ಇಂದು ಉದ್ಯೋಗ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ತಂತ್ರಜ್ಞಾನ ಎಂದರೆ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮತ್ತು ಮೆಷಿನ್ ಲರ್ನಿಂಗ್ (Artificial Intelligence and Machine Learning). ಇದನ್ನು ಕನ್ನಡದಲ್ಲಿ ʻಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆʼ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಕ್ರಮಾವಳಿಗಳು (Algorithms) ಏನೆಲ್ಲಾ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ಈಗ ಊಹಿಸುವುದು ಕೂಡ ಕಷ್ಟ ಎನ್ನುತ್ತಿದ್ದಾರೆ ಉದ್ಯೋಗ ಮಾರುಕಟ್ಟೆಯ ತಜ್ಞರು.
ವರ್ಲ್ಡ್ ಎಕನಾಮಿಕ್ ಫೋರಮ್ (WEF)ಕಳೆಚ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ʻWEF Future of Jobs 2023′ ವರದಿಯ ಪ್ರಕಾರ ಶೇ. 75 ರಷ್ಟು ಉದ್ಯೋಗದಾತ ಕಂಪನಿಗಳು ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಅಳವಡಿಸಿಕೊಳ್ಳಲು ಮುಂದಾಗಿವೆ. ಇದರಿಂದ ವ್ಯವವಹಾರ ವಿಸ್ತರಿಸಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಶೇ.50 ರಷ್ಟು ಕಂಪನಿಗಳು ತಿಳಿಸಿದ್ದರೆ, ಶೇ. 25 ರಷ್ಟು ಕಂಪನಿಗಳು ಮಾತ್ರ ಉದ್ಯೋಗ ನಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿವೆ.
ಈ ಚರ್ಚೆ ಏನೇ ಇರಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿಯ ಲಾಭವನ್ನು ಎಲ್ಲ ಕ್ಷೇತ್ರಗಳ ಕಂಪನಿಗಳು ಪಡೆಯಲು ಮುಂದಾಗುತ್ತಿವೆ. ಇದರಿಂದಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಎಂಜಿನಿಯರಿಂಗ್ ಮತ್ತು ಇದಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್ ಕೋರ್ಸ್ ಮಾಡಿದವರಿಗೆ ಹೇರಳ ಉದ್ಯೋಗಾವಕಾಶವಂತೂ ಸೃಷ್ಟಿಯಾಗುತ್ತಿದೆ. ಟೀಮ್ ಲೀಸ್ ಎಂಬ ನೇಮಕಾತಿ ಮತ್ತು ಸಲಹಾ ಸಂಸ್ಥೆಯ ವರದಿಯ ಪ್ರಕಾರ ಈಗ ನಮ್ಮ ದೇಶದಲ್ಲಿಯೇ 45 ಸಾವಿರಕ್ಕೂ ಹೆಚ್ಚು ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಜಾಬ್‌ಗಳಿವೆ. ಈ ಕ್ಷೇತ್ರದಲ್ಲಿ ಮುಂದೆ ಭಾರಿ ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಏನಿದು ಆರ್ಟಿಫಿಷಿಯಲ್ ಇಂಟಲಿಜೆನ್ಸಿ?
ಬುದ್ಧಿವಂತ ಜೀವಿಗಳು ಸಾಮಾನ್ಯವಾಗಿ ಮಾಡಬಹುದಾದ ಕೆಲಸ ಕಾರ್ಯಗಳನ್ನು ಒಂದು ಕಂಪ್ಯೂಟಿಂಗ್ ವ್ಯವಸ್ಥೆ ಮಾಡುವ ಬೌದ್ಧಿಕ ಸಾಮರ್ಥ್ಯವನ್ನು ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಎಂದು ಹೇಳಲಾಗುತ್ತದೆ. ಅಂತಹ ಕಂಪ್ಯೂಟಿಂಗ್ ವ್ಯವಸ್ಥೆಗಳು ಮಾನವರಂತೆ ತರ್ಕ ಮಾಡುವ, ವ್ಯಾಖ್ಯಾನಿಸುವ, ಕಲಿಯುವ ಮತ್ತು ಸಾಮಾನ್ಯೀಕರಿಸುವ ಸಾಮರ್ಥ್ಯದಿಂದ ಕೂಡಿರಬೇಕಾಗುತ್ತವೆ.
