Site icon Vistara News

IBPS RRB Notification 2023 : ಗ್ರಾಮೀಣ ಬ್ಯಾಂಕಿನ ಎಲ್ಲ ಹುದ್ದೆಗಳಿಗೂ ಕನ್ನಡದಲ್ಲಿ ಏಕಿಲ್ಲ ಪರೀಕ್ಷೆ?

IBPS RRB Notification 2023

#image_title

ಬೆಂಗಳೂರು: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ದೇಶದ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿ) ಖಾಲಿ ಇರುವ 8,612 ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (IBPS RRB Notification 2023) ಅರ್ಜಿ ಆಹ್ವಾನಿಸಿದೆ. ರಾಜ್ಯದ ಎರಡು ಗ್ರಾಮೀಣ ಬ್ಯಾಂಕುಗಳಲ್ಲಿನ 806 ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಆದರೆ ಕೆಲವು ಹುದ್ದೆಗಳಿಗೆ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದಕ್ಕೆ ಆಕ್ಷೇಪಣೆ ವ್ಯಕ್ತವಾಗಿದೆ.

ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಒಟ್ಟು 806 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಇದರಲ್ಲಿ ಆಫೀಸ್‌ ಅಸಿಸ್ಟೆಂಟ್‌ (ಮಲ್ಪಿ ಪರ್ಪಸ್‌)(OFFICE ASSISTANTS (MULTIPURPOSE)) ಹುದ್ದೆಗಳ ಸಂಖ್ಯೆ 450. ಕರ್ನಾಟಕ ಗ್ರಾಮೀಣ ಬ್ಯಾಂಕ್‌ 400 ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 50 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ. ಆಫೀಸರ್‌ ಸ್ಕೇಲ್‌-Iನ (OFFICER SCALE-I) ಒಟ್ಟು 350 ಹುದ್ದೆಗಳಿದ್ದು, ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ 200 ಹುದ್ದೆಗಳಿಗೆ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ 150 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ.
ಇದಲ್ಲದೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಆಫೀಸರ್‌ ಸ್ಕೇಲ್‌ -II (ಕಾನೂನು) 4 ಹುದ್ದೆಗಳಿಗೆ ಹಾಗೂ ಆಫೀಸರ್‌ ಸ್ಕೇಲ್‌ -II (ಸಿಎ) 2 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.

ಕನ್ನಡಿಗರ ಹೋರಾಟದ ಫಲವಾಗಿ ಕಳೆದ ಎರಡು ವರ್ಷಗಳಿಂದ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ಕೆಲವು ಹುದ್ದೆಗಳಿಗೆ ಕನ್ನಡದಲ್ಲಿಯೇ ಈ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿದೆ. ಮುಖ್ಯವಾಗಿ ಆಫೀಸ್‌ ಅಸಿಸ್ಟೆಂಟ್‌ (ಮಲ್ಪಿ ಪರ್ಪಸ್‌) ಹಾಗೂ ಆಫೀಸರ್‌ ಸ್ಕೇಲ್‌-Iರ ಹುದ್ದೆಗಳಿಗೆ ನಡೆಸಲಾಗುವ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್‌) ಮತ್ತು ಮುಖ್ಯ ಪರೀಕ್ಷೆಯನ್ನು (ಮೇನ್‌) ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿಯೇ ಬರೆಯಬಹುದು. ಇದಲ್ಲದೆ, ಇಂಗ್ಲಿಷ್‌, ಹಿಂದಿ, ಕೊಂಣಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.

ಆದರೆ ಆಫೀಸರ್‌ ಸ್ಕೇಲ್‌-II ಮತ್ತು ಆಫೀಸರ್‌ ಸ್ಕೇಲ್‌-IIIಯ ಹುದ್ದೆಗಳಿಗೆ ಮಾತ್ರ ಈ ಹಿಂದಿನಂತೆಯೇ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಹುದ್ದೆಗಳಿಗೆ ಏಕ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಿರುವುದಕ್ಕೂ ಈಗ ಆಕ್ಷೇಪಣೆ ವ್ಯಕ್ತವಾಗುತ್ತಿದ್ದು, ಈ ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಯನ್ನೂ ಕನ್ನಡದಲ್ಲಿ ನಡೆಸಬೇಕೆಂದು ಒತ್ತಾಯಿಸಲಾಗುತ್ತಿದೆ.

