Site icon Vistara News

Job Alert: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್‌ ಬ್ಯಾಂಕ್ ಆಫ್ ಇಂಡಿಯಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

sidbi

sidbi

ಆರ್. ಕೆ ಬಾಲಚಂದ್ರ, ಅಂಕಣಕಾರರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ

ಬೆಂಗಳೂರು: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್‌ ಬ್ಯಾಂಕ್ ಆಫ್ ಇಂಡಿಯಾ(SIDBI) ಖಾಲಿ ಇರುವ ಗ್ರೇಡ್ ‘A’ ವೃಂದದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ (SIDBI recruitment 2023). ಅರ್ಹ ಅಭ್ಯರ್ಥಿಗಳು ನವೆಂಬರ್ 28ರೊಳಗೆ ಅರ್ಜಿ ಸಲ್ಲಿಸಬಹುದು. ಜನರಲ್ ಸ್ಟ್ರೀಮ್‌ನ ಒಟ್ಟು 50 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 8, ಎಸ್‌ಟಿ ಅಭ್ಯರ್ಥಿಗಳಿಗೆ 4, ಒಬಿಸಿ ವರ್ಗಕ್ಕೆ 11, ಆರ್ಥಿಕ ದುರ್ಬಲ ವರ್ಗದವರಿಗೆ 5 ಮತ್ತು ಸಾಮಾನ್ಯ ವರ್ಗಕ್ಕೆ 22 ಹುದ್ದೆಗಳನ್ನು ಮೀಸಲಿಡಲಾಗಿದೆ. ಆನ್‌ಲೈನ್‌ ಪರೀಕ್ಷೆ (ಅಗತ್ಯವಿದ್ದಲ್ಲಿ), ಗುಂಪು ಚರ್ಚೆ, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ನೇಮಕ ಪ್ರಕ್ರಿಯೆಗಳು ನಡೆಯಲಿವೆ ಎಂದು ಎಸ್‌ಐಡಿಬಿಐ ತಿಳಿಸಿದೆ (Job Alert).

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ನ ಹಿನ್ನೆಲೆ

ಎಸ್‌ಐಡಿಬಿಐ ಸಂಸತ್ತಿನ ಕಾಯಿದೆಯ ಅಡಿಯಲ್ಲಿ ಸ್ಥಾಪಿಸಲಾದ ಪ್ರಧಾನ ಹಣಕಾಸು ಸಂಸ್ಥೆ. ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರಚಾರ, ಹಣಕಾಸು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ಏಳೂವರೆ ದಶಕಗಳಿಂದ ಭಾರತದ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭವಾಗಿದೆ. ಎಸ್‌ಐಡಿಬಿಐ ಕೈಗಾರಿಕಾ ವಲಯದಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಚೈತನ್ಯಕ್ಕೆ ನೀಡಿದ ಕೊಡುಗೆಯಿಂದ ದೇಶದಾದ್ಯಂತ ಕೈಗಾರಿಕಾ ಅಭಿವೃದ್ಧಿಯ ವಿಸ್ತರಿಸುವಿಕೆಗೆ ಕಾರಣವಾಗಿದೆ. MSMEಗಳ ಹಣಕಾಸು, ಪ್ರಚಾರ ಮತ್ತು ಅಭಿವೃದ್ಧಿಯ ವಿವಿಧ ಯೋಜನೆಗಳಿಗಾಗಿ ಎಸ್‌ಐಡಿಬಿಐ ಕಾರ್ಯನಿರ್ವಹಿಸುತ್ತಿದೆ.

ನವೆಂಬರ್ 8, 2023ಕ್ಕೆ ವಯಸ್ಸಿನ ಮಿತಿ

ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳನ್ನು ಮೀರಿರಬಾರದು. ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ಸಡಿಲಿಕೆ ಇದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳಿಗೆ (ನಾನ್-ಕ್ರೀಮಿ ಲೇಯರ್) 3 ವರ್ಷಗಳು. ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷಗಳು.

ಅರ್ಹತೆಗಳೇನು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ ಶೇಕಡಾ 60 ಅಂಕಗಳನ್ನು (ಎಸ್‌ಸಿ /ಎಸ್‌ಟಿ /ವಿಶೇಷ ಚೇತನರು ಶೇಕಡಾ 55) ಪಡೆದಿರಬೇಕು ಅಥವಾ ಸಿಎ/ಸಿಎಸ್/ಸಿಡಬ್ಲ್ಯುಎ /ಸಿಎಫ್ಎ/ ಸಿಎಂಎ ಅಥವಾ ಕಾನೂನಿನಲ್ಲಿ/ಇಂಜಿನಿಯರಿಂಗ್ ನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ ಶೇಕಡಾ 60% (ಎಸ್‌ಸಿ/ಎಸ್‌ಟಿ/ವಿಶೇಷ ಚೇತನರು 55%) ಅಂಕಗಳನ್ನು ಪಡೆದಿರಬೇಕು.

ಕೆಲಸದ ಅನುಭವ

ಇದರೊಂದಿಗೆ ಅಭ್ಯರ್ಥಿಗಳು ಕನಿಷ್ಠ 2 ವರ್ಷ ವಾಣಿಜ್ಯ ಬ್ಯಾಂಕ್‌ಗಳು / ಅಖಿಲ ಭಾರತ ಹಣಕಾಸು ಸಂಸ್ಥೆ (All India Financial Institution)ನಲ್ಲಿ MSME ಸಾಲ ವಿಭಾಗದಲ್ಲಿ (ವೈಯಕ್ತಿಕ ಸಾಲ, ಶೈಕ್ಷಣಿಕ ಸಾಲ, ವಾಹನ ಸಾಲ, ವಸತಿ ಸಾಲ, ಇತ್ಯಾದಿ ಹೊರತುಪಡಿಸಿ) ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು ಅಥವಾ ಮೂರು ವರ್ಷಗಳ ಪ್ರಮುಖ NBFCಗಳಲ್ಲಿ ವ್ಯವಸ್ಥಿತವಾದ MSME ಸಾಲದಲ್ಲಿ ವೈಯಕ್ತಿಕವಲ್ಲದ ಸಾಲ / ಕಾರ್ಪೊರೇಟ್ ಸಾಲ ನೀಡಿದ ಸೇವಾನುಭವ ಹೊಂದಿರಬೇಕು.

ಅರ್ಜಿ ಶುಲ್ಕ ಏಷ್ಟು?

ಎಸ್ಸಿ/ ಎಸ್‌ಟಿ / ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆದರೆ 175 ರೂ. ಇಂಟಿಮೇಷನ್ ಫೀ ಪಾವತಿಸಬೇಕು. ಉಳಿದ ಎಲ್ಲ ವರ್ಗದವರು ಇಂಟಿಮೇಷನ್ ಫೀ ಸೇರಿಸಿ 1,100 ರೂ. ಪಾವತಿಸಬೇಕು. ಎಸ್ಐಡಿಬಿಐ ಸಿಬ್ಬಂದಿಯಾಗಿದ್ದಲ್ಲಿ ಸಂಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.

ಶುಲ್ಕ ಪಾವತಿ

ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್‌ನೆಟ್‌ ಬ್ಯಾಂಕಿಂಗ್ (ರುಪೇ / ವೀಸಾ / ಮಾಸ್ಟರ್ ಕಾರ್ಡ್ / ಮೆಸ್ಟ್ರೋ), IMPS, ನಗದು ಕಾರ್ಡ್‌ಗಳು / ಮೊಬೈಲ್ ವ್ಯಾಲೆಟ್‌ಗಳು ಬಳಸಿಕೊಂಡು ಆನ್‌ಲೈನ್‌ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ನಲ್ಲಿ ಮಾತ್ರ.

ಪರೀಕ್ಷಾ ಪೂರ್ವ ತರಬೇತಿ

ಎಸ್‌ಸಿ / ಎಸ್‌ಟಿ / ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 10 ದಿನಗಳ ಪರೀಕ್ಷಾ ಪೂರ್ವ ತರಬೇತಿಯನ್ನು ಬ್ಯಾಂಕ್ ವತಿಯಿಂದ ನೀಡಲಾಗುತ್ತದೆ. ಆನ್‌ಲೈನ್‌ ಮೂಲಕವೇ ತರಬೇತಿ ಇರುತ್ತದೆ. ತರಬೇತಿಯ ಅಗತ್ಯವಿದ್ದಲ್ಲಿ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಉಲ್ಲೇಖಿಸಬೇಕು.

