-ಆರ್.ಕೆ. ಬಾಲಚಂದ್ರ. ಲೇಖಕರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಸಾಫ್ಟ್ ಸ್ಕಿಲ್ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಬೆಂಗಳೂರು
ಬ್ಯಾಂಕ್ ಸಿಬ್ಬಂದಿ ನೇಮಕಾತಿ (Job Alert) ಸಂಸ್ಥೆ(ಐಬಿಪಿಎಸ್) ದೇಶದಾದ್ಯಂತ 43 ಗ್ರಾಮೀಣ ಬ್ಯಾಂಕ್ಗಳಲ್ಲಿ (ಆರ್ಆರ್ಬಿ) ಖಾಲಿಯಿರುವ 9,995 ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನ. ರಾಜ್ಯದ ಅಭ್ಯರ್ಥಿಗಳಿಗೆ ಹಿಂದಿ ಅಥವಾ ಇಂಗ್ಲಿಷ್ ಜತೆಗೆ ಕಳೆದ ಬಾರಿಯಂತೆ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಮತ್ತು ಆಫೀಸರ್ ಸ್ಟೇಲ್-1 ಹುದ್ದೆಗಳಿಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್ ನೀಡಿದೆ.
ಕಳೆದ ಬಾರಿ 8,622 ಹುದ್ದೆಗಳಿಗೆ ನೇಮಕ ನಡೆಸಿದ ಐಬಿಪಿಎಸ್ ಈ ಬಾರಿ 9,995 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ನಡೆಯಲಿದೆ. ರಾಜ್ಯದ ಎರಡು ಬ್ಯಾಂಕುಗಳಲ್ಲಿ 586 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಒಟ್ಟು 200 ಹುದ್ದೆಗಳು ಮತ್ತು ಆಫೀಸರ್ ಸ್ಟೇಲ್-1-386 ಹುದ್ದೆಗಳಿವೆ. ಕಳೆದ ಬಾರಿ ರಾಜ್ಯದ ಈ ಎರಡೂ ಬ್ಯಾಂಕ್ಗಳಲ್ಲಿ 807 ಹುದ್ದೆಗಳಿಗೆ ನೇಮಕ ನಡೆದಿತ್ತು.
ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳಲ್ಲಿರುವ ಖಾಲಿ ಇರುವ ಹುದ್ದೆಗಳ ಮೀಸಲಾತಿ
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) | ||||||
ಬ್ಯಾಂಕ್ | ಎಸ್ ಸಿ(SC) | ಎಸ್ಟಿ(ST) | ಒಬಿಸಿ (NCL)* | EWS* | ಸಾಮಾನ್ಯ | TOTAL |
ಕರ್ನಾಟಕ ಗ್ರಾಮೀಣ ಬ್ಯಾಂಕ್ | 16 | 7 | 27 | 10 | 40 | 100 |
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ | 16 | 7 | 27 | 10 | 40 | 100 |
ಆಫೀಸರ್ ಸ್ಕೇಲ್-I | ||||||
ಕರ್ನಾಟಕ ಗ್ರಾಮೀಣ ಬ್ಯಾಂಕ್ | 43 | 21 | 77 | 29 | 116 | 286 |
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ | 15 | 7 | 27 | 10 | 41 | 100 |
ಈಗ ನಿಗದಿಪಡಿಸಿರುವ ಹುದ್ದೆಗಳ ಸಂಖ್ಯೆಗಳು ಹೆಚ್ಚಾಗಲೂ ಬಹುದು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಮೀಸಲಿಟ್ಟ ಹುದ್ದೆಗಳ ಸಂಖ್ಯೆ ಏರಿಕೆಯಾಗಲೂಬಹುದು. ಆದ್ದರಿಂದ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನಿರಾಶರಾಗಬೇಕಾಗಿಲ್ಲ.
ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳಲ್ಲಿರುವ ಖಾಲಿ ಇರುವ ಹುದ್ದೆಗಳ ಮೀಸಲಾತಿ
ಅರ್ಜಿ ಸಲ್ಲಿಸುವುದು ಹೇಗೆ?