ನೋಡಿ… ಈ ಎಲ್ಲ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಬಹುದು.
r k balachandra IBPS RRB Notification 2023

ʻʻಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿರುವುದರ ಹಿಂದಿನ ಉದ್ದೇಶವೇ ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್‌ ಸೇವೆ ಗ್ರಾಮೀಣ ಭಾಗದ ಗ್ರಾಹಕರಿಗೆ ಲಭ್ಯವಾಗಬೇಕೆಂಬುದಾಗಿದೆ. ಹೀಗಾಗಿ ಸ್ಥಳೀಯ ಭಾಷೆಯನ್ನು ಚೆನ್ನಾಗಿ ಬಲ್ಲವರೇ ಈ ಬ್ಯಾಂಕುಗಳಲ್ಲಿನ ಅಧಿಕಾರಿ ಹುದ್ದೆಗಳಿಗೆ ನೇಮಕಗೊಳ್ಳಬೇಕು. ಆದ್ದರಿಂದ ಆಫೀಸರ್‌ ಸ್ಕೇಲ್‌-II ಮತ್ತು ಆಫೀಸರ್‌ ಸ್ಕೇಲ್‌-III ಹುದ್ದೆಗಳಿಗೂ ಕನ್ನಡ ಬಲ್ಲವರೇ ನೇಮಕಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕುʼʼ ಎಂದು ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ, ನಿವೃತ್ತ ಬ್ಯಾಂಕ್‌ ಅಧಿಕಾರಿ ಆರ್.‌ಕೆ. ಬಾಲಚಂದ್ರ ಒತ್ತಾಯಿಸಿದ್ದಾರೆ.

ಈ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಯನ್ನು ಹಿಂದಿನಿಂದಲೂ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ನಡೆಸಿಕೊಂಡು ಬರಲಾಗಿದೆ. ಇದಕ್ಕೆ ಬದಲಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಡೆಸಬಹುದು. ಈ ಪರೀಕ್ಷೆಯು ಮುಖ್ಯವಾಗಿ ಜ್ಞಾನಕ್ಕೆ ಸಂಬಂಧಿಸಿದಂತೆ ನಡೆಯುವುದರಿಂದ ಕನ್ನಡದಲ್ಲಿ ಪ್ರಶ್ನೆಗಳು ಅರ್ಥವಾಗದೇ ಇದ್ದಲ್ಲಿ, ಇಂಗ್ಲಿಷ್‌ನಲ್ಲಿ ನೋಡಿಕೊಂಡು ಅಭ್ಯರ್ಥಿಗಳು ಉತ್ತರ ಬರೆಯುತ್ತಾರೆ. ಈ ಬದಲಾವಣೆಯನ್ನು ಐಬಿಪಿಎಸ್‌ ಕೂಡಲೇ ಮಾಡಲೇಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಈ ಬಾರಿ ಆಫೀಸರ್‌ ಸ್ಕೇಲ್‌-II ನ ಆರು ಹುದ್ದೆಗಳಿಗಷ್ಟೇ ನೇಮಕ ನಡೆಯುತ್ತಿದೆ. ಆಫೀಸರ್‌ ಸ್ಕೇಲ್‌-III ನ ಯಾವ ಹುದ್ದೆಗೂ ನೇಮಕ ನಡೆಯುತ್ತಿಲ್ಲ. ಒಂದು ಹುದ್ದೆಗೆ ನೇಮಕ ನಡೆದರೂ ಕನ್ನಡದಲ್ಲಿ ಬರೆಯುವ ಅವಕಾಶವನ್ನು ಐಬಿಪಿಎಸ್‌ ನೀಡಬೇಕು ಎಂದು ಆರ್‌.ಕೆ. ಬಾಲಚಂದ್ರ ಹೇಳಿದ್ದಾರೆ.

ವಿವರವಾದ ಅಧಿಸೂಚನೆಯನ್ನು ಓದಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ರಾಜ್ಯದಲ್ಲಿ ಎಲ್ಲಿಲ್ಲಿ ಪರೀಕ್ಷೆ?
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿನ ಹುದ್ದೆಗಳಿಗಾಗಿ ಐಬಿಪಿಎಸ್‌ ನಡೆಸುವ ಈ ಪರೀಕ್ಷೆಗಳನ್ನು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ, ಬೀದರ್‌, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ನಡೆಸಲಾಗುತ್ತದೆ. ಮುಖ್ಯಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ನಡೆಸಲಾಗುತ್ತೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್‌ ಕೇಡರ್‌ ಹುದ್ದೆಗಳಿಗೆ ಐಬಿಪಿಎಸ್‌ ಕನ್ನಡದಲ್ಲಿಯೇ ಪರೀಕ್ಷೆ ನಡೆಸಿಕೊಂಡು ಬಂದಿದೆ. ಆದರೆ ಪ್ರೊಬೆಷನರಿ ಆಫೀಸರ್‌ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ನಡೆಸಲಾಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಎಲ್ಲ ಹುದ್ದೆಗಳಿಗೂ ಕನ್ನಡಲ್ಲಿ ನೇಮಕಾತಿ ಪರೀಕ್ಷೆ ನಡೆಸಿ, ನೇಮಕ ಮಾಡಿಕೊಳ್ಳಬೇಕೆಂದು ಕನ್ನಡ ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ಇದನ್ನೂ ಓದಿ: IBPS RRB Notification 2023 : ಗ್ರಾಮೀಣ ಬ್ಯಾಂಕುಗಳಲ್ಲಿ 8,612 ಹುದ್ದೆ; ಐಬಿಪಿಎಸ್‌ನಿಂದ ಅರ್ಜಿ ಆಹ್ವಾನ

Exit mobile version