Site icon Vistara News

Guest Lecturers Appointment : ಅತಿಥಿ ಉಪನ್ಯಾಸಕರ ನೇಮಕಕ್ಕೆ ಗೆಜೆಟ್‌ ಅಧಿಸೂಚನೆ; ಆ. 28ರಿಂದ ಅರ್ಜಿ ಆಹ್ವಾನ

guest lecture

ಬೆಂಗಳೂರು: ರಾಜ್ಯ ಸರ್ಕಾರವು 2023-24ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು (Guest Lecturers Appointment) ಆನ್‌ಲೈನ್‌ ಕೌನ್ಸೆಲಿಂಗ್ (Online counselling) ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳಲು ಗೆಜೆಟ್‌ ಅಧಿಸೂಚನೆಯನ್ನು (Gazette Notification) ಹೊರಡಿಸಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (Government First Grade College) (ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳೂ ಸೇರಿದಂತೆ) ಕಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗಿರುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಬೋಧಕರು ಒಳಗೊಂಡಂತೆ) ಆನ್‌ಲೈನ್‌ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯು ಗೆಜೆಟ್‌ ಅಧಿಸೂಚನೆಯಲ್ಲಿ ತಿಳಿಸಿದೆ.

ತಾತ್ಕಾಲಿಕ ವೇಳಾಪಟ್ಟಿ ಇಂತಿದೆ

1. ಆಗಸ್ಟ್‌ 28ರಿಂದ (ಸೋಮವಾರ) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

2. ಸೆಪ್ಟೆಂಬರ್‌ 2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ

3. ಸೆಪ್ಟೆಂಬರ್‌ 4ರಂದು ರಾಜ್ಯವ್ಯಾಪಿ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು

4. ಸೆಪ್ಟೆಂಬರ್‌ 8ರಂದು ತಾತ್ಕಾಲಿಕ ಕಾರ್ಯಭಾರ ಹಾಗೂ ಕೌನ್ಸೆಲಿಂಗ್‌ಗಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ

5. ಸೆಪ್ಟೆಂಬರ್‌ 11ರಿಂದ 15ರವರೆಗೆ ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಕೌನ್ಸಿಲಿಂಗ್‌ ನಡೆಯಲಿದೆ

6. ಸೆಪ್ಟೆಂಬರ್‌ 16ರಂದು ಕೌನ್ಸೆಲಿಂಗ್‌ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ವೆಬ್‌ಸೈಟ್‌ ಲಿಂಕ್‌ ಕ್ಲಿಕ್‌ ಮಾಡಿ. ಮುಂದಿನ ಪ್ರಕ್ರಿಯೆಯನ್ನು ನಡೆಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ವಿದ್ಯಾರ್ಹತೆ, ಹೆಚ್ಚುವರಿ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಮಾನದಂಡಗಳನ್ನು ನಿಗದಿ ಮಾಡಲಾಗಿದ್ದು, ಅಭ್ಯರ್ಥಿಗಳ ವಿಷಯವಾರು ಮೆರಿಟ್ ಲಿಸ್ಟ್ ಅನ್ನು ಆ ಮೂಲಕ ಸಿದ್ಧಪಡಿಸಲಾಗುವುದು ಎಂದು ಗೆಜೆಟ್‌ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಹತೆಗೆ ಸಿಗುವ ಅಂಕ ಇಷ್ಟು!

ಅಭ್ಯರ್ಥಿಯು ಎರಡು ವರ್ಷ ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಶೇಕಡಾ 25ರಷ್ಟನ್ನು ಗಣನೆಗೆ ತೆಗೆದುಕೊಳ್ಳುವುದು. ಉದಾಹರಣೆಗೆ, ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 60 ಅಂಕ ಪಡೆದಿದ್ದಲ್ಲಿ ಅದರ ಶೇಕಡಾ 25ರಷ್ಟನ್ನು ಅಂದರೆ 15 ಅಂಕಗಳು ಎಂಬುದಾಗಿ ಗಣನೆಗೆ ತೆಗೆದುಕೊಳ್ಳುವುದು. ಇದರನ್ವಯ ಗರಿಷ್ಠ 25 ಅಂಕಗಳನ್ನು ನೀಡಬಹುದಾಗಿದೆ.

ಹೆಚ್ಚುವರಿ ವಿದ್ಯಾರ್ಹತೆಗೆ ಎಷ್ಟು ಅಂಕ?