ಜೂನ್ 7ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 27 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ವಯೋಮಿತಿ
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ 18 ರಿಂದ 28 ವರ್ಷಗಳು. ಆಫೀಸರ್ ಸ್ಕೇಲ್-I ಹುದ್ದೆಗೆ 18 ರಿಂದ 30 ವರ್ಷಗಳು. ಎಸ್.ಸಿ ಮತ್ತು ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿಯ ಸಡಿಲಿಕೆ ಇದೆ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವಗಳೇನಿರಬೇಕು?
Group“B”-ಆಫೀಸ್ ಅಸಿಸ್ಟೆಂಟ್ ಹುದ್ದೆ: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆ ತಿಳಿದಿರುವುದು ಅವಶ್ಯಕ. ಕಂಪ್ಯೂಟರ್ನಿರ್ವಹಣಾ ಜ್ಞಾನ ಹೊಂದಿರುವುದು ಕಡ್ಡಾಯ.
ಇದನ್ನೂ ಓದಿ: Job Alert: ಈಶಾನ್ಯ ರೈಲ್ವೆ ವಿಭಾಗದಿಂದ 1,104 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ಅಪ್ಲೈ ಮಾಡಿ
Group“A”-Officers-ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ)
ಯಾವುದೇ ವಿಷಯದಲ್ಲಿ ಪದವಿ. ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಅಥವಾ ಲೆಕ್ಕಶಾಸ್ತ್ರದಲ್ಲಿ ಪದವಿ ಹೊಂದಿರುವವರಿಗೆ ಆದ್ಯತೆ. ಆದರೆ ಸ್ಥಳೀಯ ಭಾಷೆ ತಿಳಿದಿರಬೇಕಾದುದು ಅವಶ್ಯಕ. ಕಂಪ್ಯೂಟರ್ ನಿರ್ವಹಣಾ ಜ್ಞಾನ ಕಡ್ಡಾಯ.
ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಟೇಲ್-1ಕ್ಕೆ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿರುವುದು ಅವಶ್ಯ.8ನೇ ತರಗತಿಯವರೆಗೆ ಅಥವಾ ಅದಕ್ಕೂ ಮೇಲ್ಪಟ್ಟು ಸ್ಥಳೀಯ ಭಾಷೆಯ ಮಾಧ್ಯಮದಲ್ಲಿ ಓದಿದವವರನ್ನು ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಪಡೆದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿಯು ಸ್ಥಳೀಯ ಭಾಷೆಯನ್ನು ಸರಿಯಾಗಿ ತಿಳಿದಿಲ್ಲ ಎಂಬುದು ಆಯ್ಕೆಯ ಸಂದರ್ಭದಲ್ಲಿ ಗಮನಕ್ಕೆ ಬಂದಲ್ಲಿ, ಅಂತಹ ಅಭ್ಯರ್ಥಿಗಳಿಗೆ ಭಾಷೆಯನ್ನು ಕಲಿತುಕೊಳ್ಳಲು 6 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.
ಇತ್ತ ಗಮನಿಸಿ
ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆ, ಎರಡಕ್ಕೂ ಅರ್ಜಿ ಸಲ್ಲಿಸಬಹುದು.
ಕ್ರೆಡಿಟ್ ಇತಿಹಾಸ
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಬ್ಯಾಂಕ್ ಖಾತೆ ಹೊಂದಿದ್ದರೆ, ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು ಮತ್ತು ಬ್ಯಾಂಕ್ ಹುದ್ದೆಗೆ ನೇಮಕವಾಗುವ ಸಮಯದಲ್ಲಿ ಕನಿಷ್ಠ CIBIL ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತಪಡಿಸಿ ಕೊಳ್ಳಬೇಕು.
