ʻಕೆಲವೇ ದಶಕಗಳ ಹಿಂದೆ ಹಿಂದೆ ಒಂದು ಉದ್ಯೋಗ ಸಿಕ್ಕಿದರೆ ಅದು ಇಡೀ ಜೀವಮಾನಕ್ಕೆ ಫಿಕ್ಸ್ ಎನ್ನುವ ಪರಿಸ್ಥಿತಿ ಇತ್ತು. ಒಬ್ಬ ವ್ಯಕ್ತಿ ಒಂದೇ ಸಂಸ್ಥೆಯಲ್ಲಿ ಜೀವನದ ಬಹುಕಾಲವನ್ನು ಕಳೆದಿದ್ದಾನೆ ಅಂದರೆ ಅದೊಂದು ಬಹುದೊಡ್ಡ ಸಾಧನೆ ಅನಿಸ್ತಾ ಇತ್ತು. ಆಗಾಗ ಕೆಲಸ ಬದಲಾಯಿಸೋರನ್ನು ಅವನಿಗೆ ಎಲ್ಲಿಯೂ ಸೆಟ್ ಆಗುವುದಿಲ್ಲ ಎಂದು ಎಲ್ಲರೂ ಹಂಗಿಸಿ ಅಪಮಾನ ಮಾಡುತ್ತಿದ್ದರು. ತುಂಬಾ ಕಡೆ ಕೆಲಸ ಮಾಡಿದ್ದಾನೆ ಅನ್ನುವುದೇ ನೆಗೆಟಿವ್ ಪಾಯಿಂಟ್ ಆಗುತ್ತಿತ್ತು. ಆದರೆ, ಈಗ ಫುಲ್ ಚೇಂಜ್!
ಒಂದೇ ಸಂಸ್ಥೆಯಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದೇನೆ ಎಂದರೆ ʻಏನ್ಸಾರ್ ನಿಮಗೆ ಬೇರೆ ಎಲ್ಲಿಂದಲೂ ಆಫರ್ ಬಂದಿಲ್ವಾʼ ಅಂತ ನೇರವಾಗಿ ಕೇಳ್ತಾರೆ. ಒಂದೇ ಸಂಸ್ಥೇಲಿ ಗೂಟ ಹಾಕಿಕೊಂಡು ಕೂತಿದ್ದಾರೆ ಎಂದರೆ ಒಂದೋ ಬೇರೆ ಕಡೆ ಡಿಮ್ಯಾಂಡಿಲ್ಲ ಅಂತ, ಅಥವಾ ಅಂತ ಕೆಪ್ಯಾಸಿಟಿನೇ ಇಲ್ಲ ಅಂತಾನೇ ಸಮಾಜ ತೀರ್ಮಾನ ಮಾಡಿಬಿಡುತ್ತದೆ.
ಇತ್ತೀಚಿನ ದಿನಗಳಲ್ಲಂತೂ ಒಂದು ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾನೆ ಅಂದರೆ ಅದುವೇ ದೊಡ್ಡ ಸಾಧನೆ. ಯಾವ ದೊಡ್ಡ ಐಟಿ ಕಂಪನಿಗಳಿಗೂ ಒಬ್ಬ ಒಳ್ಳೆಯ ಉದ್ಯೋಗಿಯನ್ನು ಮೂರು ವರ್ಷಕ್ಕಿಂತ ಹೆಚ್ಚು ಉಳಿಸಿಕೊಳ್ಳಲು ಕಷ್ಟಕರವಾದ ಸನ್ನಿವೇಶ ಇದೆ. ಈ ಧಾವಂತ ಎಷ್ಟಿದೆ ಎಂದರೆ ಕಂಪನಿಗಳು ಈ ರೀತಿ ಕೆಲಸ ಬಿಟ್ಟು ಹೋಗುವುದನ್ನು ತಪ್ಪಿಸಲು ಒಂದು, ಎರಡು, ಮೂರು ವರ್ಷದ ಬಾಂಡ್ ಬರೆಸಿಕೊಳ್ಳುವ ಪದ್ಧತಿಯನ್ನು ಶುರು ಮಾಡಿದ್ದವು. ಆದರೆ, ಈಗ ಬಾಂಡ್ ಇದ್ದರೆ ಕೆಲಸಕ್ಕೇ ಬರುವುದಿಲ್ಲ ಅಂತ ಕಟ್ಟು ನಿಟ್ಟಾಗಿ ಹೇಳಿಬಿಡುತ್ತಾರೆ ವೃತ್ತಿಪರರು! ಉದ್ಯೋಗಿಗಳು ಬಿಡಿ, ಕ್ಯಾಂಪಸ್ ಸೆಲೆಕ್ಷನ್‌ನಲ್ಲೂ ಬಾಂಡ್ ಇದ್ದರೆ ಬರುವುದಿಲ್ಲ ಎಂದು ಕಾಲೇಜು ಮಕ್ಕಳೂ ಆಫರನ್ನೇ ರಿಜೆಕ್ಟ್ ಮಾಡಿಬಿಡುತ್ತಾರೆ.