– ಪಿಎಚ್‌.ಡಿಯಲ್ಲಿ ವಿದ್ಯಾರ್ಹತೆ ಪಡೆದಿದ್ದಲ್ಲಿ 12 ಅಂಕ
– ಎನ್‌ಇಟಿ/ಕೆ-ಸೆಟ್/ಎಸ್‌ಎ‍ಇಟಿ ವಿದ್ಯಾರ್ಹತೆ ಪಡೆದಿದ್ದಲ್ಲಿ 9 ಅಂಕ
– ಎಂ.ಫಿಲ್ ವಿದ್ಯಾರ್ಹತೆ ಪಡೆದಿದ್ದಲ್ಲಿ 06 ಅಂಕ

ಅನುಭವದ ಆಧಾರದ ಮೇಲೆ ಅಂಕ

ಹಿಂದಿನ ವರ್ಷಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳಿಗೆ 48 ಅಂಕಗಳನ್ನು (ಪ್ರತಿ ಶೈಕ್ಷಣಿಕ ವರ್ಷದ ಪೂರ್ಣ ಅವಧಿ ಸೇವೆಗೆ 3 ಅಂಕಗಳು, ಶೈಕ್ಷಣಿಕ ವರ್ಷದಲ್ಲಿ 1 ಸೆಮಿಸ್ಟರ್‌ನಲ್ಲಿ ಮಾತ್ರ ಸೇವೆ ಸಲ್ಲಿಸಿದ್ದರೆ 15 ಅಂಕಗಳು, ಸೆಮಿಸ್ಟರ್‌ನ 1 ತಿಂಗಳ ಸೇವಾ ಅವಧಿಗೆ 0.5 ಅಂಕ, 1 ತಿಂಗಳು ಮೇಲ್ಪಟ್ಟ 2 ತಿಂಗಳವರೆಗಿನ ಸೇವಾ ಅವಧಿಗೆ 1 ಅಂಕ ಹಾಗೂ 2 ತಿಂಗಳು ಮೇಲ್ಪಟ್ಟ ಸೇವಾ ಅವಧಿಗೆ 1.5 ಅಂಕಗಳನ್ನು) ನೀಡಬಹುದಾಗಿದೆ. ಇನ್ನು ವಿಕಲಚೇತನ ಅಭ್ಯರ್ಥಿಗಳಿಗೆ 10 ಅಂಕಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಗೆಜೆಟ್‌ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: India Post GDS Recruitment : 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೇ ದಿನ

ಈ ಮೇಲೆ ತಿಳಿಸಿದ ಮಾನದಂಡಗಳನ್ನು ಅನುಸರಿಸಿ, ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ವಿದ್ಯಾರ್ಹತೆ ಮತ್ತು ಸೇವಾ ವಿವರಗಳ ಆಧಾರದ ಮೇಲೆ ರಾಜ್ಯವ್ಯಾಪಿ ಮೆರಿಟ್ ಪಟ್ಟಿ (State-wise Merit List) ಅನ್ನು ಪ್ರಕಟಿಸಲಾಗುವುದು.

