Site icon Vistara News

Google job | ಗೂಗಲ್‌ಗೆ ‌39 ಬಾರಿ ಅರ್ಜಿ ಹಾಕಿ ಕೊನೆಗೂ ಕೆಲಸ ಪಡೆದ ಭೂಪ!

google job

ʻಮರಳಿ ಯತ್ನವ ಮಾಡುʼ ಎಂದು ಹಿರಿಯರು ಹೇಳಿದ್ದು ಸುಮ್ಮನೆ ಅಲ್ಲ. ʻಎಷ್ಟೇ ಸಲ ಎಡವಿ ಬಿದ್ದರೂ ಮತ್ತೆ ಮತ್ತೆ ಪ್ರಯತ್ನ ಮಾಡು. ಖಂಡಿತ ಗೆಲುವು ಸಿಕ್ಕೇ ಸಿಗುತ್ತದೆ. ಮಾಡುವ ಕೆಲಸದಲ್ಲಿ ಮಾತ್ರ ನಿಷ್ಟೆ ಇರಲಿ, ಫಲಾಫಲ ಮೇಲಿನವನಿಗೆ ಬಿಟ್ಟು ನಿರಾಳರಾಗಿರಿʼ ಅಂತ ಹೇಳುತ್ತಾರಲ್ಲ ಅದಕ್ಕೆ ಪಕ್ಕಾ ಉದಾಹರಣೆಯಿದು. ಇಲ್ಲೊಬ್ಬಾತ ತನ್ನ ಕನಸಿನ ಸಂಸ್ಥೆಯಲ್ಲಿ ಕೆಲಸ ಮಾಡಲೇಬೇಕೆಂದು ಶತಾಯಗತಾಯ ೩೯ ಬಾರಿ ಪ್ರಯತ್ನಿಸಿ ಕಡೆಗೂ ಕೆಲಸ ಗಿಟ್ಟಿಸಿಕೊಂಡಿದ್ದಾನೆ! ಆತನೇ ತನ್ನ ಪ್ರೊಫೈಲಿನಲ್ಲಿ ಶೇರ್‌ ಮಾಡಿಕೊಂಡಿರುವ ಈ ಸುದ್ದಿ ಈಗ ವೈರಲ್‌ ಆಗಿದ್ದು, ಜನರೆಲ್ಲ ಆತನ ತಾಳ್ಮೆಗೆ, ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.

ಸಾಧಾರಣವಾಗಿ ಯಾರೇ ಆದರೂ ಇಂತಹ ವಿಚಾರಗಳಲ್ಲಿ, ಎರಡು ಅಥವಾ ತಪ್ಪಿದರೆ ಮೂರು ಬಾರಿ ಪ್ರಯತ್ನ ಪಡುತ್ತಾರೆ. ಸಾಮಾನ್ಯ ಮನುಷ್ಯನಿಗೆ ಅದಕ್ಕಿಂತ ಹೆಚ್ಚು ತಾಳ್ಮೆ ಇರುವುದಿಲ್ಲ. ಇದಲ್ಲದಿದ್ದರೇನಂತೆ ಇನ್ನೊಂದು ಕೆಲಸ ನಮ್ಮ ದಾರಿ ಕಾಯುತ್ತಿರಬಹುದು ಎಂದು ಆ ದಾರಿ ಬದಲಿಸಿ ಮತ್ತೊಂದು ದಾರಿ ಹಿಡಿಯುತ್ತಾರೆ. ಆದರೆ ಈತ ಮಾತ್ರ ಏನಾದರಾಗಲಿ, ಭೂಮಿಯೇ ನಡುಗಲಿ, ಪ್ರಳಯವೇ ಆಗಲಿ, ನನಗೆ ಮಾತ್ರ ಇಂಥ ಸಂಸ್ಥೆಯಲ್ಲಿ ಕೆಲಸ ಬೇಕೇ ಬೇಕು ಎಂದು ತನ್ನ ಪ್ರಯತ್ನವನ್ನು ಬಿಟ್ಟಿಲ್ಲ. ಕೊನೆಗೂ ಭಕ್ತನ ಪ್ರಾರ್ಥನೆ ಆ ಸಂಸ್ಥೆಗೆ ಕೇಳಿದ್ದು, ಕೆಲಸ ದಯಪಾಲಿಸಿದೆ. ಸಹಜವಾಗಿಯೇ ಆತ ಆನಂದಾತಿರೇಕದಿಂದ ಹಿಗ್ಗಿ ಹೋಗಿದ್ದಾನೆ.

ಇದನ್ನೂ ಓದಿ: Weird travel : ಹೆಂಡತಿ ಮುಖದ ದಿಂಬಿನೊಂದಿಗೆ ಪ್ರವಾಸ ಮಾಡಿದ ಗಂಡ!

