Site icon Vistara News

IBPS Clerk Recruitment 2022 | ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡದಲ್ಲಿಯೇ ನಡೆಯಲಿದೆ ಎಕ್ಸಾಮ್‌

ibps clerk recruitment 2022

ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳ (IBPS Clerk Recruitment 2022) ನೇಮಕಕ್ಕಾಗಿ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ನಡೆಸಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜುಲೈ ೨೧ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಈ ಬಾರಿ ಒಟ್ಟು ೬,೦೩5 ಹುದ್ದೆಗಳಿಗೆ ಮಾತ್ರ ನೇಮಕ ನಡೆಯಲಿದೆ. ಹಿಂದೆಲ್ಲ ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಕ್ಲರಿಕಲ್‌ ಕೇಡರ್‌ ಹುದ್ದೆಗಳ ಸಂಖ್ಯೆ ೧೦ ಸಾವಿರವನ್ನು ಮೀರಿರುತ್ತಿತ್ತು.

ರಾಜ್ಯದಲ್ಲಿ ಒಟ್ಟು ೩೫೮ ಹುದ್ದೆಗಳಿದ್ದು, ರಾಜ್ಯ ಮೂಲದ ಕೆನರಾ ಬ್ಯಾಂಕ್ 140 ಮತ್ತು ರಾಜ್ಯ ಮೂಲದ ಇನ್ನೊಂದು ಬ್ಯಾಂಕ್‌ ಕಾರ್ಪೋರೇಷನ್ ಬ್ಯಾಂಕ್ ಅನ್ನು ವಿಲೀನ ಮಾಡಿಕೊಂಡಿರುವ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ 156 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ. ಇವಲ್ಲದೆ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ೩೬, ಬ್ಯಾಂಕ್‌ ಆಫ್‌ ಇಂಡಿಯಾ ೬, ಯುಕೋ ಬ್ಯಾಂಕ್‌ ೧೩, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ೪ ಮತ್ತು ಪಂಜಾಬ್‌ ಸಿಂದ್‌ ಬ್ಯಾಂಕ್‌ ೨ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿವೆ.

ರಾಜ್ಯದಲ್ಲಿನ ಹುದ್ದೆಗಳ ಮೀಸಲಾತಿ ವಿವರ ಇಲ್ಲಿದೆ;

ibps clerk recruitment 2022

ಕಳೆದ ವರ್ಷ ಪ್ರಕಟಿಸಿದಂತೆಯೇ ಈ ಬಾರಿಯು ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್‌ ) ಮತ್ತು ಮುಖ್ಯ ಪರೀಕ್ಷೆಯನ್ನು (ಮೇನ್‌) ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಲಾಗಿದೆ. ರಾಜ್ಯದ ಅಭ್ಯರ್ಥಿಗಳು ಈಗ ಕನ್ನಡ, ಕೊಂಕಣಿ, ಇಂಗ್ಲಿಷ್‌ ಮತ್ತು ಹಿಂದಿ ಈ ನಾಲ್ಕು ಭಾಷೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬಹುದು.

ಅರ್ಹತೆ ಏನು?
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್ ಮಾಡಿದವರೂ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಮಾಹಿತಿ ನೀಡಬೇಕಾಗಿರುವುದರಿಂದ ಈಗಾಗಲೇ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ. ವಿಧ್ಯಾರ್ಹತೆ ಜತೆಗೆ ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು. ಆಯಾ ರಾಜ್ಯದ ಹುದ್ದೆಗಳನ್ನು ಆಯಾ ರಾಜ್ಯದ ಭಾಷೆ ಗೊತ್ತಿರುವವರಿಗೇ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆಯ ವೇಳಾಪಟ್ಟಿ ಇಂತಿದೆ;

ibps clerk recruitment 2022

ವಯೋಮಿತಿ ಎಷ್ಟು?
20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ನಿಯಮಾನುಸಾರ ಪರಿಶಿಷ್ಟ ಜಾತಿ (ಎಸ್‌ಸಿ) / ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಈ ಹಿಂದಿಗೆ ಹೋಲಿಸಿದರೆ ಅರ್ಜಿ ಶುಲ್ಕವನ್ನು ಸ್ವಲ್ಪ ಹೆಚ್ಚಿಸಲಾಗಿದೆ. ಈ ಬಾರಿ ಎಸ್‌ಸಿ/ಎಸ್‌ಟಿ/ ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ೧೭೫ ರೂ. ಅರ್ಜಿ ಶುಲ್ಕ ಪಾವತಿಸಬೇಕು ( ಈ ಹಿಂದೆ 100 ರೂ. ಇತ್ತು) ಇತರ ಎಲ್ಲ ಅಭ್ಯರ್ಥಿಗಳು ೮೫೦ ರೂ. ಶುಲ್ಕ ಪಾವತಿಸಬೇಕಿರುತ್ತದೆ. (ಈ ಹಿಂದೆ ೬00 ರೂ. ಇತ್ತು) ಈ ಅರ್ಜಿ ಶುಲ್ಕವು ಜಿಎಸ್‌ಟಿ ಯನ್ನು ಒಳಗೊಂಡಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಇದಕ್ಕೆ ಜಿಎಸ್‌ಟಿ ಪಾವತಿಸಬೇಕಾಗಿಲ್ಲ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಎಲ್ಲೆಲ್ಲಿ ನಡೆಯಲಿದೆ ಪರೀಕ್ಷೆ?
ರಾಜ್ಯದ 1೨ ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ (ಪ್ರಿಲಿಮ್ಸ್‌) ಪರೀಕ್ಷೆ ನಡೆಯಲಿದೆ. ಈ ಜಿಲ್ಲಾ ಕೇಂದ್ರಗಳೆಂದರೆ ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ. ಮುಖ್ಯಪರೀಕ್ಷೆಯನ್ನು (ಮೇನ್‌ ಎಕ್ಸಾಮ್‌) ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಸಲಾಗುತ್ತದೆ.

ಇನ್ನಷ್ಟು ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://www.ibps.in

ಇದನ್ನೂ ಓದಿ| ವಿಸ್ತಾರ Job Tips | 10 ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ; ಅರ್ಜಿ ಸಲ್ಲಿಸಲು ನೀವು ಸಿದ್ಧರಿದ್ದೀರಾ?

Exit mobile version