  1. ರಾಜ್ಯವ್ಯಾಪಿ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಲ್ಲಿ ವಿಷಯವಾರು ಲಭ್ಯವಿರುವ ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಅರ್ಹ ಅಭ್ಯರ್ಥಿಗಳ ರಾಜ್ಯವ್ಯಾಪಿ ಆಯ್ಕೆಪಟ್ಟಿ (State-wise Selection List) ಅನ್ನು ಪ್ರಕಟಿಸಲಾಗುವುದು ಹಾಗೂ ರಾಜ್ಯವ್ಯಾಪಿ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗುವುದು.
  2. ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಈ ಕೆಳಗಿನಂತೆ ನಿಗದಿಪಡಿಸಿರುವ ಗೌರವಧನವನ್ನು ನಿಯಮಾನುಸಾರ ನಿರ್ವಹಿಸುವ ಕಾರ್ಯಭಾರಕ್ಕೆ ಹಾಗೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿರುವ ಅರ್ಹತೆಗೆ (ವಿದ್ಯಾರ್ಹತೆ/ಸೇವಾ ಅವಧಿ) ಅನುಗುಣವಾಗಿ ಪರಿಗಣಿಸಲಾಗುವುದು.
    ಅ) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ರೂ. 32,000/- (ಮೂವತ್ತೆರಡು ಸಾವಿರ ಮಾತ್ರ)
    ಆ) 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ರೂ.30,000/- (ಮೂವತ್ತು ಸಾವಿರ ಮಾತ್ರ)
    ಇ) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ರೂ.28,000/- (ಇಪ್ಪತ್ತೆಂಟು ಸಾವಿರ ಮಾತ್ರ)
    ಈ) 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ರೂ.25,000/- (ಇಪ್ಪತ್ತಾರು ಸಾವಿರ ಮಾತ್ರ)
  3. ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಕಲಾ/ವಾಣಿಜ್ಯ/ಭಾಷಾ ವಿಷಯಗಳಿಗೆ ಗರಿಷ್ಠ 15 ಗಂಟೆಗಳ ಹಾಗೂ ವಿಜ್ಞಾನ ವಿಷಯಗಳು/ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಗರಿಷ್ಠ 19 ಗಂಟೆಗಳ ಕಾರ್ಯಭಾರವನ್ನು ಮಾತ್ರ ಹಂಚಿಕೆ ಮಾಡಲಾಗುವುದು ಹಾಗೂ 15/19 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನವನ್ನು ಪರಿಗಣಿಸಲಾಗುವುದು.
  4. ಮುಂದುವರಿದು ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಂಥಪಾಲಕರ ಹುದ್ದೆಗಳು ಖಾಲಿ ಇರುವ ಕಾಲೇಜುಗಳಲ್ಲಿ ಅತಿಥಿ ದೈಹಿಕ ಶಿಕ್ಷಣ ಹಾಗೂ ಅತಿಥಿ ಗ್ರಂಥಪಾಲಕರ ಸೇವೆಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಅವರಿಗೆ 19 ಗಂಟೆಗಳ ಕಾರ್ಯಭಾರವನ್ನು ನಿಗದಿಗೊಳಿಸಿ ಆಯ್ಕೆ ಮಾಡಲಾಗುತ್ತದೆ.
  5. ಅಭ್ಯರ್ಥಿಗಳು ಸೇವಾ ಅವಧಿಯ ವಿವರಗಳನ್ನು ಪ್ರಾಂಶುಪಾಲರಿಂದ ಈ ಪತ್ರಕ್ಕೆ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಪಡೆದು ಸದರಿ ಸೇವಾ ನಿಯಮಗಳನ್ನು ಆನ್‌ಲೈನ್‌ ಅರ್ಜಿಯಲ್ಲಿ ಯಥಾವತ್ತಾಗಿ ನಮೂದಿಸುವುದು.
  6. ಮುಂದುವರಿದು, ಸದರಿ ನಮೂನೆಯಲ್ಲಿ ಈಗಾಗಲೇ ಈ ಹಿಂದಿನ ವರ್ಷಗಳ ಸೇವಾ ವಿವರಗಳನ್ನು ಪ್ರಾಂಶುಪಾಲರಿಂದ ಪಡೆದಿದ್ದಲ್ಲಿ, ಪುಸಕ್ತ ಸಾಲಿನ ಅಂದರೆ 2022-23ನೇ ಸಾಲಿನ ಸೇವಾ ವಿವರಗಳನ್ನು ಮಾತ್ರ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ಪಡೆದು, ಒಟ್ಟು ಸೇವಾ ವಿವರಗಳನ್ನು ಅರ್ಜಿಯಲ್ಲಿ ನಮೂದಿಸುವುದು.
  7. ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ/ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸೇವೆಯನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.
  8. ಕೌನ್ಸೆಲಿಂಗ್ ಮೂಲಕ ಕಾಲೇಜು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಯಾದ ನಂತರ 02 ದಿನಗಳೊಳಗಾಗಿ ಸಂಬಂಧಪಟ್ಟ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
  9. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸಿರುವ ವಿವರಗಳಂತೆ, ಅವರ ವಿದ್ಯಾರ್ಹತೆ ಮತ್ತು ಸೇವಾ ವಿವರದ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ, ಕಾಲೇಜಿನ ಪ್ರಾಂಶುಪಾಲರ ಸಮಕ್ಷಮ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ.
