Site icon Vistara News

Job Mela : ಜನವರಿ ಅಂತ್ಯದಲ್ಲಿ ನಡೆಯಲಿದೆ ಉದ್ಯೋಗ ಮೇಳ; ಏಳು ಸಚಿವರ ಟೀಮ್‌ ರಚನೆ

Job Mela

ಬೆಂಗಳೂರು: ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು (Job opportunity) ಹೆಚ್ಚಿಸುವುದು ಮತ್ತು ಕಂಪನಿಗಳು ಹಾಗೂ ಉದ್ಯೋಗಾರ್ಥಿಗಳ ನಡುವೆ ಸೇತುವೆಯಾಗುವ ಉದ್ದೇಶದಿಂದ ರಾಜ್ಯ ಸರ್ಕಾರವು ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ (Job Mela) ಆಯೋಜಿಸಲು ಉದ್ದೇಶಿಸಿದೆ. ಇದನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಏಳು ಸಚಿವರ ತಂಡವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಿಳಿಸಿದರು.

ರಾಜ್ಯ ಮಟ್ಟದ ಉದ್ಯೋಗ ಮೇಳ ಆಯೋಜನೆಯ ಕುರಿತು ಮಹತ್ವದ ಸಭೆಯನ್ನು ನಡೆಸಿದ ಅವರು ಏಳು ಸಚಿವರಿಗೆ ಈ ಕಾರ್ಯಕ್ರಮದ ಯಶಸ್ಸಿನ ಹೊಣೆಯನ್ನು ಹೊರಿಸಿದರು. ಮತ್ತು ಕೆಲವೊಂದು ಸಲಹೆಗಳನ್ನು ನೀಡಿದರು.

ಟೀಮ್‌ನಲ್ಲಿರುವ ಸಚಿವರು ಯಾರೆಲ್ಲ?

  1. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ
  2. ಐಟಿ, ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ
  3. ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ
  4. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌,
  5. ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ
  6. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
  7. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ಸಚಿವರ ತಂಡದ ಜವಾಬ್ದಾರಿಗಳೇನು?

ಸಚಿವರ ಈ ತಂಡವು ಉದ್ಯೋಗದಾತರೊಂದಿಗೆ ಸಭೆ ನಡೆಸಿ ಈ ಕುರಿತು ಚರ್ಚಿಸಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರತಿಯೊಬ್ಬರೂ ತಮಗೆ ನಿಗದಿಯಾದ ಸಚಿವಾಲಯಕ್ಕೆ ಸಂಬಂಧಪಟ್ಟ ಉದ್ಯೋಗದಾತರನ್ನು ಸಂಪರ್ಕಿಸಿ ಅವರು ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಮಾಡಿ ಹೆಚ್ಚಿನ ಆಕಾಂಕ್ಷಿಗಳಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು. ಅದೇ ರೀತಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ತಿಳಿಸಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಉದ್ಯೋಗ ಮೇಳ ಆಯೋಜಿಸಲಾಗುವುದು. ಕೈಗಾರಿಕೆಗಳೊಂದಿಗೆ ಚರ್ಚಿಸಿ, ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹಾಗೂ ಕೈಗಾರಿಕೆಗಳ ಅಗತ್ಯತೆಯ ನಡುವಿನ ಅಂತರ ಸರಿಪಡಿಸುವ ಬಗ್ಗೆ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ಶಿಫಾರಸುಗಳನ್ನು ಮಾಡುವಂತೆ ಸಚಿವರ ತಂಡಕ್ಕೆ ಸೂಚಿಸಿದರು. ವಿದೇಶದಲ್ಲಿರುವ ಉದ್ಯೋಗಾವಕಾಶಗಳ ಕುರಿತೂ ಸಹ ಪರಿಶೀಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ಇದನ್ನೂ ಓದಿ: Job News: ಉದ್ಯೋಗಾಕಾಂಕ್ಷಿಗಳಿಗೆ Good News ; ಶೀಘ್ರವೇ 7,500 ಶಿಕ್ಷಕರ ನೇಮಕಾತಿ

ಉದ್ಯೋಗ ನೀತಿ ರೂಪಿಸಲು ಸೂಚನೆ

ಇದಲ್ಲದೆ ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಉದ್ಯೋಗ ನೀತಿಯನ್ನು ಹೊಂದುವ ಅಗತ್ಯವಿದೆ. ಈ ನೀತಿಯನ್ನು ರೂಪಿಸಲು ಸಿದ್ಧತೆ ನಡೆಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಡಾ. ಜಿ. ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಐಟಿ, ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version