ಇಂದು ನಮ್ಮಲ್ಲಿ ಬೃಹತ್ ಪ್ರಮಾಣದ ದತ್ತಾಂಶ(ಡೇಟಾ) ಉತ್ಪಾದನೆಯಾಗುತ್ತಿದೆ ಮತ್ತು ಅವನ್ನು ಅಗ್ಗದಲ್ಲಿ ಸಂಗ್ರಹಿಸಬಹುದಾದ ವ್ಯವಸ್ಥೆಗಳಿವೆ. ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆಯುಳ್ಳ ಕಂಪ್ಯೂಟರ್‌ಗಳು, ಅತ್ಯಾಧುನಿಕ ತಂತ್ರಕ್ರಮಾವಳಿಗಳು ಮತ್ತು ವ್ಯಾಪಕ ಹಾಗೂ ವೇಗಿಯಾದ ಇಂಟರ್ನೆಟ್ ಸೌಕರ್ಯಗಳು ಇವೆ. ಇದೆಲ್ಲದರೊಡನೆ ಮಾನವನ ಬೌದ್ಧಿಕ ಪ್ರಕ್ರಿಯೆಗಳ ಬಗ್ಗೆ ನಮಗಿದ್ದ ತಿಳುವಳಿಕೆ ಮುಮ್ಮಡಿಯಾಗಿದೆ. ಹೀಗಾಗಿ ಮನುಷ್ಯ ತನ್ನ ನಿರ್ಧಾರಗಳು ಮತ್ತು ಕಾರ್ಯಗಳು ಹೆಚ್ಚು ಹೆಚ್ಚು ಪರಿಣಾಮಕಾರಿ ಹಾಗೂ ದಕ್ಷವಾಗಿರಬೇಕೆಂದು ಹಂಬಲಿಸಿ ರೂಪಿಸದ ವ್ಯವಸ್ಥೆಯೇ ಆರ್ಟಿಫಿಷಿಯಲ್ ಇಂಟಲಿಜೆನ್ಸಿ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
ಹೇಗೆ ಕಾರ್ಯನಿರ್ವಹಿಸುತ್ತದೆ?
ಇಂದು ಕೆಲವು ಕಂಪ್ಯೂಟರ್‌ಗಳು ಬರೀ ಪೂರ್ವ ನಿರ್ಧರಿತ ಮತ್ತು ಪುನರಾವರ್ತಿತ ಕಾರ್ಯಗಳನ್ನು ಮಾತ್ರ ಮಾಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ನಾವು ಕಂಪ್ಯೂಟರ್‌ಗಳಿಗೆ ಸ್ವಂತವಾಗಿ ಕಲಿಯಲು ತರಬೇತಿ ನೀಡಿ, ಅವು ಅಂತರ್ಜಾಲದಲ್ಲಿ ಲಭ್ಯವಿರುವ ಬೃಹತ್ ಡೇಟಾದಿಂದ ತಮ್ಮ ಕಲಿಕೆಯ ಗುಣಮಟ್ಟವನ್ನು ಉತ್ತಮಗೊಳಿಸಿಕೊಂಡು ನಮಗೆ ಉತ್ಕೃಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ.
ಇದನ್ನು ಸರಳವಾಗಿ ಹೇಳುವುದಾದರೆ ನೀವು ಗೂಗಲ್‌ನಲ್ಲಿ ಮೊಬೈಲ್ ಒಂದನ್ನು ಕೊಳ್ಳಲು ಒಂದಿಷ್ಟು ಹುಡುಕಾಟ ನಡೆಸಿರುತ್ತೀರಿ. ನಿಮಗೆ ಬೇಕಾದ ಗುಣಮಟ್ಟದ ಮೊಬೈಲ್ ಅನ್ನು ಆಯ್ಕೆ ಮಾಡಿಕೊಳ್ಳಲು (ಜಿಬಿ, ಪ್ರೊಸೆಸರ್) ಹೆಚ್ಚು ಸರ್ಚ್ ಮಾಡಿರುತ್ತೀರಿ. ನಿಮ್ಮ ಅಗತ್ಯತೆಯು ಗೂಗಲ್ ಅರ್ಥ ಮಾಡಿಕೊಂಡಿರುತ್ತದೆ. ಮುಂದೆ ನೀವು ಫೇಸ್‌ಬುಕ್‌ಗೋ ಅಥವಾ ಇನ್ಯಾವುದೋ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡಿದಾಗ ನಿಮಗೆ ಸೂಕ್ತವಾದ ಮೊಬೈಲ್‌ಗಳ ಜಾಹೀರಾತು ಪದೇ ಪದೇ ಕಾಣಿಸುತ್ತದೆ. ಅದರ ಲಭ್ಯತೆ ನೀವಿರುವಲ್ಲಿ ಎಲ್ಲೆಲ್ಲಿದೆ ಎಂಬ ಮಾಹಿತಿಯನ್ನೂ ನೀಡುತ್ತದೆ. ಹೀಗೆ ಈ ಜಾಹಿರಾತು ಕಾಣುವಂತೆ ಮಾಡಿರುವುದು ಆರ್ಟಿಫಿಷಿಯಲ್ ಇಂಟಲಿಜೆನ್ಸಿ. ನಿಮ್ಮ ಬಗೆಗೆ ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಗಳನ್ನೆಲ್ಲಾ ವಿಶ್ಲೇಸಿ, ಈ ರೀತಿಯ ಸಲಹೆಯನ್ನು ನಿಮಗೆ ನೀಡಲಾಗುತ್ತಿರುತ್ತದೆ.
ಉದ್ಯೋಗ ಪಡೆಯಲು ಏನು ಓದಬೇಕು? ಎಲ್ಲಿ?