- ಸೇರುವ ದಿನಾಂಕದ ಮೊದಲು CIBIL ಸ್ಥಿತಿಯನ್ನು ನವೀಕರಿಸದಿದ್ದರೆ, ಮೊದಲು ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ NOC ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ / ರದ್ದುಗೊಳಿಸಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹850 ಹಾಗೂ ಎಸ್ಸಿ/ಎಸ್ಟಿ/ ಅಂಗವಿಕಲರು / ಮಾಜಿ ಸೈ
ನಿಕ ಅಭ್ಯರ್ಥಿಗಳಿಗೆ ₹175 ಶುಲ್ಕ ನಿಗದಿಪಡಿಸಲಾಗಿದೆ. ಆನ್ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Job Alert: ಗಮನಿಸಿ; GTTCಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ; ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ
ಪರೀಕ್ಷಾ ಪೂರ್ವ ತರಬೇತಿ(PRE-EXAMINATION TRAINING (PET):
ಎಸ್ಸಿ/ಎಸ್ಟಿ/ ಅಲ್ಪಸಂಖ್ಯಾತ ಅಭ್ಯರ್ಥಿಗಳು / ಮಾಜಿ ಸೈನಿಕರು / ವಿಶೇಷಚೇತನ ಅಭ್ಯರ್ಥಿಗಳಿಗೆ ಐಬಿಪಿಎಸ್ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಮತ್ತು ಆಫೀಸರ್ ಸ್ಟೇಲ್-1 ಹುದ್ದೆಗಳಿಗೆ ತರಬೇತಿ ಪಡೆಯಬಹುದು. ಈ ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು. ಇದರ ಖರ್ಚು ಮೆಚ್ಚಗಳನ್ನು ಅಭ್ಯರ್ಥಿಗಳೇ ಭರಿಸಬೇಕಾಗುತ್ತದೆ. ರಾಜ್ಯದಲ್ಲಿ ಧಾರವಾಡದಲ್ಲಿ ಮಾತ್ರ ತರಬೇತಿ ನೀಡಲಾಗುತ್ತದೆ.
ಪೂರ್ವಭಾವಿ ಪರೀಕ್ಷೆ
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು,ಮೈಸೂರು, ಶಿವಮೊಗ್ಗ ಮತ್ತು ಉಡುಪಿ
ಮುಖ್ಯ ಪರೀಕ್ಷೆ
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಮತ್ತು ಉಡುಪಿ(ಮಂಗಳೂರು ಹೊರತು ಪಡಿಸಿ)
ಈ ಬಾರಿಯ ಬದಲಾವಣೆಗಳೇನು?
ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ಅಭ್ಯರ್ಥಿಗಳು ತರುವ ಗುರುತಿನ ಪತ್ರದ (ಐಡಿ ಪ್ರೂಫ್) ಸಂಖ್ಯೆ ನೀಡುವುದು ಕಡ್ಡಾಯ. ಆ ಸಂಖ್ಯೆ ಅಭ್ಯರ್ಥಿ ಸಲ್ಲಿಸಿದ ಅರ್ಜಿಯಲ್ಲಿರುವ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು. ಈ ಬಾರಿ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಿಗೆ, ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳಬೇಕು. ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನೂ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು
- ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಎರಡಕ್ಕೂ ಅರ್ಜಿ ಸಲ್ಲಿಸಬಹುದು.ಆದರೆ ಆಫೀಸರ್ ಕೇಡರ್ನಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯು ತನ್ನ ಕೈ ಬರಹದ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಅಪ್ ಲೋಡ್ ಮಾಡಬೇಕು. ಕ್ಯಾಪಿಟಲ್ ಲೆಟರ್ಸ್ನಲ್ಲಿ ಬರೆದ ಡಿಕ್ಲರೇಷನ್ ಮತ್ತು ಸಹಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
- ಅರ್ಜಿ ಸಲ್ಲಿಕೆ, ಅಧಿಸೂಚನೆ ಕುರಿತ ಹೆಚ್ಚಿನ ಮಾಹಿತಿಗಾಗಿ www.ibps.in/ಜಾಲತಾಣಕ್ಕೆ ಭೇಟಿ ನೀಡಿ.
