ನವದೆಹಲಿ: ಸರ್ಕಾರಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಉತ್ತಮ ಅವಕಾಶವಿದೆ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ರಕ್ಷಣಾ ಇಲಾಖೆ ಅಧೀನದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನೇವಿ ಅಕಾಡೆಮಿಗಳ ಹುದ್ದೆಗಳಿಗೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NDA 1 Notification 2024). ಒಟ್ಟು 400 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ದ್ವಿತೀಯ ಪಿಯುಸಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪರೀಕ್ಷೆ 2024ರ ಏಪ್ರಿಲ್ 21ರಂದು ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ 2024ರ ಜನವರಿ 9 (Job alert) ಎಂದು ಪ್ರಕಟಣೆ ತಿಳಿಸಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಮಿಲಿಟರಿ) (ಎನ್‌ಡಿಎ)ಯಲ್ಲಿ 370 ಮತ್ತು ನೌಕಾ ಅಕಾಡೆಮಿ(ಎನ್‌ಎ)ಯಲ್ಲಿ 30 ಹುದ್ದೆಗಳಿವೆ. ಎನ್‌ಡಿಎ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ, 10+2 ಅಥವಾ ಸ್ಕೂಲ್ ಎಜುಕೇಷನ್ ಬೋರ್ಡ್ ಅಥವಾ ಯಾವುದೇ ರಾಜ್ಯ ಶಿಕ್ಷಣ ಇಲಾಖೆ ಅಥವಾ ವಿವಿ ನಡೆಸುವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎನ್‌ಎ ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಿಯುಸಿ (10+2) ಪಾಸ್ ಆಗಿರಬೇಕು. ಗಮನಿಸಿ ಅರ್ಜಿ ಸಲ್ಲಿಸುವವರು 16.5– 19.5 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಇದನ್ನು ಎಸ್‌ಬಿಐ ಬ್ಯಾಂಕ್ ಚಲನ್ ಪಡೆದು ಅಥವಾ ಆನ್‌ಲೈನ್ ಮೂಲಕ ಪಾವತಿಸಬಹುದು. ಎಸ್‌ಸಿ / ಎಸ್‌ಟಿ/ ಮಹಿಳೆ ಮುಂತಾದ ವಿಭಾಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ ಮತ್ತು ಎಸ್ಎಸ್‌ಬಿ ಸಂದರ್ಶನದ (SSB Interview) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಎರಡು ಪೇಪರ್ ಒಳಗೊಂಡಿರುತ್ತದೆ. ಒಟ್ಟು 900 ಅಂಕಗಳ ಪರೀಕ್ಷೆಯ ಅವಧಿ 5 ಗಂಟೆ. ಗಣಿತ (300 ಅಂಕ) ಮತ್ತು ಜನರಲ್ ಎಬಿಲಿಟಿ ಟೆಸ್ಟ್ (600 ಅಂಕ) ಪರೀಕ್ಷೆ ಇರುತ್ತದೆ.
ಎಸ್ಎಸ್‌ಬಿ ಸಂದರ್ಶನದ ಮೂಲಕ ಅಭ್ಯರ್ಥಿಗಳ ಬುದ್ಧಿವಂತಿಕೆ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಇದು ಐದರಿಂದ ಏಳು ದಿನಗಳವರೆಗೆ ವಿವಿಧ ಹಂತಗಳಲ್ಲಿ ನಡೆಯುತ್ತದೆ. ದೈಹಿಕ ಸಾಮರ್ಥ್ಯದ ಪರೀಕ್ಷೆ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ ಮುಂತಾದ ವಿಧಾನಗಳಲ್ಲಿ ಎಸ್ಎಸ್‌ಬಿ ಸಂದರ್ಶನ ನಡೆಯಲಿದೆ. ಆಯ್ಕೆಯಾದವರಿಗೆ ಮಾಸಿಕ ವೇತನ 56,100 ರೂ. ದೊರೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು, ಧಾರವಾಡ, ಮೈಸೂರು ಮುಂತಾದ ಕಡೆ ಪರೀಕ್ಷಾ ಕೇಂದ್ರಗಳಿವೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ಯುಐಐಸಿಯಲ್ಲಿದೆ 300 ಅಸಿಸ್ಟೆಂಟ್ ಹುದ್ದೆಗಳು; ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