ಇನ್ನು ಮುಂದೆ ಶೇ.80 ರಷ್ಟು ತಂತ್ರಜ್ಞಾನಗಳು ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸಿರಲಿವೆ ಎನ್ನುತ್ತಾರೆ ತಜ್ಞರು. ತಂತ್ರಜ್ಞಾನ ಬಳಕೆಯಾಗುವಲ್ಲಿಯೆಲ್ಲಾ ಇನ್ನು ಮುಂದೆ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಬಳಕೆಯಾಗಲಿದೆ. ಹೀಗಾಗಿ ಆಸ್ಪತ್ರೆಯಿಂದ ಹಿಡಿದು ಸೇನೆಯವರೆಗೆ ಎಲ್ಲಿ ಬೇಕಾದರೂ ಉದ್ಯೋಗಾವಕಾಶ ಸೃಷ್ಟಿಯಾಗಬಹುದು. ಹೀಗಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿಯನ್ನು ಬಲ್ಲವರಿಗೆ, ರೂಪಿಸಬಲ್ಲವರಿಗೆ ಭರ್ಜರಿ ಉದ್ಯೋಗಾವಕಾಶ ಮತ್ತು ವೇತನವಿರಲಿದೆ.
ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳು ಆರ್ಟಿಫಿಷಿಯಲ್ ಇಂಟಲಿಜೆನ್ಸಿಯನ್ನು ಕಲಿಸುವ ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸಿವೆ. ಬೇಸಿಕ್ಸ್‌ನಿಂದ ಹಿಡಿದು ಹೈಯರ್ ಎಜುಕೇಷನ್‌ವರೆಗೆ ಸಾಕಷ್ಟು ಕೋರ್ಸ್‌ಗಳು ನಮ್ಮ ರಾಜ್ಯದಲ್ಲಿಯೇ ಈಗ ಲಭ್ಯವಿದ್ದು, ಔಪಚಾರಿಕ ಪದವಿಗಳ ಭಾಗವಾಗಿಯೂ ಈ ವಿಷಯವನ್ನು ಕಲಿಸಲಾಗುತ್ತಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸಿಯಲ್ಲಿ ಮೆಷಿನ್ ಲರ್ನಿಂಗ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಕಂಪ್ಯೂಟರ್ ವಿಷನ್, ಡೀಪ್ ಲರ್ನಿಂಗ್, ನ್ಯೂಟ್ರಲ್ ನೆಟ್‌ವರ್ಕ್ಸ್ ಹೀಗೆ ಅನೇಕ ವಿಭಾಗಗಳಿದ್ದು, ನೀವು ಇದರಲ್ಲಿ ಯಾವುದಾದರು ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಷಯಗಳಿರುವ ಕೋರ್ಸ್‌ಗಳನ್ನು ಮಾಡಬಹುದು.
ಇದನ್ನೂ ಓದಿ : Education Guide : ಬೆಸ್ಟ್ ಎಂಜಿನಿಯರಿಂಗ್ ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಟಾಪ್ 5 ಸಲಹೆ
ರಾಜ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಬಹುತೇಕ ಕಾಲೇಜುಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ (ಎಐ) ಬ್ರಾಂಚ್‌ಗಳಿವೆ. ನಮ್ಮ ರಾಜ್ಯದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮತ್ತು ಮೆಷಿನ್ ಲರ್ನಿಂಗ್‌ನ ಒಟ್ಟು 2,639 ಸರ್ಕಾರಿ ಕೋಟಾ ಸೀಟುಗಳು ಲಭ್ಯವಿವೆ. ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಷನ್ಸ್ ಓದುತ್ತಿರುವವರು ಕೂಡ ಇದನ್ನು ಒಂದು ವಿಷಯವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಎಂಜಿನಿಯರಿಂಗ್‌ನಲ್ಲಿಯೇ ಸಾಕಷ್ಟು ಎಐ ಸ್ಪೆಷಲೈಸೇಷನ್ ಶಾಖೆಗಳಿವೆ.
ನಮ್ಮ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯಾದ ಇನ್ಫೋಸಿಸ್ ಸ್ಟ್ರಿಂಗ್ ಬೋರ್ಡ್ ಯೋಜನೆಯ ಮೂಲಕ ನೂರಕ್ಕೂ ಹೆಚ್ಚು ಆರ್ಟಿಫಿಷಿಯಲ್ ಇಂಟಲಿಜೆನ್ಸಿ (ಎಐ) ಕುರಿತಾದ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಗೂಗಲ್ ಕಂಪನಿಯು ʻಎಲಿಮೆಂಟ್ಸ್ ಆಫ್ ಎಐʼ ಎಂಬ 30 ಗಂಟೆಗಳ ಉಚಿತ ಕೋರ್ಸ್‌ಗಳನ್ನು ನೀಡುತ್ತಿದೆ. ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ಕಲಿಕಾ ವೇದಿಕೆ ʻಸ್ವಯಂʼ ಕೂಡ ಅನೇಕ ಎಐ ಕೋರ್ಸ್‌ಗಳನ್ನು ಕಲಿಸುತ್ತಿದೆ.