- ನೀವು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕೆಂದಿದ್ದರೆ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಹೊಂದಿರಬೇಕಾಗಿರುವುದು ಕಡ್ಡಾಯ. ಆದ್ದರಿಂದ ಇ-ಮೇಲ್ ಅಕೌಂಟ್ ಇಲ್ಲದಿದ್ದರೆ ಅರ್ಜಿ ಸಲ್ಲಿಸುವ ಮುನ್ನವೇ ಕ್ರಿಯೇಟ್ ಮಾಡಿಕೊಳ್ಳಿ. ಹಾಗೆಯೇ ಅರ್ಜಿಯಲ್ಲಿ ನಮೂದಿಸಿದ ಇ-ಮೇಲ್ ಐ.ಡಿ.ಯನ್ನು ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ.
- ಅರ್ಜಿ ಸಲ್ಲಿಸುವಾಗ ಒಂದೇ ಬಾರಿಗೆ ಎಲ್ಲ ಮಾಹಿತಿಯನ್ನು ತುಂಬಬೇಕೆಂಬ ನಿಯಮವೇನಿಲ್ಲ. ಡೇಟಾ ಸೇವ್ ಮಾಡಿ ಎಲ್ಲ ಮಾಹಿತಿಯನ್ನು ತುಂಬಿದ ನಂತರವೇ final submit ಬಟನ್ ಒತ್ತಿ.
ಇತ್ತ ಗಮನಿಸಿ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 27, 2024
- ಪೂರ್ವಭಾವಿ ಪರೀಕ್ಷೆ ತರಬೇತಿಗೆ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳುವುದು: ಜುಲೈ
- ಪೂರ್ವಭಾವಿ ಪರೀಕ್ಷೆಗೆ ತರಬೇತಿ: ಜುಲೈ 22-27
- ಪೂರ್ವಭಾವಿ ಪರೀಕ್ಷೆಗೆ ಪ್ರವೇಶಪತ್ರ ಲಭ್ಯ ಜುಲೈ/ಆಗಸ್ಟ್ 2024
- ಪೂರ್ವಭಾವಿ ಪರೀಕ್ಷೆ: ಆಗಸ್ಟ್, 2024
- ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಆಗಸ್ಟ್/ಸೆಪ್ಟೆಂಬರ್, 2024
- ಮುಖ್ಯ ಪರೀಕ್ಷೆ ನಡೆಯುವುದು ಸೆಪ್ಟೆಂಬರ್ / ಅಕ್ಟೋಬರ್, 2024
- ಮುಖ್ಯ ಪರೀಕ್ಷೆಯ ಫಲಿತಾಂಶ ಅಕ್ಟೋಬರ್, 2024
- ಸಂದರ್ಶನ ನಡೆಯುವುದು: ನವೆಂಬರ್, 2024
- ನೇಮಕ ಶಿಫಾರಸು: ಜನವರಿ, 2025
ಆಯ್ಕೆ ಹೇಗೆ?
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರು ಹಂತಗಳಲ್ಲಿ ಪರೀಕ್ಷೆ(ಪೂರ್ವ ಭಾವಿ/ ಮುಖ್ಯ ಪರೀಕ್ಷೆ/ ಸಂದರ್ಶನ-ಅಧಿಕಾರಿಗಳ ಹುದ್ದೆಗೆ ಮಾತ್ರ ಇದು ಅನ್ವಯಿಸುತ್ತದೆ) ನಡೆಸಲಾಗುತ್ತದೆ. ಪರೀಕ್ಷೆಯ ಸ್ವರೂಪ ಹೇಗಿರುತ್ತದೆ ಎಂಬ ವಿವರಣೆ ಇಲ್ಲಿದೆ.
