ ವಿದ್ಯಾರ್ಹತೆ ಮತ್ತು ತರಬೇತಿ ಇಲ್ಲದೇ ಇರುವುದರಿಂದಲೇ ಈ ಕ್ಷೇತ್ರದಲ್ಲಿನ ಅರ್ಹ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿದೆ. ಸಾಂಪ್ರದಾಯಿಕ ಶಿಕ್ಷಣವು ಒಳಗೊಳ್ಳದ ಹಲವು ವಿಷಯಗಳ ಪರಿಣಿತಿ ಈ ಹುದ್ದೆಗೆ ಬೇಕಾಗಿರುತ್ತದೆ. ಅಲ್ಲದೆ ತಂತ್ರಜ್ಞಾನದ ಬೆಳವಣಿಗೆಗಳಿಂದಾಗಿ ಈ ಹುದ್ದೆಯ ಕೆಲಸ ಕಾರ್ಯಗಳ ವಿಧಾನ ನಿರಂತರವಾಗಿ ಬದಲಾಗುತ್ತಿರುವುದರಿಂದ ರೆಡಿಮೇಡ್‌ ಉದ್ಯೋಗಿಗಳು ಸೃಷ್ಟಿಯಾಗುತ್ತಿಲ್ಲ. ಸ್ಕಿಲ್‌ನ ಕೊರತೆ ಕೂಡ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಉದ್ದೇಶಿಸಿರುವವರು ಬೇಸಿಕ್‌ ಕಲಿಕೆಯ ಜತೆಗೆ ನಿರಂತರವಾಗಿ ಕಲಿಯುವ ಮುಕ್ತ ಮನಸ್ಸು ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: Education Guide : ಸುಲಭದ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸ್ವಯಂ ಯೋಜನೆ

ಡೇಟಾ ಸೈನ್ಸ್‌ನಲ್ಲಿಯೇ ಬಿಇ, ಬಿ.ಟೆಕ್‌, ಬಿ.ಎಸ್‌ಸಿ ಪದವಿ ಪಡೆಯಬಹುದು. ಸ್ನಾತಕೋತ್ತರ ಪದವಿರಗಳಾದ ಎಂಬಿಎ,ಪಿಜಿಡಿಎಂ ಮಾಡಲೂ ಅವಕಾಶವಿದೆ. ಡಿಪ್ಲೊಮಾ ಹಾಗೂ ಆನ್‌ಲೈನ್‌ ಸರ್ಟಿಫಿಕೇಷನ್‌ ಕೋರ್ಸ್‌ಗಳನ್ನೂ ಮಾಡಬಹುದು. ಗಣಿತ ಅಥವಾ ಸ್ಟ್ಯಾಟಿಸ್ಟಿಕ್ಸ್‌ ವಿಷಯಗಳಲ್ಲಿ ಪದವಿಪೂರ್ವ ಶಿಕ್ಷಣ (education news) ಪಡೆದಿರುವ ವಿದ್ಯಾರ್ಥಿಗಳು ಮುಂದೆ ಡೇಟಾ ಸೈಂಟಿಸ್ಟ್‌, ಬ್ಯುಸಿನೆಸ್‌ ಅನಾಲಿಸ್ಟ್‌, ಡೇಟಾ ಅನಾಲಿಸ್ಟ್‌, ಕಂಟೆಂಟ್‌ ಅನಾಲಿಸ್ಟ್‌, ಮೆಷಿನ್‌ ಲರ್ನಿಂಗ್‌ ರಿಸರ್ಚರ್‌, ಡೇಟಾ ಮೈನಿಂಗ್‌, ಬುಸಿನೆಸ್‌ ಇಂಟೆಲಿಜೆನ್ಸ್‌ ಡೆವಲಪರ್‌ ಹೀಗೆ ವಿವಿಧ ಪದವಿ ಪಡೆಯಬಹುದಾಗಿರುತ್ತದೆ.

ರಾಜ್ಯದ ಅನೇಕ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಡೇಟಾ ಸೈನ್ಸ್‌ ಇಂಜಿನಿಯರಿಂಗ್‌ ಬ್ರಾಂಚ್‌ಗಳಿವೆ. ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್‌ ಕಾಲೇಜು ಡೇಟಾ ಸೈನ್ಸ್‌ನ ಬಿಎಸ್ಸಿ ಕೋರ್ಸ್‌ ಆರಂಭಿಸಿದೆ.

ವೇತನ ಎಷ್ಟಿರುತ್ತದೆ?

ಉದ್ಯೋಗಿಯು ಹೊಂದಿರುವ ವಿದ್ಯಾರ್ಹತೆ, ನೈಪುಣ್ಯತೆ, ಕೌಶಲದ ಮೇಲೆ ವೇತನವನ್ನ ನಿಗದಿ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಡೇಟಾ ಸೈಂಟಿಸ್ಟ್‌ ಮತ್ತು ಡೇಟಾ ಅನಾಲಿಸ್ಟ್‌ ವಾರ್ಷಿಕ 4 ರಿಂದ 26 ಲಕ್ಷ ರೂ.ಗಳವರೆಗೆ ವೇತನ ಪಡೆಯುತ್ತಾರೆ. ಸರಾಸರಿ ವೇತನವು 10.8 ಲಕ್ಷ ರೂ.ಗಳಾಗಿವೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ.

Exit mobile version