ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ (Yuva Nidhi Scheme) ಡಿ. 26ರಿಂದ ನೋಂದಣಿಗೆ ಚಾಲನೆ ನೀಡಲಾಗುತ್ತಿದ್ದು, ಜ. 12ರಂದು ಖಾತೆಗೆ ನೇರವಾಗಿ ಜಮೆಯಾಗಲಿದೆ.
ಜನವರಿ 12ರಂದು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದ್ದು, ಅಂದು ಶಿವಮೊಗ್ಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಾಗಿ ಸಚಿವ ಶರಣ ಪ್ರಕಾಶ್ ಪಾಟೀಲ್ ಈಗಾಗಲೇ ಘೋಷಿಸಿದ್ದಾರೆ. ಕೆಲಸ ಸಿಗದಿರುವ ಬಗ್ಗೆ ಫಲಾನುಭವಿ ಸ್ವಯಂ ಧೃಢೀಕರಣ ಮಾಡಿಕೊಳ್ಳಬೇಕು. ಈ ನಡುವೆ ಕೆಲಸ ಸಿಕ್ಕರೆ ಅವರಿಗೆ ನಿಧಿ ಹಣ ಸಿಗುವುದಿಲ್ಲ.
ಆದರೆ, ಒಂದು ವೇಳೆ ಉದ್ಯೋಗ ಸಿಕ್ಕ ಮೇಲೆಯೂ ಇಲ್ಲವೇ ಉದ್ಯೋಗದಲ್ಲಿದ್ದೂ ಅರ್ಜಿ ಹಾಕಿ ಹಣ ಪಡೆದಿದ್ದು ಸಾಬೀತಾದರೆ ಅಂಥವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಅಲ್ಲದೆ, ಅವರು ಪಡೆದ ಅಷ್ಟೂ ಹಣವನ್ನು ವಾಪಸ್ ಪಡೆಯಲಾಗುವುದು. ಯುವ ನಿಧಿ ಯೋಜನೆಯ ದುರುಪಯೋಗದ ಬಗ್ಗೆ ಸರ್ಕಾರ ಕ್ರಮವಹಿಸಲಿದೆ. ಯುವನಿಧಿ ದುರುಪಯೋಗ ತಡೆಯುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಯುವ ನಿಧಿ ನೋಂದಣಿ ಹೇಗೆ? ಇಲ್ಲಿದೆ ವಿಡಿಯೋ
ಯುವನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ಮಾಹಿತಿ ನೀವೂ 2023 ರಲ್ಲಿ ಪದವೀಧರರಾಗಿದ್ದು, ಉದ್ಯೋಗದ ಹುಡುಕಾಟ ನಡೆಸುತ್ತಿದ್ದೀರಾ? ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲವೇ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು? ಪ್ರಕ್ರಿಯೆ ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಎಂಬ ಪೂರ್ಣ ಮಾಹಿತಿ ಈ… pic.twitter.com/tybBvMDb91
— DIPR Karnataka (@KarnatakaVarthe) December 30, 2023
ಅರ್ಹತೆ ಏನು?
- 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ.
- ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ/ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದ ರಹವಾಸಿಯಾಗಿರಬೇಕು.
ಯಾರು ಫಲಾನುಭವಿಗಳು?
- ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
- ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
- ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
ಯಾರು ಅನರ್ಹರು?
- ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.
- ಯಾವುದೇ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು.
- ಸರ್ಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
- ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇಲ್ಲ.
- ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.
- ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.
ಯುವ ನಿಧಿಗೆ ಅರ್ಜಿ ಸಲ್ಲಿಕೆ ಹೇಗೆ?
- ‘ಸೇವಾ ಸಿಂಧು’ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು
- ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
- ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತೆಗೆದಿಟ್ಟುಕೊಳ್ಳಿ.
- ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿರಬೇಕು, ಖಾತೆಯೇ ಇಲ್ಲದಿದ್ದರೆ ಈಗಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಡಿ.
- ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
- ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು).
ಇದನ್ನೂ ಓದಿ: Housing Scheme: ರಾಜೀವ್ ವಸತಿ ಯೋಜನೆಗೆ ನೋಂದಣಿ ಶುರು; ಸ್ವಂತ ಸೂರು ನಿಮ್ಮದಾಗಲು ಹೀಗೆ ಮಾಡಿ
ಯುವ ನಿಧಿ ಅರ್ಜಿ ಎಲ್ಲಿ ಸಲ್ಲಿಸಬೇಕು?
ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು.