Site icon Vistara News

IBPS Clerk Recruitment 2023 : ಬ್ಯಾಂಕುಗಳಲ್ಲಿನ ಕ್ಲರ್ಕ್‌ ಹುದ್ದೆ; ಜುಲೈ 1 ರಿಂದ ಅರ್ಜಿ ಸಲ್ಲಿಕೆ ಶುರು

IBPS Clerk Recruitment 2023

ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳ (IBPS Clerk Recruitment 2023) ನೇಮಕಕ್ಕಾಗಿ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ನಡೆಸಲಿದ್ದು, ಇನ್ನೆರಡು ದಿನಗಳ ಒಳಗಾಗಿ ಅಧಿಸೂಚನೆ ಹೊರಡಿಸಲಿದೆ. ಜುಲೈ 1 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ವಿಷಯವನ್ನು ಐಬಿಪಿಎಸ್‌ ಅಧಿಕೃತವಾಗಿ ಪ್ರಕಟಿಸಿದೆ.

ಜುಲೈ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಈ ಬಾರಿ ಎಷ್ಟು ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬುದನ್ನು ಇನ್ನೂ ಪ್ರಕಟಿಸಲಾಗಿಲ್ಲ. ಕಳೆದ ವರ್ಷ ಒಟ್ಟು 6,035 ಹುದ್ದೆಗಳಿಗೆ ನೇಮಕ ನಡೆದಿತ್ತು. ಈ ವರ್ಷ ಹೆಚ್ಚು ಕಡಿಮೆ ಇಷ್ಟೇ ಹುದ್ದೆಗಳಿಗೆ ನೇಮಕ ನಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಹಿಂದೆಲ್ಲ ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಕ್ಲರಿಕಲ್‌ ಕೇಡರ್‌ ಹುದ್ದೆಗಳ ಸಂಖ್ಯೆ ಹತ್ತು ಸಾವಿರವನ್ನು ಮೀರಿರುತ್ತಿತ್ತು.

ಕಳೆದ ವರ್ಷ ಪ್ರಕಟಿಸಿದಂತೆಯೇ ಈ ಬಾರಿಯೂ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್‌ ) ಮತ್ತು ಮುಖ್ಯ ಪರೀಕ್ಷೆಯನ್ನು (ಮೇನ್‌) ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಲಾಗಿದೆ. ರಾಜ್ಯದ ಅಭ್ಯರ್ಥಿಗಳು ಈಗ ಕನ್ನಡ, ಕೊಂಕಣಿ, ಇಂಗ್ಲಿಷ್‌ ಮತ್ತು ಹಿಂದಿ ಈ ನಾಲ್ಕು ಭಾಷೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬಹುದು.

ಅರ್ಹತೆ ಏನು?

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್ ಮಾಡಿದವರೂ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಮಾಹಿತಿ ನೀಡಬೇಕಾಗಿರುವುದರಿಂದ ಈಗಾಗಲೇ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ. ವಿದ್ಯಾರ್ಹತೆ ಜತೆಗೆ ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು. ಆಯಾ ರಾಜ್ಯದ ಹುದ್ದೆಗಳನ್ನು ಆಯಾ ರಾಜ್ಯದ ಭಾಷೆ ಗೊತ್ತಿರುವವರಿಗೇ ನೀಡಲಾಗುತ್ತದೆ.

ವೇಳಾಪಟ್ಟಿ ಇಂತಿದೆ;

ibps clerk recruitment time table 2023

ವಯೋಮಿತಿ ಎಷ್ಟು?

20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ನಿಯಮಾನುಸಾರ ಪರಿಶಿಷ್ಟ ಜಾತಿ (ಎಸ್‌ಸಿ) / ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: KEA Recruitment 2023 : ಸರ್ಕಾರದ ನಿಗಮ ಮಂಡಳಿಗಳಲ್ಲಿ 670 ಹುದ್ದೆ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು

ಎಲ್ಲೆಲ್ಲಿ ನಡೆಯಲಿದೆ ಪರೀಕ್ಷೆ?

ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ (ಪ್ರಿಲಿಮ್ಸ್‌) ಪರೀಕ್ಷೆ ನಡೆಯಲಿದೆ. ಈ ಜಿಲ್ಲಾ ಕೇಂದ್ರಗಳೆಂದರೆ ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ. ಮುಖ್ಯಪರೀಕ್ಷೆಯನ್ನು (ಮೇನ್‌ ಎಕ್ಸಾಮ್‌) ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಸಲಾಗುತ್ತದೆ.

ಈ ನೇಮಕದ ಸಂಪೂರ್ಣ ಮಾಹಿತಿಯನ್ನು ಐಬಿಪಿಎಸ್‌ ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸುತ್ತಿದ್ದಂತೆಯೇ ʻವಿಸ್ತಾರ ನ್ಯೂಸ್‌ʼ ವೆಬ್‌ಸೈಟ್‌ನಲ್ಲಿ ಒದಗಿಸಲಾಗುತ್ತದೆ. ಇದಕ್ಕಾಗಿ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ಗೆ ಆಗಾಗ ಭೇಟಿ ನೀಡುತ್ತಿರಿ.

Exit mobile version