ಇನ್ನು ಕೆಲಸ ಬಿಡುವಾಗ ಫಾರ್ಮಾಲಿಟಿಸ್‌ಗಳಿಗೆ ಗುಂಡು ಹೊಡೆದು ಎಷ್ಟೋ ಕಾಲವಾಗಿದೆ! ಮೂರು ತಿಂಗಳು ಮೊದಲು ಹೇಳಬೇಕು, ಎರಡು ತಿಂಗಳು ಮೊದಲು ಹೇಳಬೇಕು ಅನ್ನೋ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ʻನಾಳೆಯಿಂದ ಬರಲ್ಲʼ ಅಂತ ಮೇಲ್ ಹಾಕಿ ಹೊರಟುಬಿಡುವಷ್ಟು ಸರಳವಾಗಿದೆ. ಇನ್ನು ʻಬಾಯ್ ಬಾಯ್ ಸರ್ʼ ಅಂತಾನೋ, ʻಕೆಲಸ ತುಂಬ ಬೋರಾಗ್ತಿದೆ… ಹಾಗಾಗಿ ರಿಸೈನ್ ಮಾಡ್ತಾ ಇದೇನೆʼ ಅಂತಾನೋ, ʻಕೆಲಸದಲ್ಲಿ ಮಜಾ ಇಲ್ಲ ಸರ್ʼ ಅಂತಾನೋ ನೇರವಾಗಿ ಹೇಳುವಷ್ಟು ಪರಿಸ್ಥಿತಿ ಬದಲಾಗಿದೆ. ಅಚ್ಚರಿ ಎಂದರೆ ಕಂಪನಿಗಳು ಕೂಡಾ ಹೊಸ ಮಾದರಿಗೆ ಒಗ್ಗಿಕೊಂಡಿವೆ. ಆದರೂ ಆಗಾಗ ಹೊಸಬರನ್ನು ನೇಮಕ ಮಾಡಿಕೊಂಡು ಅವರಿಗೆ ತರಬೇತಿ ಕೊಡುವುದು, ಅವರು ಒಂದಿಷ್ಟು ರೆಕ್ಕೆ ಬಲಿತ ಕೂಡಲೇ ಹಾರಿ ಹೋಗುವುದು.. ಹೀಗೆ ಮಾಡುವುದರಿಂದ ಕಂಪನಿಯ ವ್ಯವಸ್ಥೆಯ ಮೇಲೆ ಪರಿಣಾಮ ಬಿದ್ದೇ ಬೀರುತ್ತದೆ. (ಕಂಪನಿಗಳೂ ಹಿಂದೆ ಮುಂದೆ ನೋಡದೆ ಪಿಂಕ್ ಸ್ಲಿಪ್ ಕೊಡುವುದು ಬೇರೆಯೇ ಸಂಗತಿ)
ಯಾಕೆ ಹೀಗೆ ಚೇಂಜಿಂಗ್ ಟ್ರೆಂಡ್?