ಪರೀಕ್ಷಾ ಕೇಂದ್ರ: (ಪರೀಕ್ಷೆ ನಡೆದಲ್ಲಿ) ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು ಮಾತ್ರ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 28, 2023
ಸಂದರ್ಶನ ಮತ್ತು ಗುಂಪು ಚರ್ಚೆ ನಡೆಯುವ ದಿನಾಂಕ: ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿ 2024.

ವೇತನ: 44,500 ರೂ.-89,150 ರೂ.

ಹೊಸದೇನು ಗಮನಿಸಿ

ಈ ಹಿಂದೆ ಎಲ್ಲ ಬ್ಯಾಂಕ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಫೋಟೊ, ಸಹಿ, ಎಡ ಹೆಬ್ಬೆರಳಿನ ಗುರುತು, ಕೈ ಬರಹದ ಘೋಷಣೆ ಮಾತ್ರ ಅಪ್‌ಲೋಡ್‌ ಮಾಡಬೇಕಾಗುತ್ತಿತ್ತು. ಪಡೆದ ಅಂಕಗಳನ್ನು ಶೈಕ್ಷಣಿಕ ಕಾಲಂನಲ್ಲಿ ಮಾಹಿತಿ ನೀಡಬೇಕಾಗಿತ್ತು. ಆದರೆ ಈ ಪರೀಕ್ಷೆಗೆ ಶೈಕ್ಷಣಿಕ ಮಾಹಿತಿಗಳ ದಾಖಲೆಗಳನ್ನು ಅಪ್‌ಲೋಡ್‌ ಮಾಡುವುದು ಕಡ್ಡಾಯ.

ಅಪ್‌ಲೋಡ್‌ ಮಾಡುವ ವಿಧಾನ

ಆನ್‌ಲೈನ್‌ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಅಭ್ಯರ್ಥಿಗಳಿಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಲಿಂಕ್‌ಗಳನ್ನು ಒದಗಿಸಲಾಗುತ್ತಿದೆ. ಇವುಗಳಲ್ಲಿ ಫೋಟೊ, ಸಹಿ, ಎಡ ಹೆಬ್ಬೆರಳಿನ ಗುರುತು, ಕೈ ಬರಹದ ಘೋಷಣೆ, ವೈಯಕ್ತಿಕ ಮಾಹಿತಿ (Bio Data), ಶೈಕ್ಷಣಿಕ ಪ್ರಮಾಣಪತ್ರ ಮತ್ತು ಸಂಬಂಧಿತ ಕ್ಷೇತ್ರದಲ್ಲಿರುವ ಅನುಭವ, ಕೆಲಸದಿಂದ ನಿರ್ಗಮಿಸಿದ್ದಲ್ಲಿ ರಿಲೀವಿಂಗ್ ಪತ್ರ ಎಲ್ಲವನ್ನು ಅವುಗಳಿಗೆ ಸಂಬಂಧಿಸಿದ ಆಯಾಯ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಪ್ರತಿಯೊಂದು ಮಾಹಿತಿಯನ್ನು ಅಪ್‌ಲೋಡ್‌ ಮಾಡೋದನ್ನು ಮರೆಯಬೇಡಿ.

ಆಯ್ಕೆ ವಿಧಾನ

ಇದನ್ನೂ ಓದಿ: Job Alert: ಐಡಿಬಿಐ ಬ್ಯಾಂಕ್‌ನಲ್ಲಿದೆ 2,100 ಉದ್ಯೋಗಾವಕಾಶ; ಇಂದಿನಿಂದಲೇ ಅರ್ಜಿ ಸಲ್ಲಿಸಿ

ವಿವರಗಳಿಗೆ: https://sidbi.in ಅಥವಾ www.sidbi.in ಸಂದರ್ಶಿಸಿ.
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣವಾಗಿ ಅಧಿಸೂಚನೆಯನ್ನುಓದಿಕೊಳ್ಳಬೇಕು. ನೇಮಕ ಸಂಬಂಧ ಎಲ್ಲಾ ಮಾಹಿತಿಯನ್ನು SIDBI ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version