ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿ) ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ (ಮಲ್ಪಿ ಪರ್ಪಸ್) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (IBPS RRB Notification 2023) ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆ ಅಂದರೆ ಜೂನ್ 21 ರಂದು ಕೊನೆಯ ದಿನವಾಗಿದೆ.
ಈ ಬಾರಿ 9,075 ಹುದ್ದೆಗಳಿಗೆ ನೇಮಕ ನಡೆಯಲಿದೆ. ಮೊದಲಿಗೆ 8,612 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಪ್ರಕಟಿಸಲಾಗಿತ್ತಾದರೂ ಜೂನ್ 16 ರಂದು ಪ್ರಕಟಣೆ ಹೊರಡಿಸಿರುವ ಐಬಿಪಿಎಸ್ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದರಲ್ಲಿ ಆಫೀಸ್ ಅಸಿಸ್ಟೆಂಟ್ (ಮಲ್ಪಿ ಪರ್ಪಸ್) ಹುದ್ದೆಗಳ ಸಂಖ್ಯೆಯೇ 5,650. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ. ಇನ್ನೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯದಲ್ಲಿವೆ 832 ಹುದ್ದೆ
ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳು ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು, ಒಟ್ಟು 806 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷ 832 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು.
ಇದರಲ್ಲಿ ಆಫೀಸ್ ಅಸಿಸ್ಟೆಂಟ್ (ಮಲ್ಪಿ ಪರ್ಪಸ್)(OFFICE ASSISTANTS (MULTIPURPOSE)) ಹುದ್ದೆಗಳ ಸಂಖ್ಯೆಯೇ 450. ಕರ್ನಾಟಕ ಗ್ರಾಮೀಣ ಬ್ಯಾಂಕ್ 400 ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 50 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ. ಆಫೀಸರ್ ಸ್ಕೇಲ್-Iನ (OFFICER SCALE-I) ಒಟ್ಟು 350 ಹುದ್ದೆಗಳಿದ್ದು, ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅತಿ ಹೆಚ್ಚು ಎಂದರೆ 200 ಹುದ್ದೆಗಳಿಗೆ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 150 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ.
ಇದಲ್ಲದೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಫೀಸರ್ ಸ್ಕೇಲ್ -II (ಕಾನೂನು) 4 ಹುದ್ದೆಗಳಿಗೆ ಹಾಗೂ ಆಫೀಸರ್ ಸ್ಕೇಲ್ -II (ಸಿಎ) 2 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.
ಅರ್ಜಿಸಲ್ಲಿಸಲು ವೇಳಾಪಟ್ಟಿ ಇಂತಿದೆ;
ಅರ್ಜಿ ಸಲ್ಲಿಸಲು ಇಲ್ಲಿ (Click Here) ಕ್ಲಿಕ್ ಮಾಡಿ
ವಿದ್ಯಾರ್ಹತೆ ಏನು?
ಆಫೀಸ್ ಅಸಿಸ್ಟೆಂಟ್ (ಮಲ್ಪಿ ಪರ್ಪಸ್): ಈ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆಯನ್ನು ತಿಳಿದಿರಬೇಕಾದದು ಅವಶ್ಯಕ. ಅಂದರೆ ಕನ್ನಡದಲ್ಲಿ ಮಾತನಾಡಲು, ಬರೆಯಲು ಚೆನ್ನಾಗಿ ತಿಳಿದಿರಬೇಕು. ಜತೆಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರಬೇಕು.
ಆಫೀಸರ್ ಸ್ಕೇಲ್-I: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದರೆ ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ, ಪಶುಸಂಗೋಪನೆ, ಪಶು ವಿಜ್ಞಾನ (Veterinary Science), ಅಗ್ರಿಕಲ್ಚರ್ ಎಂಜಿನಿಯರಿಂಗ್, ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಅಂಡ್ ಕೋ-ಆಪರೇಷನ್, ಇನ್‌ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್‌ಮೆಂಟ್, ಲಾ, ಎಕನಾಮಿಕ್ಸ್ ಅಥವಾ ಅಕೌಂಟೆನ್ಸಿ ಈ ಯಾವುದಾದರೂ ವಿಷಯಗಳಲ್ಲಿ ಪದವಿ ಪಡೆದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಇದಲ್ಲದೆ, ಪ್ರಾದೇಶಿಕ ಗ್ರಾಮೀಣ ಬ್ಯಾಂಕು ಯಾವ ರಾಜ್ಯಕ್ಕೆ ಸೇರಿದೆಯೋ ಅಲ್ಲಿಯ ಸ್ಥಳೀಯ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು. (8ನೇ ತರಗತಿಯವರೆಗೆ ಅಥವಾ ಅದಕ್ಕಿಂತಲೂ ಹೆಚ್ಚಿನ ತರಗತಿಗಳಲ್ಲಿ ಸ್ಥಳೀಯ ಭಾಷೆಯನ್ನು ಅಂದರೆ ಕನ್ನಡವನ್ನು ರಾಜ್ಯ ಪಠ್ಯಕ್ರಮದ ಪ್ರಕಾರ ಅಭ್ಯಾಸಿಸಿರಬೇಕು) ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕಾದದು ಅಪೇಕ್ಷಣೀಯ.