ಪದೇಪದೆ ಕೆಲಸ ಬದಲಾವಣೆ ಮಾಡುವುದಕ್ಕೆ ಇರುವ ಸರಳ ಕಾರಣಗಳು ಎರಡು: ಒಂದನೆಯದು, ಕಂಪನಿಯಿಂದ ಕಂಪನಿಗೆ ಹಾರಿದಾಗ ದೊಡ್ಡ ಮೊತ್ತದ ವೇತನ ಜಂಪ್ ದೊರೆಯುತ್ತದೆ, ಎರಡನೆಯದು ಒಂದೇ ಕಡೆ ಇದ್ದರೆ ಪ್ರಮೋಷನ್‌ಗಳು ಸುಲಭದಲ್ಲಿ ಸಿಗುವುದಿಲ್ಲ. ಬೇರೆ ಕಂಪನಿ ಸೇರಿದಾಗ ಸುಲಭದಲ್ಲಿ ಭಡ್ತಿಯೂ ಸಿಗ್ತದೆ.
ಆದರೆ, ಇದು ನಾವು ಮೇಲ್ನೋಟದಲ್ಲಿ ನೀಡಬಹುದಾದ ಕಾರಣ. ಇದನ್ನೇ ಸಾಮಾಜಿಕ-ಮಾನಸಿಕ-ವ್ಯಾವಹಾರಿಕ ನೆಲೆಯಲ್ಲಿ ನೋಡಿದಾಗ ಬೇರೆ ಬೇರೆ ಅರ್ಥಗಳು ಹೊಳೆಯುತ್ತವೆ. ಬ್ಯುಸಿನೆಸ್ ಕೋಚ್ ಆಗಿರುವ ರಾಜೀವ್ ತಲ್ರೇಜಾ ಅವರು ಈಗೀಗ ಕಂಪನಿಗಳಿಗೆ ಉದ್ಯೋಗಿಗಳನ್ನು ಹೆಚ್ಚು ಕಾಲ ರಿಟೇನ್ ಮಾಡಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಮೂರು ಪೀಳಿಗೆಗಳ ಉದಾಹರಣೆ ನೀಡುತ್ತಾ ಸೊಗಸಾಗಿ ವಿವರಿಸಿದ್ದಾರೆ.
ಮುಂದಿನದು ರಾಜೀವ್ ತಲ್ರೇಜಾ ಅವರ ಮಾತು…
ಉದ್ಯಮದ ಜಗತ್ತು ಮೂರು ತಲೆಮಾರುಗಳನ್ನು ನೋಡಿದೆ. ಒಂದು ಕೈಗಾರಿಕಾ ಕ್ರಾಂತಿಯ ಕಾಲ, ಎರಡು ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಕಾಲ, ಮೂರನೆಯದು ಈಗಿನ ಸೋಷಿಯಲ್ ರೆವೆಲ್ಯುಷನ್.
ಕೈಗಾರಿಕಾ ಕ್ರಾಂತಿಯ ಕಾಲ
ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಜನರಿಗೆ ಉದ್ಯೋಗ ಎನ್ನುವುದು ಜೀವನ ಸಾಗಿಸುವ ಅನಿವಾರ್ಯ ದಾರಿಯಾಗಿತ್ತು. ರೋಟಿ, ಕಪಡಾ, ಮಕಾನ್ (ಅಶನ, ವಸನ, ವಸತಿ)ಗೆ ಅದೇ ಅನಿವಾರ್ಯವಾಗಿತ್ತು. ಆಗ ಜನ ಒಂದು ಕೆಲಸಕ್ಕೆ ಸೇರಿದರೆ ಅದನ್ನು ಬಿಟ್ಟು ಹೋಗುತ್ತಿರಲಿಲ್ಲ. ಕೆಲವೊಮ್ಮೆ ಬಾಸ್ ಎಷ್ಟೇ ಶೋಷಣೆ ಮಾಡಿದರೂ, ಕೊನೆಗೊಮ್ಮೆ ಹೊಡೆದರೂ ಕೆಲಸ ಬಿಡುತ್ತಿರಲಿಲ್ಲ. ಕೆಲಸದಿಂದ ತೆಗೆದರೂ ಹೋರಾಟ ಮಾಡಿಯೋ, ಕಾರ್ಮಿಕ ಸಂಸ್ಥೆಗಳಿಗೆ ದೂರು ನೀಡಿಯೋ ಮರಳಿ ಸಂಸ್ಥೆ ಸೇರಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆಗ ಅವಕಾಶಗಳು ತುಂಬ ಕಡಿಮೆ ಇದ್ದವು.. ಹಾಗಾಗಿ Boss is always Right ಎಂದು ನಂಬಿ ಕೆಲಸ ಮಾಡುತ್ತಿದ್ದರು. ಅಂದ್ರೆ ಇವರೆಲ್ಲ ಈಗ ಕೆಲಸ ಮಾಡುತ್ತಿರುವ ಯುವಕರ ಅಜ್ಜಂದಿರು!