  10. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ವಿದ್ಯಾರ್ಹತೆ, ಸೇವಾ ವಿವರಗಳು ಹಾಗೂ ಇನ್ನಿತರ ಅಗತ್ಯ ಮಾಹಿತಿಗಳನ್ನು ನಮೂದಿಸುವಾಗ ತಪ್ಪಾಗದಂತೆ ಗಮನಹರಿಸಿ ಸರಿಯಾದ/ನಿಖರ ಮಾಹಿತಿಯನ್ನು ದಾಖಲಿಸುವುದು.
  11. ಆದಾಗ್ಯೂ, ಕಣ್‌ತಪ್ಪಿನಿಂದಾಗಿ ತಪ್ಪಾದ ಮಾಹಿತಿಯನ್ನು ನಮೂದಿಸಿರುವುದು ಕಂಡುಬಂದಲ್ಲಿ ಕೂಡಲೇ ಗಮನಹರಿಸಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಸರಿಪಡಿಸಿಕೊಳ್ಳಲು (edit) ಸಹ ಅವಕಾಶವಿರುತ್ತದೆ. ಒಂದು ವೇಳೆ ಕೊನೆಯ ದಿನಾಂಕದ ನಂತರ ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಮನವಿ/ಕೋರಿಕೆ ಸಲ್ಲಿಸಿದಲ್ಲಿ ಅಂತಹ ಯಾವುದೇ ಕೋರಿಕೆ/ಮನವಿಗಳನ್ನು ಪರಿಗಣಿಸುವುದಿಲ್ಲ ಎಂಬುದನ್ನು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
  12. ಅಭ್ಯರ್ಥಿಗಳು ಒಂದು ವೇಳೆ ವಿದ್ಯಾರ್ಹತೆ, ಸೇವಾ ವಿವರಗಳು ಹಾಗೂ ಇನ್ನಿತರೆ ಮಾಹಿತಿಗಳನ್ನು ತಪ್ಪಾಗಿ ನಮೂದಿಸಿದ್ದಲ್ಲಿ, ಮುಂದಿನ ಪರಿಣಾಮಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ ಹಾಗೂ ಅಂತಹ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಿ, ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
  13. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಯಾಗುವ / ಕರ್ತವ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಯಂತೆ 2023- 24ನೇ ಶೈಕ್ಷಣಿಕ ಸಾಲಿನ ಮುಕ್ತಾಯದವರೆಗೆ (ಬೋಧನಾ ಕಾರ್ಯಭಾರದ ಲಭ್ಯತೆಗನುಸಾರವಾಗಿ) ಅಥವಾ 10 ತಿಂಗಳಿಗೆ ಮಾತ್ರ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಸಿ, ನಂತರ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುವುದು.
  14. ಕೌನ್ಸೆಲಿಂಗ್ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಆಯಾ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ ಅವರ ಬದಲಿಗೆ ನಂತರದ ಅಭ್ಯರ್ಥಿಯನ್ನು ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಿ ಆಯ್ಕೆಪಟ್ಟಿಯನ್ನು ಸಂಬಂಧಪಟ್ಟ ಕಾಲೇಜಿಗೆ ರವಾನಿಸಲಾಗುವುದು.
  15. ನಿಗದಿತ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸದ ಅಥವಾ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಕಾಲೇಜು ಆಯ್ಕೆ ಮಾಡಿಕೊಳ್ಳದ ಹಾಗೂ ಕೌನ್ಸೆಲಿಂಗ್‌ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳಿಗೆ ಪುನಃ 2ನೇ ಬಾರಿಗೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
  16. ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕುರಿತು ಎಲ್ಲ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸುವುದರೊಂದಿಗೆ, ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾಹಿತಿಯನ್ನು ನೀಡುವುದು.
  17. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪುಕಟಿಸಲಾಗುವುದು. ಇದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ. ಆದ್ದರಿಂದ ಅಭ್ಯರ್ಥಿಗಳು ಸದರಿ ಅಂತರ್ಜಾಲ ತಾಣವನ್ನು ಪುತಿನಿತ್ಯ ಗಮನಿಸಲು ತಿಳಿಸಲಾಗಿದೆ.

    ಗೆಜೆಟ್‌ ನೋಟಿಫಿಕೇಶನ್‌ ಪಿಡಿಎಫ್‌ ಪ್ರತಿಗಾಗಿ ಈ ಕೆಳಗಿನ ಡೌನ್ಲೋಡ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ

ಉದ್ಯೋಗಕ್ಕೆ ಸಂಬಂಧಪಟ್ಟ ಇನ್ನಷ್ಟು ಸುದ್ದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version