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪ ಸ್ )/ ಸ್ಕೇಲ್–I ಅಧಿಕಾರಿ ಪೂರ್ವ ಭಾವಿ ಪರೀಕ್ಷೆ:
ಕ್ರ.ಸಂ. | ಪರೀಕ್ಷೆಗಳ ಹೆಸರು | ಪರೀಕ್ಷೆಯ ಮಾಧ್ಯಮ | ಪ್ರಶ್ನೆಗಳ ಸಂಖ್ಯೆ | ಗರಿಷ್ಠ ಅಂಕಗಳು | ಅವಧಿ |
1 | ತಾರ್ಕಿಕ ಪರೀಕ್ಷೆ (Reasoning) | ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ –ಇವುಗಳಲ್ಲಿ ಯಾವುದಾದರೊಂದು ಭಾಷೆಯ ಆಯ್ಕೆ | 40 | 40 | ಸಂಯೋಜಿತ ಸಮಯ;45 ನಿಮಿಷಗಳು |
2 | ಸಂಖ್ಯಾತ್ಮಕ ಸಾಮರ್ಥ್ಯ (Numerical Ability)/ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (Quantitative Aptitude) | 40 | 40 | ||
ಒಟ್ಟು | 80 | 80 |
ಮುಖ್ಯ ಪರೀಕ್ಷೆ
(ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್ )/ಸ್ಕೇಲ್–I ಅಧಿಕಾರಿ):
ಕ್ರ .ಸಂ | ಪರೀಕ್ಷೆಗಳ ಹೆಸರು | ಪರೀಕ್ಷೆಯ ಮಾಧ್ಯಮ | ಪ್ರಶ್ನೆಗಳ ಸಂಖ್ಯೆ | ಗರಿಷ್ಠ ಅಂಕಗಳು | ಅವಧಿ |
1 | ತಾರ್ಕಿಕ ಪರೀಕ್ಷೆ | ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ | 40 | 50 | 2 ಗಂಟೆಗಳ ಸಂಯೋಜಿತ ಸಮಯ |
2 | ಕಂಪ್ಯೂಟರ್ ಜ್ಞಾನ | 40 | 20 | ||
3 | ಸಾಮಾನ್ಯ ಅರಿವು (General Awareness) | 40 | 40 | ||
4a* | ಆಂಗ್ಲ ಭಾಷೆ | ಇಂಗ್ಲಿಷ್ | 40 | 40 | |
5b* | ಹಿಂದಿ ಭಾಷೆ | ಹಿಂದಿ | 40 | 40 | |
6 | ಸಂಖ್ಯಾತ್ಮಕ ಸಾಮರ್ಥ್ಯ/ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಟೆಸ್ಟ್ | ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ | 40 | 50 | |
ಒಟ್ಟು | 200 | 200 |
ಕರ್ನಾಟಕದ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ –ಇವುಗಳಲ್ಲಿ ಯಾವುದಾದ ರೊಂದು ಭಾಷೆಯ ಆಯ್ಕೆ ಮಾಡಿಕೊಳ್ಳಬಹುದು. ಆನ್ಲೈ ನ್ ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆಯನ್ನು ಆಯ್ಕೆ ಮಾಡಿಕೊಂಡಿರಬೇಕು. ಅದೇ ಭಾಷೆಯಲ್ಲೇ ಪರೀಕ್ಷೆ ಬರೆಯಬೇಕು (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ)
ಗಮನಿಸಿ
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್ ) ಪರೀಕ್ಷೆ ಬರೆಯುವವರು ಗಣಿತಕ್ಕೆ ಸಂಬಂಧಿಸಿದಂತೆ ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆ ಬರೆಯಬೇಕು ಹಾಗೂ ಅಧಿಕಾರಿ ಸ್ಕೇಲ್-I ಹುದ್ದೆಗಾಗಿ ಪರೀಕ್ಷೆ ಬರೆಯುವವರು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆ ಬರೆಯಬೇಕು.
ಇದನ್ನೂ ಓದಿ: Job Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 586 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕ್ಲಿಷ್ಟತೆಯ ಮಟ್ಟ
ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಳೀಕರಣ, ಸಂಖ್ಯಾ ಸರಣಿ, ಅಂಕಗಣಿತದ ಪ್ರಶ್ನೆಗಳು, ಬೀಜಗಣಿತದ ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆ ಮೂಲಕ ಅಭ್ಯರ್ಥಿಗೆ ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಆ ಪ್ರಶ್ನೆಗಳಲ್ಲಿ ತಾರ್ಕಿಕ ಅಂಶವಿರುವುದಿಲ್ಲ.