ಮಾಹಿತಿ ತಂತ್ರಜ್ಞಾನ ಕಾಲ
ದೊಡ್ಡ ದೊಡ್ಡ ಐಟಿ ಕಂಪನಿಗಳು ಬಂದಾಗ ಸಾಕಷ್ಟು ಜನರಿಗೆ ಉದ್ಯೋಗ ಸಿಕ್ಕಿತು. ಈ ಹಂತದಲ್ಲಿ ಕಂಪನಿಗಳನ್ನು ಸೇರಿದವರು ಕೇವಲ ರೋಟಿ, ಕಪಡಾ, ಮಕಾನ್‌ನ ಆಸೆಗೆ ಬಿದ್ದವರಲ್ಲ. ಅವರಿಗೆ ಗುಣಮಟ್ಟದ ಜೀವನದ ಕನಸಿತ್ತು. ಅಂದರೆ ಒಂದು ಮನೆ, ಅದರ ಇಎಂಐ, ಒಂದು ಕಾರು, ಅದರ ಸಾಲದ ಕಂತುಗಳನ್ನು ಕಟ್ಟುವುದು ಅವರ ಅಗತ್ಯವಾಗಿತ್ತು. ಅವರ ಅಗತ್ಯಗಳನ್ನು ಕಂಪನಿಗಳು ಪೂರೈಸಿದವು. ಸಂಬಳ ಕಡಿಮೆ ಆಯಿತು ಅನಿಸಿದವರು ಎಲ್ಲಿ ಜಾಸ್ತಿ ಸಿಗುತ್ತದೋ ಅಲ್ಲಿಗೆ ವಲಸೆ ಹೋಗಲು ಶುರು ಮಾಡಿದರು. ಅಂದರೆ ಮೊದಲು ಒಂದು ಕಂಪನಿಯಲ್ಲೇ ಕೆಲಸ ಮಾಡಬೇಕು ಎನ್ನುವ ಮೊದಲಿನ ನಂಬಿಕೆ, ನಿಷ್ಠೆ ಇಲ್ಲಿ ಕಡಿಮೆ ಆಯಿತು.
