ಬೆಂಗಳೂರು: ರಾಜ್ಯ ಹೈಕೋರ್ಟ್ ಪ್ರಸ್ತುತ ಖಾಲಿ ಇರುವ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿದಂತೆ 57 ಸಿವಿಲ್ ನ್ಯಾಯಾಧೀಶರ ನೇಮಕಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ (High Court Recruitment 2023) ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನವಾಗಿರುತ್ತದೆ.
ಸೇವಾ ನಿರತರೂ ಅಂದರೆ ಉಚ್ಚ ನ್ಯಾಯಾಲಯ, ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಸರ್ಕಾರಿ ಪ್ರಾಸಿಕ್ಯೂಟರ್ ಹಾಗೂ ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹೈಕೋರ್ಟ್‌ನಲ್ಲಿ ಮತ್ತು ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರುವ ಎಲ್ಲಾ ಸೇವಾನಿರತ ಅಭ್ಯರ್ಥಿಗಳೂ, ಅವರ ವೃಂದ ತಾರತಮ್ಯವಿಲ್ಲದೆ ಎಲ್ಲರೂ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಇದನ್ನು ಹೊರತು ಪಡಿಸಿ ಬೇರೆ ಮಾರ್ಗದಲ್ಲಿ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹುದ್ದೆಗಳ ಮೀಸಲಾತಿ ಹಂಚಿಕೆ ಇಂತಿದೆ;
ವಿದ್ಯಾರ್ಹತೆ ಮತ್ತು ವಯೋಮಿತಿ
ಮಾನ್ಯತೆ ಪಡೆದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು.
ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು ಅರ್ಜಿಗಳನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷ ಮತ್ತು ಇತರರಿಗೆ 35 ವರ್ಷ ಎಂದು ನಿಗದಿಪಡಿಸಲಾಗಿದೆ. ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರುತ್ತದೆ.
ಸೇವಾ ನಿರತ ಅಭ್ಯರ್ಥಿಗಳಾಗಿದ್ದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 43 ವರ್ಷ. ಇತರ ಅಭ್ಯರ್ಥಿಗಳಿಗೆ 40 ವರ್ಷ ಎಂದು ನಿಗದಿಪಡಿಸಲಾಗಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-04-2023 (ರಾತ್ರಿ 11.59 ಗಂಟೆ)
ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 13-04-2023 (ರಾತ್ರಿ 11.59 ಗಂಟೆ)
ಚಲನ್ ಮೂಲಕ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ: 13-04-2023 (ಬ್ಯಾಂಕಿನ ಕೆಲಸದ ವೇಳೆ)
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://karnatakajudiciary.kar.nic.in
ಅರ್ಜಿ ಶುಲ್ಕ ಎಷ್ಟು?
ಪೂರ್ವಭಾವಿ ಪರೀಕ್ಷೆಗೆ ಸಾಮಾನ್ಯ ಮತ್ತು ಪ್ರವರ್ಗ 2ಎ,2ಬಿ, 3ಎ, 3ಬಿ ಅಭ್ಯರ್ಥಿಗಳು 1,000 ರೂ. ಶುಲ್ಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ- 1ರಕ್ಕೆ ಸೇರಿದ ಅಭ್ಯರ್ಥಿಗಳಿಗೆ 500ರೂ. ಶುಲ್ಕ ನಿಗದಿಪಡಿಸಲಾಗಿದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಯಶಸ್ವಿಯಾದ ಪ್ರತಿಯೊಬ್ಬ ಅಭ್ಯರ್ಥಿಯು, ಮುಖ್ಯ ಲಿಖಿತ ಪರೀಕ್ಷೆಗೆ ಹಾಜರಾಗಲು, ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದ ದಿನಾಂಕದಿಂದ 15 ದಿನಗಳೊಳಗೆ, ಮುಖ್ಯ ಲಿಖಿತ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಸಾಮಾನ್ಯ ಅಭ್ಯರ್ಥಿಯು ಮತ್ತು ಪ್ರವರ್ಗ2ಎ,2ಬಿ, 3ಎ, 3ಬಿ ಅಭ್ಯರ್ಥಿಗಳು ರೂ. 1,500 ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ- 1ರಕ್ಕೆ ಸೇರಿದ ಅಭ್ಯರ್ಥಿಗಳು 750 ರೂ. ಪಾವತಿಸಬೇಕಿರುತ್ತದೆ.
ಆನ್‌ಲೈನ್‌ನಲ್ಲಿ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಪೇಮೆಂಟ್ ಗೇಟ್‌ವೇ ಮೂಲಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ. ಆನ್‌ಲೈನ್ ಮೂಲಕ ಸಾಧ್ಯವಾಗದೇ ಇದ್ದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಲ್ಲಿ ಚಲನ್ ಮೂಲಕ ಕೂಡ ಪಾವತಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ನೇಮಕ ಹೇಗೆ?
ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ಮೂಲಕ ನೇಮಕ ನಡೆಯಲಿದೆ. ಮೊದಲಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ನೂರು ಅಂಕಗಳಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಕನಿಷ್ಠ 50 ಅಂಕ ಮತ್ತು ಇತರರು ಕನಿಷ್ಠ 60 ಅಂಕ ಪಡೆದಲ್ಲಿ ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ.
ಮುಖ್ಯ ಪರೀಕ್ಷೆಯು ಕೂಡ 400 ಅಂಕಗಳಿಗೆ ನಡೆಯಲಿದ್ದು, ಇದರಲ್ಲಿ ಒಂದು ಭಾಷಾಂತರ ಪತ್ರಿಕೆಯಾದರೆ ಉಳಿದ ಮೂರು ಕಾನೂನು ಪತ್ರಿಕೆಗಳಾಗಿರಲಿವೆ. ಈ ಪರೀಕ್ಷೆಯ ಪ್ರತಿಯೊಂದು ವಿಷಯದಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾದರೆ ಕನಿಷ್ಠ 40 ಅಂಕ ಮತ್ತು ಇತರ ಅಭ್ಯರ್ಥಿಗಳಾದರೆ ಕನಿಷ್ಠ 50 ಅಂಕ ಪಡೆದಲ್ಲಿ ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮೌಖಿಕ ಪರೀಕ್ಷೆಯು 100 ಅಂಕಗಳಿಗೆ ನಡೆದರೆ, ನಂತರ 25 ಅಂಕಗಳಿಗೆ ಕಂಪ್ಯೂಟರ್ ಜ್ಞಾನದ ಪರೀಕ್ಷೆ ನಡೆಸಲಾಗುತ್ತದೆ. ಮುಖ್ಯ ಪರಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ.
ಇದನ್ನೂ ಓದಿ: High Court Recruitment 2023 : ರಾಜ್ಯ ಹೈಕೋರ್ಟ್‌ನಲ್ಲಿ 39 ಚಾಲಕ ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