ಅಷ್ಟಕ್ಕೂ ಈತ ಅಷ್ಟೊಂದು ಕನವರಿಸಿದ್ದು ಯಾವ ಸಂಸ್ಥೆ ಅಂತೀರಾ? ಇನ್ಯಾವುದೂ ಅಲ್ಲ. ಗೂಗಲ್.‌ ಟೈಲರ್‌ ಕೊಹೆನ್‌ ಎಂಬಾತನೇ ಈ ಗೂಗಲ್‌ ಭಕ್ತ. ಗೂಗಲ್‌ನಲ್ಲಿ ಕೆಲಸ ಮಾಡಲೇಬೇಕೆಂಬ ಆಸೆಯಿಂದ ಪಟ್ಟು ಬಿಡದೇ ಪ್ರಯತ್ನಿಸಿದ್ದಾರೆ. ಸಾನ್‌ ಫ್ರ್ಯಾನ್ಸಿಸ್ಕೋನ ಖಾಸಗಿ ಸಂಸ್ಥೆಯೊಂದರಲ್ಲಿ ಸಹ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಟೈಲರ್‌ ಕೊಹೆನ್‌ ಇದೀಗ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಈತ ತನ್ನ ೩೯ ಬಾರಿಯ ಪ್ರಯತ್ನಗಳ ಇಮೇಲ್‌ ಇತಿಹಾಸದ ಸ್ಕ್ರೀನ್‌ಶಾಟ್‌ ಅನ್ನು ತನ್ನ ಲಿಂಕ್ಡ್‌ ಇನ್‌ ಪ್ರೊಫೈಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ʻ೩೯ ನಕಾರ, ಒಂದು ಸ್ವೀಕೃತʼ ಎಂಬ ತಲೆಬರಹದಲ್ಲಿ ಈ ಪೋಸ್ಟ್‌ ವೈರಲ್‌ ಆಗಿದ್ದು, ಸಾವಿರಾರು ಜನರು ಆತನಿಗೆ ಶುಭಾಶಯ ಕೋರಿದ್ದಾರೆ.

೨೦೧೯ ಆಗಸ್ಟ್‌ ತಿಂಗಳಿಂದ ಗೂಗಲ್‌ಗೆ ಅಪ್ಲಿಕೇಶನ್‌ ಹಾಕಲು ಈತ ಆರಂಭಿಸಿದ್ದು ಎರಡು ಬಾರಿ ರಿಜೆಕ್ಟ್‌ ಆಗಿದ್ದಾನೆ. ಅದಾಗಿ ಎಂಟು ತಿಂಗಳ ನಂತರ ಮತ್ತೆ ಅಪ್ಲಿಕೇಶನ್‌ ಹಾಕಿದ್ದು, ಆಗಲೂ ರಿಜೆಕ್ಟ್‌ ಆಗಿದೆ, ಇದಾಗಿ ಕೋವಿಡ್‌ ೧೯ ಆರಂಭದ ಹಂತದಲ್ಲಿ ಮತ್ತೆ ಬಿಡದೇ ಯತ್ನವ ಮಾಡು ಎಂಬಂತೆ ಪದೇ ಪದೇ ಅಪ್ಲೈ ಮಾಡುತ್ತಲೇ ಸಾಗಿದ್ದಾರೆ. ಕೊನೆಗೂ ಈಗ ಬರೋಬ್ಬರಿ ಮೂರು ವರ್ಷಗಳ ನಂತರ ಕೆಲಸ ಸಿಕ್ಕಿದೆ.

ಈ ಪೋಸ್ಟ್‌ ಪ್ರಕಟಿಸಿದ ಮೇಲೆ ಈತನಂತೆ ತಮ್ಮ ಕನಸಿನ ವೃತ್ತಿಗಾಗಿ ಪದೇ ಪದೇ ಪ್ರಯತ್ನ ಮಾಡುವ ಸಾಕಷ್ಟು ಮಂದಿ ಇದ್ದಾರೆಂದು ಸಾಬೀತಾಗಿದೆ. ಇದಕ್ಕೆ ಕಮೆಂಟಿಸಿರುವ ಹಲವರಲ್ಲಿ ಒಬ್ಬಾತ, ನನ್ನದು ಅಮೇಜಾನ್‌ನಲ್ಲಿ ೧೨೦ಕ್ಕಿಂತಲೂ ಹೆಚ್ಚು ಬಾರಿ ರಿಜೆಕ್ಟ್‌ ಆಗಿದೆ. ಕೊನೆಗೂ ನಾನೂ ಈಗ ಕೆಲಸ ಗಿಟ್ಟಿಸಿಕೊಂಡೆ ಎಂದಿದ್ದಾನೆ. ಇನ್ನೊಬ್ಬಾತ, “ನಾನೂ ೮೩ ಬಾರಿ ಅಪ್ಲಿಕೇಶನ್‌ ಹಾಕಿದ್ದೇನೆ ೫೨ ಬಾರಿ ರಿಜೆಕ್ಟ್‌ ಆಗಿದೆ. ಇನ್ನೂ ದಾರಿ ಕಾಯುತ್ತಲೇ ಇದ್ದೇನೆ ನೋಡಿ, ನನ್ನದು ಇನ್ನೂ ಅಮಾನವೀಯ ತಾನೇ?” ಎಂದು ಕಮೆಂಟು ಮಾಡಿದ್ದಾರೆ.

ಇದನ್ನೂ ಓದಿ: ಯಾವಾಗಲೂ ಟಿವಿಯಲ್ಲೇ ಇರ್ತೀರಲ್ಲ; 5 ವರ್ಷದ ಬಾಲಕಿಯ ಉತ್ತರ ಕೇಳಿ ಪ್ರಧಾನಿಗೆ ನಗುವೋ ನಗು

Exit mobile version