Site icon Vistara News

Agneepath Recruitment | ಮಹಿಳಾ ಅಗ್ನಿವೀರರ ನೇಮಕಕ್ಕೆ ಬೆಂಗಳೂರಿನಲ್ಲಿಯೇ ನಡೆಯಲಿದೆ ರ‍್ಯಾಲಿ

Agneepath Recruitment

ಬೆಂಗಳೂರು: ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್‌ʼ (Agneepath Recruitment) ಅಡಿಯಲ್ಲಿ ಭಾರತೀಯ ಸೇನೆಯು ಮಹಿಳಾ ಅಗ್ನಿವೀರರ (Agniveer) ನೇಮಕಕ್ಕೆ ಬೆಂಗಳೂರಿನಲ್ಲಿ ನವೆಂಬರ್‌ ೧ ರಿಂದ ೩ ರವರೆಗೆ ನೇಮಕಾತಿ ರ‍್ಯಾಲಿ ನಡೆಸಲಿದೆ.

ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಈ ರ‍್ಯಾಲಿಯಲ್ಲಿ ಕರ್ನಾಟಕದ ಅರ್ಹ ಮಹಿಳಾ ಅಭ್ಯರ್ಥಿಗಳು ಮಾತ್ರವಲ್ಲದೆ, ಕೇರಳ, ಲಕ್ಷಾದ್ವೀಪದ ಮಹಿಳಾ ಅಭ್ಯರ್ಥಿಗಳೂ ಭಾಗವಹಿಸಬಹುದಾಗಿದೆ. ಮಿಲ್ಟ್ರೀ ಪೊಲೀಸ್‌ನ ಜನರಲ್‌ ಡ್ಯೂಡಿ ಹುದ್ದೆಗಳಿಗೆ ಈ ಮಹಿಳಾ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ರ‍್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಈಗಲೇ ಹೆಸರು ನೊಂದಾಯಿಸಿಕೊಳ್ಳಬೇಕಾಗಿದೆ.

ಈಗಾಗಲೇ ಹೆಸರು ನೊಂದಾಯಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಸೆಪ್ಟೆಂಬರ್‌ 7,2022 ಕೊನೆಯ ದಿನವಾಗಿರುತ್ತದೆ. ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ https://joinindianarmy.nic.in ನಲ್ಲಿ ಹೆಸರು ನೊಂದಾಯಿಸಲು ಅವಕಾಶ ನೀಡಲಾಗಿದೆ.

ಹೆಸರು ನೊಂದಾಯಿಸಲು ಲಿಂಕ್‌: https://joinindianarmy.nic.in/BRAVOUserLoginAgniveer.htm

ಈಗಲೇ ಹೆಸರು ನೊಂದಾಯಿಸಿ, ಪ್ರವೇಶ ಪತ್ರವನ್ನು ಪಡೆದುಕೊಳ್ಳದ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ರ‍್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಸೇನೆಯು ಸ್ಪಷ್ಟಪಡಿಸಿದೆ.

ರ‍್ಯಾಲಿಯು ನಡೆಯುವುದಕ್ಕಿಂತ ಇಪ್ಪತ್ತು ದಿನ ಮೊದಲು ಅಭ್ಯರ್ಥಿಗಳಿಗೆ ಅವರು ನೀಡಿರುವ ಇ-ಮೇಲ್‌ ವಿಳಾಸಕ್ಕೆ ಪ್ರವೇಶ ಪತ್ರವನ್ನು ಕಳುಹಿಸಲಾಗುತ್ತದೆ. ಇದರಲ್ಲಿ ಎಂದು, ಯಾವ ಸಮಯಕ್ಕೆ ರ‍್ಯಾಲಿಗೆ ಹಾಜರಾಗಬೇಕೆಂದು ತಿಳಿಸಲಾಗಿರುತ್ತದೆ. ಅಭ್ಯರ್ಥಿಗಳು ನಿಗದಿತ ದಿನದಂದೇ ಹಾಜರಾಗಬೇಕಿರುತ್ತದೆ.

