ಬೆಂಗಳೂರು: ರಾಜ್ಯ ಸರ್ಕಾರ 2023-2024ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ (Government Primary and High school) ಒಟ್ಟು 10 ಸಾವಿರ ಅತಿಥಿ ಶಿಕ್ಷಕರನ್ನು (Guest Teachers Appointment) ನೇಮಕ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಉತ್ತಮ ಗುಣಮಟ್ಟದ ಶೈಕ್ಷಣಿಕ ಬಲವರ್ಧನೆಯ ಸಲುಗವಾಗಿ ಈ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಒಟ್ಟು 10 ಸಾವಿರ ಹುದ್ದೆಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 8000 (8000 guest teachers to primary Schools) ಮತ್ತು ಪ್ರೌಢ ಶಾಲೆಗಳಿಗೆ 2000 ಅತಿಥಿ ಶಿಕ್ಷಕರನ್ನು (2000 Guest Teachers to High school) ನೇಮಿಸಿಕೊಳ್ಳಲು ಸರ್ಕಾರ ಮಂಜೂರಾತಿ ನೀಡಿ ಆದೇಶಿಸಿದೆ.
ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳು ಕೌನ್ಸೆಲಿಂಗ್ ಮೂಲಕ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕೌನ್ಸಿಲಿಂಗ್ ಮುಖಾಂತರ ಖಾಲಿಯಾಗಿರುವ ಹುದ್ದೆಗಳನ್ನು ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಪೂರ್ಣ ಪ್ರಮಾಣದಲ್ಲಿ ಅತಿಥಿ ಶಿಕ್ಷಕರಿಂದ ಭರ್ತಿ ಮಾಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ 2023-24 ನೇ ಶೈಕ್ಷಣಿಕ ಸಾಲಿಗೆ ನೇಮಕ ಮಾಡಿಕೊಳ್ಳಲಾಗುವ ಒಟ್ಟು 10000 ಅತಿಥಿ ಶಿಕ್ಷಕರ ಗೌರವಧನ ಪಾವತಿಗಾಗಿ ಅವಶ್ಯವಿರುವ ಅನುದಾನದ ವಿವರ ಹಾಗೂ ಅತಿಥಿ ಶಿಕ್ಷಕರ ಜಿಲ್ಲಾ / ತಾಲೂಕುವಾರು ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕ ವಿವಾದ ಹೈಕೋರ್ಟ್‌ನಲ್ಲಿ
2023-24ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ನೀಡಿರುವ 27000 ಹುದ್ದೆಗಳಿಗೆ ಈಗಾಗಲೇ ನೇಮಕ ಮಾಡಲು ಅನುಮತಿ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ 15,000 ಪದವೀಧರ ಪ್ರಾಥಮಿಕ ಶಿಕ್ಷಕರನ್ನು (6ರಿಂದ 8ನೇ ತರಗತಿ) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿಗಾಗಿ 2022ರ ಮಾರ್ಚ್ 21ರಂದು ಅಧಿಸೂಚನೆಯನ್ನು ಹೊರಡಿಸಿ, ನೇಮಕಾತಿ ಸಂಬಂಧ ಅಗತ್ಯ ಪ್ರಕ್ರಿಯೆಗಳ ನಂತರ 1:1 ಮುಖ್ಯ ಆಯ್ಕೆಪಟ್ಟಿಯನ್ನು 2023ರ ಮಾರ್ಚ್ 8ರಂದು ಪ್ರಕಟಿಸಲಾಗಿತ್ತು. ಇದರಲ್ಲಿ ಒಟ್ಟು 13,352 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ, ಸದರಿ ಶಿಕ್ಷಕರ ನೇಮಕಾತಿಗಳಿಗೆ ಕುರಿತಂತೆ ದಾಖಲಾದ ದಾವೆಯನ್ನು ಆಧರಿಸಿ ಹೈಕೋರ್ಟ್ 1:1 ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿತ್ತು. ಹೈಕೋರ್ಟ್ ತೀರ್ಪಿನಂತೆ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಇದೇ ಮಾರ್ಚ್ 8ರಂದು ಪ್ರಕಟಿಸಲಾಗಿತ್ತು. ಆದರೆ, ರದ್ದಾದ ಪಟ್ಟಿಯಲ್ಲಿದ್ದು ಹೊಸ ಪಟ್ಟಿಯಲ್ಲಿ ಹೆಸರು ಕಾಣದ ಅಭ್ಯರ್ಥಿಗಳು ಮೇಲ್ಮನವಿ ಸಲ್ಲಿಸಿದ್ದರು.
ಈ ನಡುವೆ ಕಳೆದ ಮೇ 2ರಂದು ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪಿನಲ್ಲಿ ಮುಂದಿನ ವಿಚಾರಣೆಯ ದಿನದವರಗೆ ಆಯ್ಕೆ ಪ್ರಕ್ರಿಯೆ ನಡೆಸಬಹುದು, ಆದರೆ, ಪ್ರಕಟಿಸುವಂತಿಲ್ಲ ಎಂದು ಹೇಳಲಾಗಿದೆ.
1:1 ಮುಖ್ಯ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲದಾಖಲೆಗಳ ನೈಜತೆ ಪರಿಶೀಲನಾ ಕಾರ್ಯವನ್ನು ಕೈಗೊಳ್ಳುವಂತೆ ಆಯಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರಕ್ಕೆ ಸೂಚಿಸಲಾಗಿದ್ದು, ನೈಜತೆಯ ಪರಿಶೀಲನಾ ಕಾರ್ಯವು ಆಯಾ ಜಿಲ್ಲಾ ಉಪನಿರ್ದೇಶಕರ ಕಛೇರಿ ಹಂತದಲ್ಲಿ ಪ್ರಗತಿಯಲ್ಲಿದೆ ಎಂದು ವಿವರಿಸಲಾಗಿದೆ. ಇನ್ನು ʻಕಲ್ಯಾಣ ಕರ್ನಾಟಕ’ ವಿಭಾಗಕ್ಕೆ ಸಂಬಂಧಿಸಿದಂತೆಯೂ ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ವಿವರಿಸಲಾಗಿದೆ.
ಇದನ್ನೂ ಓದಿ : School Teachers : ಸರ್ಕಾರಿ ಶಿಕ್ಷಕರಿಗೆ Good News; ಗಣತಿ, ಚುನಾವಣಾ ಕೆಲಸಕ್ಕೆ ಬಳಸದಂತೆ ಆಯೋಗಕ್ಕೆ ಸೂಚನೆ
ಈ ಎಲ್ಲ ಕಾರಣಗಳಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಪ್ರೌಢ ಶಾಲೆಗೆ 2000 ಮತ್ತು ಪ್ರಾಥಮಿಕ ಶಾಲೆಗಳಿಗೆ 8000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡಿದೆ. ಅತಿಥಿ ಶಿಕ್ಷಕರ ಆಯ್ಕೆಯ ಮಾನದಂಡ ಮತ್ತಿತರ ವಿಚಾರಗಳನ್ನು ಶಿಕ್ಷಣ ಇಲಾಖೆ ಪ್ರಕಟಿಸಲಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕದ ಸಂಘದಿಂದ ಅಭಿನಂದನೆ
2023-24ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 8000 ಮತ್ತು ಪ್ರೌಢ ಶಾಲೆಗಳಿಗೆ 2000 ಎರಡನೇ ಕಂತಿನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮಂಜೂರಾತಿ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಹಾಗೂ ಆರ್ಥಿಕ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತು ರಾಜ್ಯಾಧ್ಯಕ್ಷರಾದ ಕೆ. ನಾಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.