ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೆಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೇನಿ (IBPS PO Recruitment 2022) ಹುದ್ದೆಗಳ ನೇಮಕಕ್ಕಾಗಿ ‘ಸಾಮಾನ್ಯ ಪ್ರವೇಶ ಪ್ರಕ್ರಿಯೆ’ ನಡೆಸಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಆಗಸ್ಟ್ ೨೨ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಈ ಬಾರಿ ಒಟ್ಟು ೬,432 ಹುದ್ದೆಗಳಿಗೆ ನೇಮಕ ನಡೆಯಲಿದೆ. ಇಷ್ಟೊಂದು ಹುದ್ದೆಗಳಿಗೆ ನೇಮಕ ನಡೆಯುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಹೆಚ್ಚು. ಕಳೆದ ವರ್ಷ ಅಂದರೆ ೨೦೨೧ ರಲ್ಲಿ 4,135 ಹುದ್ದೆಗಳಿಗೆ ನೇಮಕ ಮಾಡಿ ಕೊಳ್ಳಲಾಗಿತ್ತು. ೨೦೨೦ರಲ್ಲಿ 3,517 ಹುದ್ದೆಗಳಿಗೆ, ೨೦೧೯ರಲ್ಲಿ 4,336 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 2018ರಲ್ಲಿ 4,102, 2017ರಲ್ಲಿ 3,562 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆಯ ವೇಳಾಪಟ್ಟಿ ಇಂತಿದೆ;
ಒಟ್ಟು ೬,432 ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯ ಅಭ್ಯರ್ಥಿ ಗಳಿಗೆ 996 ಹುದ್ದೆಗಳು, ಪರಿಶಿಷ್ಟ ಪಂಗಡದವರಿಗೆ 483, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿ ಗಳಿಗೆ 1741 ಹುದ್ದೆಗಳು, ಆರ್ಥಿಕವಾಗಿ ಹಿಂದುಳಿದ ವರ್ಗದರಿಗೆ 616 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2,596 ಹುದ್ದೆಗಳನ್ನು ಮೀಸಲಿಡಲಾಗಿದೆ.
ಹುದ್ದೆಗಳ ಮೀಸಲಾತಿ ವಿವರ ಇಲ್ಲಿದೆ;
ಈ ವರ್ಷ ರಾಜ್ಯ ಮೂಲದ ರಾಷ್ಟ್ರೀಕೃತ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಅತಿಹೆಚ್ಚು ಅಂದರೆ 2,500 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,094 ಹುದ್ದೆಗಳಿಗೆ ನೇಮಕ ನಡೆಯಲಿದೆ. ಒಟ್ಟು 11 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ ಕೇವಲ 6 ಬ್ಯಾಂಕುಗಳು ಮಾತ್ರ ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದಾಗಿ ಈಗಾಗಲೇ ಪ್ರಕಟಿಸಿದ್ದು, ಹುದ್ದೆಗಳ ಸಂಖ್ಯೆಯನ್ನು ತಿಳಿಸಿವೆ.
ವಿದ್ಯಾರ್ಹತೆ ಏನು?
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್ ಮಾಡಿದವರೂ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಮಾಹಿತಿ ನೀಡಬೇಕಾಗಿರುವುದರಿಂದ ಈಗಾಗಲೇ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು.
ವಯೋಮಿತಿ ಎಷ್ಟು?
20 ವರ್ಷದಿಂದ ೩೦ ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ನಿಯಮಾನುಸಾರ ಪರಿಶಿಷ್ಟ ಜಾತಿ (ಎಸ್‌ಸಿ) / ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಈ ಹಿಂದಿಗೆ ಹೋಲಿಸಿದರೆ ಅರ್ಜಿ ಶುಲ್ಕವನ್ನು ಸ್ವಲ್ಪ ಹೆಚ್ಚಿಸಲಾಗಿದೆ. ಈ ಬಾರಿ ಎಸ್‌ಸಿ/ಎಸ್‌ಟಿ/ ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ೧೭೫ ರೂ. ಅರ್ಜಿ ಶುಲ್ಕ ಪಾವತಿಸಬೇಕು ( ಈ ಹಿಂದೆ 100 ರೂ. ಇತ್ತು) ಇತರ ಎಲ್ಲ ಅಭ್ಯರ್ಥಿಗಳು ೮೫೦ ರೂ. ಶುಲ್ಕ ಪಾವತಿಸಬೇಕಿರುತ್ತದೆ. (ಈ ಹಿಂದೆ ೬00 ರೂ. ಇತ್ತು) ಈ ಅರ್ಜಿ ಶುಲ್ಕವು ಜಿಎಸ್‌ಟಿ ಯನ್ನು ಒಳಗೊಂಡಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಇದಕ್ಕೆ ಜಿಎಸ್‌ಟಿ ಪಾವತಿಸಬೇಕಾಗಿಲ್ಲ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಎಲ್ಲೆಲ್ಲಿ ನಡೆಯಲಿದೆ ಪರೀಕ್ಷೆ?