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಷಯದಲ್ಲಿ ತಾರ್ಕಿಕ ಅರ್ಹತೆ ಮತ್ತು ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇದು ಎರಡೂ ವಿಷಯಗಳ ಸಂಯೋಜನೆ. ಇದರಲ್ಲಿ ಪ್ರಶ್ನೆಗಳು ತುಂಬಾ ಕಠಿಣವಾಗಿರುವುದಿಲ್ಲ, ಆದರೆ ಇವುಗಳನ್ನು ಬಿಡಿಸಲು ಹೆಚ್ಚು ಅಭ್ಯಾಸ ಮಾಡಿರಬೇಕು. ಆದ್ದರಿಂದ ನೀವು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಸಮಯವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಅರಿಯುವಿರಿ. ಆದರೆ ಚಕ್ರ ಬಡ್ಡಿ(compound interest) ಕುರಿತ ಪ್ರಶ್ನೆಗಳು ಬಿಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಅವುಗಳನ್ನು ವಿಭಾಗದ ಕೊನೆಯಲ್ಲಿ ಬಿಡಿಸಬೇಕು.
ಇದನ್ನೂ ಓದಿ: Job Alert: ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಋಣಾತ್ಮಕ ಮೌಲ್ಯಮಾಪನ ಇದೆ
ವಸ್ತುನಿಷ್ಠ ಮಾದರಿಯ ಪರೀಕ್ಷೆಗಳಲ್ಲಿಋಣಾತ್ಮಕ ಮೌಲ್ಯಮಾಪನ ಇದೆ. ಒಂದು ತಪ್ಪು ಉತ್ತರಕ್ಕೆ, ಅದಕ್ಕೆ ನಿಗದಿಪಡಿಸಿದ ಅಂಕಗಳಲ್ಲಿ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಪ್ರಶ್ನೆ ಖಾಲಿ ಬಿಟ್ಟರೆ, ಯಾವುದೇ ಅಂಕ ಕಳೆಯುವುದಿಲ್ಲ.ಎಲ್ಲ ಹಂತದ ಋಣಾತ್ಮಕ ಮೌಲ್ಯಮಾಪನದಲ್ಲೂ ಇದೇ ನಿಯಮ ಅನ್ವಯಿಸುತ್ತದೆ.
ಆಯ್ಕೆ ವಿಧಾನ
ಹುದ್ದೆಗಳಿಗೆ ಆಯ್ಕೆ ಮಾಡುವಾಗ ಮುಖ್ಯ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು. ಪ್ರತಿ ರಾಜ್ಯದಲ್ಲಿರುವ ಖಾಲಿ ಹುದ್ದೆಗಳನ್ನು ಆಧರಿಸಿ, ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ತಯಾರಿಸಲಾಗುತ್ತದೆ.
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ-ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕ ಗಳನ್ನು ಮಾತ್ರ ಅಂತಿಮ ಮೆರಿಟ್ ಪಟ್ಟಿಗಾಗಿ ಪರಿಗಣಿಸಲಾಗುತ್ತದೆ. ಈ ಹುದ್ದೆಯ ನೇಮಕ ಪ್ರಕ್ರಿಯೆಯಲ್ಲಿ ಸಂದರ್ಶನ ಇರುವುದಿಲ್ಲ.
ಅಧಿಕಾರಿಗಳ ಹುದ್ದೆಗೆ ಸ್ಕೇಲ್-I ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಸಂದರ್ಶನದಲ್ಲಿ ಪಡೆದ ಅಂಕವನ್ನು ಪರಿಗಣಿಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ಸಂದರ್ಶನ
ಅಧಿಕಾರಿಗಳ ಹುದ್ದೆಗೆ ಮಾತ್ರ ಇದು ಅನ್ವಯಿಸುತ್ತದೆ (ಸ್ಕೇಲ್ I) ಆಫೀಸರ್ಸ್ ಸ್ಕೇಲ್-I ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು ಸಾಮಾನ್ಯ ವರ್ಗಕ್ಕೆ ಶೇ40. ಎಸ್.ಸಿ/_ಎಸ್.ಟಿ/ಒಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 35.