ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುತ್ತಿರುವ ಪದವೀಧರರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಕಡೆಯಿಂದ ಭರ್ಜರಿ ಖುಷಿಯ ಸುದ್ದಿಯೊಂದು ಬಂದಿದೆ. ಎಸ್‌ಬಿಐ ಖಾಲಿ ಇರುವ ಬರೋಬ್ಬರಿ 8,283 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (SBI Clerk Recruitment 2023). ಕ್ಲೆರಿಕಲ್ ಕೇಡರ್‌ನ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳು ಇದಾಗಿದ್ದು ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೋಂದಣಿ ಪ್ರಕ್ರಿಯೆ ಇಂದಿನಿಂದ (ನವೆಂಬರ್ 17) ನಡೆಯಲಿದ್ದು, ಡಿಸೆಂಬರ್ 7 ಕೊನೆಯ ದಿನ ಎಂದು ಅಧಿಸೂಚನೆ ತಿಳಿಸಿದೆ (Job Alert).
ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಲ್ಲದೆ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (Integrated Dual Degree-IDD) ಪ್ರಮಾಣಪತ್ರ ಹೊಂದಿರುವವರು ಅಂದರೆ 2023ರ ಡಿಸೆಂಬರ್ 31ರೊಳಗೆ ಕೋರ್ಸ್ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರು. ಪದವಿಯ ಅಂತಿಮ ವರ್ಷ ಅಥವಾ ಸೆಮಿಸ್ಟರ್‌ನಲ್ಲಿರುವವರೂ ಅರ್ಜಿ ಸಲ್ಲಿಸಬಹುದು. ಅವರು ಡಿಸೆಂಬರ್ 31, 2023ರೊಳಗೆ ಕೋರ್ಸ್ ಪೂರ್ಣಗೊಳಿಸುವುದು ಕಡ್ಡಾಯ.
ವಯೋಮಿತಿ
SBI Clerk Recruitment 2023ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷ. ಅಕ್ಟೋಬರ್ 31, 2023ರೊಳಗೆ ಎಸ್‌ಬಿಐಯಲ್ಲಿ ತಮ್ಮ ಅಪ್ರೆಂಟಿಶಿಪ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಇಎಸ್‌ಎಂ/ಡಿಇಎಸ್‌ಎಂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಜನರಲ್, ಒಬಿಸಿ ಮತ್ತು ಇಡಬ್ಲ್ಯುಎಸ್ ವಿಭಾಗದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಇದನ್ನೂ ಓದಿ: Job Alert: ಕೊಡಗು ಜಿಲ್ಲಾ ನ್ಯಾಯಾಲಯದ 64 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಆಯ್ಕೆ ವಿಧಾನ ಮತ್ತು ವೇತನ
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ (ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ) ಮತ್ತು ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ಒಳಗೊಂಡಿದೆ. 100 ಅಂಕಗಳ ಪ್ರಿಲಿಮಿನರಿ (ಪ್ರಾಥಮಿಕ) ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯು 1 ಗಂಟೆ ಅವಧಿಯದ್ದಾಗಿದ್ದು, ಇಂಗ್ಲಿಷ್ ಭಾಷೆ, ನ್ಯೂಮರಿಕಲ್ ಎಬಿಲಿಟಿ ಮತ್ತು ರೀಸನಿಂಗ್ ಎಬಿಲಿಟಿ ಎಂಬ 3 ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರಿಲಿಮಿನರಿ ಪರೀಕ್ಷೆ 2024ರ ಜನವರಿಯಲ್ಲಿ ಮತ್ತು ಮುಖ್ಯ ಪರೀಕ್ಷೆ 2024ರ ಫೆಬ್ರವರಿಯಲ್ಲಿ ನಡೆಯಲಿದೆ. ಆಯ್ಕೆಯಾದವರಿಗೆ 17,900 ರೂ. 19,900 ರೂ. ಮಾಸಿಕ ವೇತನವಿದೆ.
ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- Registration link ಅನ್ನು ಆಯ್ಕೆ ಮಾಡಿ ನಿಮ್ಮ ಹೆಸರು, ಇಮೇಲ್ ಐಡಿ, ಸಂಪರ್ಕ ಸಂಖ್ಯೆ ಇತ್ಯಾದಿ ಮಾಹಿತಿ ತುಂಬಿ
- ಲಾಗ್ ಇನ್ ಆಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಅಗತ್ಯವಾದ ಡಾಕ್ಯುಮೆಂಟ್, ಫೋಟೊಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಪಾವತಿಸಿ
- ಮಾಹಿತಿ ಎಲ್ಲ ಸರಿಯಾಗಿದೆ ಎನ್ನುವುದನ್ನು ಖಚಿತ ಪಡಿಸಿದ ಬಳಿಕ ಅರ್ಜಿ ಸಲ್ಲಿಸಿ. ಅರ್ಜಿಯ ಪ್ರಿಂಟ್ ಔಟ್ ತೆಗೆದಿಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