ರಾಜ್ಯದ 1೪ ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆ ನಡೆಯಲಿದೆ. ಈ ಜಿಲ್ಲಾ ಕೇಂದ್ರಗಳೆಂದರೆ ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿ. ಈ ಬಾರಿ ಚಿಕ್ಕಬಳ್ಳಾಪುರ ಮತ್ತು ತುಮಕೂರಿನಲ್ಲಿ ಈ ಪರೀಕ್ಷೆ ನಡೆಸುತ್ತಿರುವುದು ವಿಶೇಷ. ಮುಖ್ಯಪರೀಕ್ಷೆಯನ್ನು (ಮೇನ್ ಎಕ್ಸಾಮ್) ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಸಲಾಗುತ್ತದೆ.
ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ
ಪ್ರೊಬೆಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಎರಡು ಹಂತದ ಲಿಖಿತ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆ) ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಮೂರು ವಿಷಯಗಳನ್ನು ಒಳಗೊಂಡಿದ್ದು, 100 ಅಂಕಗಳಿಗೆ ನಡೆದರೆ, ಮುಖ್ಯ ಪರೀಕ್ಷೆಯು ೫ ವಿಷಯಗಳನ್ನೊಳಗೊಂಡಿದ್ದು, 225 ಅಂಕಗಳಿಗೆ ನಡೆಯಲಿದೆ. ಇದರಲ್ಲಿ ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ವಿಸ್ತೃತ ಲಿಖಿತ ಪರೀಕ್ಷೆಯೂ ಸೇರಿದೆ. ಆದರೆ ಈ ಎರಡೂ ಹಂತದ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಬಹುದಾಗಿದೆ. ಕನ್ನಡ ಸೇರಿದಂತೆ ಬೇರೆ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.
ಐಬಿಪಿಎಸ್ ಗ್ರಾಮೀಣ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಹುದ್ದೆಗಳಿಗೆ ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಆದರೆ ಪ್ರೊಬೆಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳಿಗೆ ಮಾತ್ರ ಇನ್ನೂ ಈ ಹಿಂದಿನ ಕ್ರಮವನ್ನೇ ಅನುಸರಿಸುತ್ತಿದೆ.
ಪರೀಕ್ಷಾ ಪೂರ್ವ ತರಬೇತಿಯೂ ಇದೆ
ಎಸ್‌ಸಿ/ಎಸ್‌ಟಿ/ ಅಲ್ಪಸಂಖ್ಯಾತ ಸಮುದಾಯದ ಸೀಮಿತ ಸಂಖ್ಯೆಯ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನಡೆಸಲಾಗುತ್ತದೆ. ಇಂತಹ ತರಬೇತಿ ಪಡೆಯಲು ಬಯಸುವವರು ಆನ್‌ಲೈನ್ ಅರ್ಜಿ ಸಲ್ಲಿಕೆ ಸಂದರ್ಭ ದಲ್ಲಿ ಸಂಬಂಧಪಟ್ಟ ವಿಭಾಗದಲ್ಲಿ ಟಿಕ್ ಮಾಡಬೇಕು. ಪರೀಕ್ಷಾ ಪೂರ್ವ ತರಬೇತಿಯು ಉಚಿತವಾಗಿ ರಾಜ್ಯದ ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರಿನಲ್ಲಿ ನಡೆಯಲಿದೆ. ಕೋವಿಡ್-೧೯ ಕಾರಣದಿಂದ ಈ ತರಬೇತಿ ನಡೆಸುವ ಬಗ್ಗೆ ಅನುಮಾನಗಳಿವೆ.
ನೇಮಕ ಹೇಗೆ?
ಪ್ರೊಬೆಷನರಿ ಆಫೀಸರ್ ಹುದ್ದೆಗೆ ಎರಡು ಹಂತದ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಖ್ಯ ಪರೀಕ್ಷೆ ಬರೆಯಬಹುದಾಗಿದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನಕ್ಕೆ ಆಹ್ವಾನಿಸುವಾಗ ಮತ್ತು ಮೆರಿಟ್ ಲಿಸ್ಟ್ ಸಿದ್ಧಪಡಿಸುವಾಗ ಮುಖ್ಯ ಪರೀಕ್ಷೆಯ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ರಾಷ್ಟ್ರೀಕೃತ ಬ್ಯಾಂಕುಗಳು ಸಂದರ್ಶನ ನಡೆಸಲಿದ್ದು, ಪ್ರತಿ ರಾಜ್ಯದ ನೋಡಲ್ ಬ್ಯಾಂಕುಗಳು ಈ ಸಂದರ್ಶನವನ್ನು ಕೋ ಆರ್ಡಿನೇಟ್ ಮಾಡಲಿವೆ. ಆಯ್ದ ಕೇಂದ್ರಗಳಲ್ಲಿ ಮಾತ್ರ ಸಂದರ್ಶನ ನಡೆಯಲಿದೆ.
ಇನ್ನಷ್ಟು ಮಾಹಿತಿಗೆ ವೆಬ್‌ಸೈಟ್ ವಿಳಾಸ: https://www.ibps.in
ಇದನ್ನೂ ಓದಿ| Job News | ಸರ್ಕಾರಿ ಹುದ್ದೆಗೆ ಪರೀಕ್ಷೆ; 15 ಸಾವಿರ ಅಭ್ಯರ್ಥಿಗಳಿಗೆ ಸರ್ಕಾರದಿಂದ ಉಚಿತ ತರಬೇತಿ