ಆಫೀಸರ್ ಸ್ಕೇಲ್-II: ಈ ಸ್ಕೇಲ್‌ನ ಜನರಲ್ ಬ್ಯಾಂಕಿಂಗ್ ಆಫೀಸರ್ ಹುದ್ದೆಗೆ ಅಂಗೀಕೃತ ವಿವಿಯಿಂದ ಶೇಕಡಾ 50 ಅಂಕಗಳೊಂದಿಗೆ ಯಾವುದೇ ಪದವಿ ಪಡೆದಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ, ಪಶುಸಂಗೋಪನೆ, ಪಶು ವಿಜ್ಞಾನ (Veterinary Science), ಅಗ್ರಿಕಲ್ಚರ್ ಎಂಜಿನಿಯರಿಂಗ್, ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಅಂಡ್ ಕೋ-ಆಪರೇಷನ್, ಇನ್‌ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್‌ಮೆಂಟ್, ಲಾ, ಎಕನಾಮಿಕ್ಸ್ ಅಥವಾ ಅಕೌಂಟೆನ್ಸಿ ಈ ಯಾವುದಾದರೂ ವಿಷಯಗಳಲ್ಲಿ ಪದವಿ ಪಡೆದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಇದರೊಂದಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಎರಡು ವರ್ಷಗಳ ಕಾಲ ಆಫೀಸರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಆಫೀಸರ್ ಸ್ಕೇಲ್-IIನ ಕಾನೂನು (ಲಾ) ಹುದ್ದೆಗೆ ಕಾನೂನು ಪದವಿ ಪಡೆದಿರಬೇಕು ಮತ್ತು ಯಾವುದೇ ಬ್ಯಾಂಕ್ ಅಥವಾ ಹಣಕಾಸಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಎರಡು ವರ್ಷಗಳ ಕಾಲ ಆಫೀಸರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಆಫೀಸರ್ ಸ್ಕೇಲ್-IIನ ಚಾರ್ಟರ್ಡ್ ಅಕೌಂಟೆಂಟ್ ಹುದ್ದೆಗೆ ಸಿಎ ಮಾಡಿದವರು ಮತ್ತು ಸಿಎ ಆಗಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಆಫೀಸರ್ ಸ್ಕೇಲ್-III ರ ಹುದ್ದೆಗಳು ರಾಜ್ಯದ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾಲಿ ಇಲ್ಲ. ಹೀಗಾಗಿ ಇವುಗಳ ವಿದ್ಯಾರ್ಹತೆಯನ್ನು ಇಲ್ಲಿ ನೀಡಲಾಗಿಲ್ಲ.
ವಿವರವಾದ ಅಧಿಸೂಚನೆಯನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಅರ್ಜಿ ಶುಲ್ಕ ಎಷ್ಟು?
ಆಫೀಸರ್ ಹುದ್ದೆಗೆ ಮತ್ತು ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 175 ರೂ. ಹಾಗೂ ಇತರರು 850 ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ.
ಇಂಟರ್‌ನೆಟ್ ಬ್ಯಾಂಕಿಂಗ್, ಕ್ರೆಡಿಟ್- ಡೆಬಿಟ್ ಕಾರ್ಡ್‌ಗಳ ಮೂಲಕ, ಮೊಬೈಲ್ ವ್ಯಾಲೆಟ್‌ಗಳ ಮೂಲಕ ಅಥವಾ ಐಎಂಪಿಎಸ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ವಯೋಮಿತಿ ಎಷ್ಟು?
ಆಫೀಸರ್ ಸ್ಕೇಲ್-III: ಸೀನಿಯರ್ ಮ್ಯಾನೇಜರ್ ಹುದ್ದೆಗೆ 21ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಆಫೀಸರ್ ಸ್ಕೇಲ್-II: ಮ್ಯಾನೇಜರ್ ಹುದ್ದೆಗೆ 21ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಆಫೀಸರ್ ಸ್ಕೇಲ್-I: ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಆಫೀಸ್ ಅಸಿಸ್ಟೆಂಟ್ (ಮಲ್ಪಿ ಪರ್ಪಸ್) ಹುದ್ದೆಗೆ 18 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.
ಇದನ್ನೂ ಓದಿ : PDO Recruitment 2023 : ಪಿಡಿಒ ನೇಮಕಕ್ಕೆ ಮುಂದಾದ ಸರ್ಕಾರ; ಅರ್ಜಿ ಸಲ್ಲಿಸಲು ಈಗಲೇ ರೆಡಿಯಾಗಿ!