ಸಾಮಾಜಿಕ ಕ್ರಾಂತಿಯ ಕಾಲ
೨೦೦೮ರ ಬಳಿಕ ಮಾಹಿತಿ ತಂತ್ರಜ್ಞಾನ ಅನ್ನುವುದು ಕ್ರಾಂತಿಯೇನೂ ಅಲ್ಲ. ಈಗ ಕೋಡಿಂಗ್ ಬ್ರಹ್ಮ ವಿದ್ಯೆಯೇನೂ ಅಲ್ಲ. ಯೂಟ್ಯೂಬ್‌ನಲ್ಲಿ ನೋಡಿಯೂ ಕಲಿಯಬಹುದು. ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಈಗ ಎಲ್ಲವೂ ಇಲ್ಲಿ ಸೋಷಿಯಲ್. ಈಗ ಯಾರೂ ಕೂಡಾ ಹೊಟ್ಟೆ, ಬಟ್ಟೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಳ್ಳೆಯ ಸ್ಟಾಂಡರ್ಡ್ ಬದುಕು, ಎಲ್ಲರ ಹಾಗೆ ಬದುಕಬೇಕು ಎಂಬ ಬಗ್ಗೆ ಕಾರ್ಮಿಕರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮನೆಯಲ್ಲಿ ಟೀವಿ, ಫ್ರಿಜ್‌ನಂಥ ಕಂಫರ್ಟ್‌ಗಳು ಎಲ್ಲರ ಮನೆಯಲ್ಲೂ ಇವೆ. ಈಗಿನ ಜನರಿಗೆ ಬೇಕಾಗಿರುವುದು ಸೋಷಿಯಲ್ ರೆಕಗ್ನಿಷನ್ ಮತ್ತು ಗುಣಮಟ್ಟದ ಬದುಕು. ಒಳ್ಳೆ ಕ್ವಾಲಿಟಿಯ ಕಂಪನಿ, ಒಳ್ಳೆಯ ಕ್ವಾಲಿಟಿ ಆಫೀಸು, ಒಳ್ಳೆಯ ರೋಲ್, ಅವಕಾಶ, ಸವಾಲು ಮತ್ತು ಆ ಸವಾಲನ್ನು ಮೀರಿದಾಗ ಸಿಗುವ ಗೌರವ ಇದನ್ನು ಈಗಿನ ಜನರು ಕೇಳುತ್ತಿದ್ದಾರೆ. ಅದು ಸಿಗುವಲ್ಲಿಗೆ ಹಾರುತ್ತಲೇ ಇರುತ್ತಾರೆ.
ರಾಜೀವ್ ತಲ್ರೇಜಾ ಹೇಳುವ ಈ ಮಾತಿನಲ್ಲಿ ಸತ್ಯವಿದೆ. ಈಗ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹಾರಿದಾಗ ಕನಿಷ್ಠ ೨೫-೫೦% ವೇತನ ಹೆಚ್ಚಾಗುತ್ತದೆ. ಡಬ್ಬಲ್ ಆಗೋ ಸಾಧ್ಯತೆಯೂ ಇದೆ. ಒಂದೇ ಕಂಪನಿಯಲ್ಲಿದ್ದರೆ ಸೀನಿಯರ್‌ಗಳನ್ನು ಮೀರುವುದು ಕಷ್ಟ. ಹೊಸ ಕಂಪನಿಯಲ್ಲಿ ಅದಕ್ಕೆ ವಿಫುಲ ಅವಕಾಶವಿದೆ. ಹೀಗಾಗಿ ಸಣ್ಣ ವಯಸ್ಸಿನಲ್ಲೇ ದೊಡ್ಡ ಹುದ್ದೆಗೆ ಹೋಗಬೇಕು ಎಂದರೆ ಬದಲಾವಣೆ ಒಂದೇ ಮಾರ್ಗ ಎಂದು ಅವರು ನಂಬಿದ್ದಾರೆ. ಹಾಗಾಗಿ ತಮ್ಮ ಬೆಳವಣಿಗೆಯ ಮೇಲೆ ಕಣ್ಣಿಟ್ಟಿರುವ ಯುವಜನ ಟಕ್ ಟಕ್ ಟಕ್ ಅಂತ ಓಡುತ್ತಲೇ ಇರುತ್ತಾರೆ.
ಇದನ್ನೂ ಓದಿ| ಏನೂ ಮಜಾ ಅನಿಸ್ತಿಲ್ಲ ಸರ್, ಕೆಲಸ ಬಿಡ್ತೀನಿ! ಹೀಗೂ ಒಬ್ಬ ರಿಸೈನ್ ಲೆಟರ್ ಬರ್ದಿದ್ದಾನೆ ನೋಡಿ
ಇದನ್ನೂ ಓದಿ| ʼಬೈ ಬೈ ಸರ್ʼ-ಮೂರೇ ಶಬ್ದದ ರಾಜೀನಾಮೆ ಪತ್ರ ನಮಗೆಲ್ಲ ಮಾದರಿಯೆಂದ ನೆಟ್ಟಿಗರು