ವಿದ್ಯಾರ್ಹತೆ ಏನು?
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.45 ಅಂಕ ಪಡೆದು ಉತ್ತೀರ್ಣರಾದವರು (ಪ್ರತಿ ವಿಷಯದಲ್ಲಿಯೂ ಶೇ.33 ಅಂಕಪಡೆದಿರಬೇಕಾದದು ಕಡ್ಡಾಯ) ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
ಲಘುವಾಹನ ಚಾಲನೆಯ ಪರವಾನಿಗೆ ಹೊಂದಿದವರನ್ನು ಆಧ್ಯತೆಯ ಮೇರೆಗೆ ಚಾಲಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ವಯೋಮಿತಿ ಎಷ್ಟು?
17 ವರೆ ವರ್ಷದಿಂದ 23 ವರ್ಷದೊಳಗಿನವರು ಆಗ್ನಿವೀರರಾಗಲು ಅವಕಾಶ ನೀಡಲಾಗಿದೆ (ಅಭ್ಯರ್ಥಿಗಳು 1999ರ ಅಕ್ಟೋಬರ್‌ 1 ರಿಂದ 2005ರ ಏಪ್ರಿಲ್‌ 1 ಒಳಗೆ ಜನಿಸಿರಬೇಕು). ಅಭ್ಯರ್ಥಿಗಳು 162 ಸೆಂ.ಮೀ. ಎತ್ತರವಿರಬೇಕು. ಸೇನಾ ನಿಯಮದ ಪ್ರಕಾರ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕು.

ರ‍್ಯಾಲಿಯಲ್ಲಿ ಏನೆಲ್ಲಾ ಪರೀಕ್ಷೆ ನಡೆಯಲಿದೆ?
ಈ ಹಿಂದಿನಂತೆಯೇ ರ‍್ಯಾಲಿಯ ಆರಂಭದಲ್ಲಿ ಸಾಮಾನ್ಯ ಸ್ಕ್ರೀನಿಂಗ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ದೈಹಿಕ ಸದೃಢತೆಯನ್ನು ಪರೀಕ್ಷಿಸಲಾಗುತ್ತದೆ.
ಪಿಇಟಿ ಹಂತದ ಪರೀಕ್ಷೆಗಳು ಈ ಕೆಳಗಿನಂತೆ ನಡೆಯಲಿವೆ

ಲಿಖಿತ ಪರಿಕ್ಷೆಯೂ ನಡೆಯಲಿದೆ!
ನೇಮಕಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ (CEE)ಯನ್ನು ರ‍್ಯಾಲಿಯನ್ನು ವೈದ್ಯಕೀಯವಾಗಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ನಡೆಸಲಾಗುತ್ತದೆ. ರ‍್ಯಾಲಿಯಲ್ಲಿಯೇ ಈ ಬಗ್ಗೆ ಅಭ್ಯರ್ಥಿಗಳಿಗೆ ಸೂಚನೆ ನೀಡಿ, ಪ್ರವೇಶ ಪತ್ರ ಒದಗಿಸಲಾಗುತ್ತದೆ. ಈ ಪ್ರವೇಶ ಪತ್ರದಲ್ಲಿಯೇ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CEE) ಎಂದು, ಎಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಇರುತ್ತದೆ. ಎನ್‌ಸಿಸಿಯಲ್ಲಿ “ಸಿʼʼ ಸರ್ಟಿಫಿಕೇಟ್‌ ಹೊಂದಿವರಿಗೆ ಮಾತ್ರ ಲಿಖಿತ ಪರೀಕ್ಷೆಯಿಂದ ರಿಯಾಯಿತಿ ನೀಡಲಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ| Agneepath Recruitment 2022 | ಅಗ್ನಿಪಥ್‌ ಮೂಲಕ ನೇಮಕ; ಕನ್ನಡದಲ್ಲಿ ನಡೆಯೋಲ್ಲ ನೇಮಕಾತಿ ಪರೀಕ್ಷೆ

Exit mobile version