ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳ (IBPS Clerk Recruitment 2023) ನೇಮಕಕ್ಕಾಗಿ ನಡೆಸುವ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ಗೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು ವಿಸ್ತರಿಸಿದೆ.
ಈ ಹಿಂದೆ ಪ್ರಕಟಿಸಲಾಗಿದ್ದ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನವೆಂದು ಪ್ರಕಟಿಸಲಾಗಿತ್ತು. ಈಗ ಅರ್ಜಿ ಸಲ್ಲಿಸಲು ಜುಲೈ 28 ರವರೆಗೂ ಅವಕಾಶ ನೀಡಲಾಗಿದ್ದು, ಈ ಸಂಬಂಧ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಶುಲ್ಕ ಪಾವತಿಸಲು ನೀಡಲಾಗಿದ್ದ ಅವಧಿಯನ್ನೂ ಜುಲೈ 28ರ ವರೆಗೆ ವಿಸ್ತರಿಸಲಾಗಿದೆ. ಇದನ್ನು ಹೊರತು ಪಡಿಸಿ ಈ ಹಿಂದಿನ ಅಧಿಸೂಚನೆಯಲ್ಲಿ ಬೇರೆಯಾವ ಬದಲಾವಣೆಯನ್ನೂ ಮಾಡಲಾಗಿಲ್ಲ ಎಂದು ಐಬಿಪಿಎಸ್ ತಿಳಿಸಿದೆ.
ಈ ಬಾರಿ ಒಟ್ಟು 4,045 ಹುದ್ದೆಗಳಿಗೆ ಮಾತ್ರ ನೇಮಕ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 253 ಹುದ್ದೆಗಳಿದ್ದು, ರಾಜ್ಯ ಮೂಲದ ಕೆನರಾ ಬ್ಯಾಂಕ್ 165 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ರಾಜ್ಯ ಮೂಲದ ಇನ್ನೊಂದು ಬ್ಯಾಂಕ್ ಕಾರ್ಪೋರೇಷನ್ ಬ್ಯಾಂಕ್ ಅನ್ನು ವಿಲೀನ ಮಾಡಿಕೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯದಲ್ಲಿ ಒಂದೇ ಒಂದು ಹುದ್ದೆಗೂ ನೇಮಕ ಮಾಡಿಕೊಳ್ಳುತ್ತಿಲ್ಲ. ಬ್ಯಾಂಕ್ ಆಫ್ ಇಂಡಿಯಾ 3, ಪಂಜಾಬ್ ನ್ಯಾಷನಲ್ ಬ್ಯಾಂಕ್ 15 ಮತ್ತು ಪಂಜಾಬ್ ಸಿಂದ್ ಬ್ಯಾಂಕ್ 9 ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 61 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿವೆ.
ರಾಜ್ಯದಲ್ಲಿನ ಹುದ್ದೆಗಳ ಮೀಸಲಾತಿ ವಿವರ ಇಲ್ಲಿದೆ;
2021ರಲ್ಲಿ ಪ್ರಕಟಿಸಿದಂತೆಯೇ ಈ ಬಾರಿಯು ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್ ) ಮತ್ತು ಮುಖ್ಯ ಪರೀಕ್ಷೆಯನ್ನು (ಮೇನ್) ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಲಾಗಿದೆ. ರಾಜ್ಯದ ಅಭ್ಯರ್ಥಿಗಳು ಈಗ ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ ಈ ನಾಲ್ಕು ಭಾಷೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಅರ್ಹತೆ ಏನು?
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್ ಮಾಡಿದವರೂ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಮಾಹಿತಿ ನೀಡಬೇಕಾಗಿರುವುದರಿಂದ ಈಗಾಗಲೇ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ. ವಿಧ್ಯಾರ್ಹತೆ ಜತೆಗೆ ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು. ಆಯಾ ರಾಜ್ಯದ ಹುದ್ದೆಗಳನ್ನು ಆಯಾ ರಾಜ್ಯದ ಭಾಷೆ ಗೊತ್ತಿರುವವರಿಗೇ ನೀಡಲಾಗುತ್ತದೆ.
ವಯೋಮಿತಿ ಎಷ್ಟು?
20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ನಿಯಮಾನುಸಾರ ಪರಿಶಿಷ್ಟ ಜಾತಿ (ಎಸ್‌ಸಿ) / ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಈ ಹಿಂದಿಗೆ ಹೋಲಿಸಿದರೆ ಅರ್ಜಿ ಶುಲ್ಕವನ್ನು ಸ್ವಲ್ಪ ಹೆಚ್ಚಿಸಲಾಗಿದೆ. ಈ ಬಾರಿ ಎಸ್‌ಸಿ/ಎಸ್‌ಟಿ/ ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಪಾವತಿಸಬೇಕು ಇತರ ಎಲ್ಲ ಅಭ್ಯರ್ಥಿಗಳು 850 ರೂ. ಶುಲ್ಕ ಪಾವತಿಸಬೇಕಿರುತ್ತದೆ. ಈ ಅರ್ಜಿ ಶುಲ್ಕವು ಜಿಎಸ್‌ಟಿ ಯನ್ನು ಒಳಗೊಂಡಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಇದಕ್ಕೆ ಜಿಎಸ್‌ಟಿ ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ : KEA Recruitment 2023 : ನಿಗಮ ಮಂಡಳಿಗಳಲ್ಲಿನ 670 ಹುದ್ದೆಗಳಿಗೆ ನೇಮಕ; ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ
ಎಲ್ಲೆಲ್ಲಿ ನಡೆಯಲಿದೆ ಪರೀಕ್ಷೆ?
ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆ ನಡೆಯಲಿದೆ. ಈ ಜಿಲ್ಲಾ ಕೇಂದ್ರಗಳೆಂದರೆ ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ. ಮುಖ್ಯಪರೀಕ್ಷೆಯನ್ನು (ಮೇನ್ ಎಕ್ಸಾಮ್) ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಸಲಾಗುತ್ತದೆ.
ಇನ್ನಷ್ಟು ಮಾಹಿತಿಗೆ ವೆಬ್‌ಸೈಟ್ ವಿಳಾಸ: https://www.ibps.in
ಪರೀಕ್ಷೆ ಹೇಗಿರುತ್ತದೆ? ಯಾವ ರೀತಿಯಲ್ಲಿ ಸಿದ್ಧತೆ ನಡೆಸಬೇಕೆಂಬ ಮಾಹಿತಿಯನ್ನು ಮುಂದೆ ʻವಿಸ್ತಾರ ನ್ಯೂಸ್ʼನಲ್ಲಿ ಪ್ರಕಟಿಸಲಾಗುತ್ತದೆ. ಉದ್ಯೋಗದ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.