Site icon Vistara News

Unemployment Rate: ದೇಶದಲ್ಲಿ‌ ನಿರುದ್ಯೋಗ ದರ ದಾಖಲೆಯ ಕುಸಿತ; ಮೋದಿ ಎಫೆಕ್ಟ್?

Unemployment rate

India’s Unemployment Rate At Record Low, SBI Research Says

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶಾದ್ಯಂತ ನಿರುದ್ಯೋಗ ಪ್ರಮಾಣ ಜಾಸ್ತಿಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ, ದೇಶದಲ್ಲಿ ನಿರುದ್ಯೋಗ ಪ್ರಮಾಣವು (Unemployment Rate) ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎಸ್‌ಬಿಐ ರಿಸರ್ಚ್‌ (SBI Research) ವರದಿ ತಿಳಿಸಿದೆ. ಎಸ್‌ಬಿಐ ರಿಸರ್ಚ್‌ನ ದಿ ಪೀರಿಯಾಡಿಕ್‌ ಲೇಬರ್‌ ಫೋರ್ಸ್‌ ಸರ್ವೇ (PLFS) ವರದಿಯು ದೇಶದಲ್ಲಿ ನಿರುದ್ಯೋಗ ಪ್ರಮಾಣ ಕುಂಠಿತವಾಗಿರುವುದನ್ನು ದೃಢಪಡಿಸಿದೆ.

ದೇಶದಲ್ಲಿ 2018ರಲ್ಲಿ ನಿರುದ್ಯೋಗ ಪ್ರಮಾಣವು ಶೇ.6.1ರಷ್ಟು ಇತ್ತು. ಆದರೆ ಇದು, 2023ರಲ್ಲಿ ಶೇ.3.2ಕ್ಕೆ ಇಳಿಕೆಯಾಗಿದೆ. ಭಾರತದ ಕಾರ್ಮಿಕ ಮಾರುಕಟ್ಟೆ (ಅಥವಾ ಕಾರ್ಮಿಕ ಸರಬರಾಜು) ಅಂದರೆ, ಉದ್ಯೋಗದಾತರ ಬೇಡಿಕೆ ಹಾಗೂ ಕಾರ್ಮಿಕರ ಪೂರೈಕೆ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ತಂದ ಕಾರಣ ನಿರುದ್ಯೋಗ ಪ್ರಮಾಣವು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗೆಯೇ, ದೇಶದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವವರ ಪ್ರಮಾಣವೂ ಐದು ವರ್ಷದಲ್ಲಿ ಶೇ.13.6ರಿಂದ ಶೇ.18.3ಕ್ಕೆ ಏರಿಕೆಯಾಗಿದೆ ಎಂದು ಎಸ್‌ಬಿಐ ರಿಸರ್ಚ್‌ ವರದಿ ತಿಳಿಸಿದೆ.

unemployment rate

ಕೇಂದ್ರ ಸರ್ಕಾರದ ಯೋಜನೆಯ ನೆರವು ಕಾರಣ

ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರು ಹೆಚ್ಚು ಉದ್ಯೋಗ ಪಡೆಯುತ್ತಿದ್ದಾರೆ. ಅವರ ನಿರುದ್ಯೋಗ ಪ್ರಮಾಣವು ಇಳಿಕೆಯಾಗಿದೆ ಎಂದು ವರದಿ ತಿಳಿಸಿರುವುದು ಸಮಾಧಾನಕರ ಸಂಗತಿಯಾಗಿದೆ. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆ ಸೇರಿ ಹಲವು ರೀತಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಕೇಂದ್ರ ಸರ್ಕಾರ ಜಾರಿಗೆ ತಂದ ಸಾಲ ಸೌಲಭ್ಯ ಯೋಜನೆಗಳಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಯುವಕ-ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಿದೆ. ನಿರುದ್ಯೋಗ ಪ್ರಮಾಣದ ಇಳಿಕೆಗೆ ಇದು ಪ್ರಮುಖ ಅಂಶವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Reservation for Women: ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ 35% ಮೀಸಲು; ಸರ್ಕಾರ ಆದೇಶ

ಪ್ರಧಾನಮಂತ್ರಿ ಮುದ್ರಾ ಯೋಜನೆ ಹಾಗೂ ಪಿಎಂ ಸ್ವನಿಧಿ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ನೀಡುತ್ತಿರುವುದು ಸ್ವಯಂ ಉದ್ಯೋಗಿಗಳು, ಸಣ್ಣ ಪ್ರಮಾಣದ ಉದ್ಯಮಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. “ಕೌಟುಂಬಿಕ ಉದ್ಯಮಗಳ ಮುಂದುವರಿಕೆ, ಸ್ವಯಂ ಉದ್ಯೋಗ ಕೈಗೊಳ್ಳುವಿಕೆಗೆ ಸಾಲ ನೀಡುವ ಯೋಜನೆಗಳು ಸಹಕಾರಿಯಾಗಿವೆ” ಎಂದು ಎಸ್‌ಬಿಐ ರಿಸರ್ಚ್‌ ವರದಿ ತಿಳಿಸಿದೆ. ಕಾರ್ಮಿಕರ ಪೂರೈಕೆಯಲ್ಲೂ ಇದರಿಂದ ಗಣನೀಯ ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.

Exit mobile version