Site icon Vistara News

JOB NEWS : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸದ್ಯವೇ 12 ಸಾವಿರ ಹೊಸ ಜಾಬ್‌ ಸೃಷ್ಟಿ

Bangalore airport

ಬೆಂಗಳೂರು: ವಿಮಾನ ನಿಲ್ದಾಣಗಳು ಅಭಿವೃದ್ಧಿಯಾಗುತ್ತಿದ್ದಂತೆಯೇ ಸಂಪರ್ಕ ವ್ಯವಸ್ಥೆ ಬಲಗೊಳ್ಳುವುದು ಒಂದು ಕಡೆಯಾದರೆ ದೊಡ್ಡ ಮಟ್ಟದಲ್ಲಿ ಉದ್ಯೋಗವೂ ಸೃಷ್ಟಿಯಾಗುತ್ತದೆ. ವಿಮಾನ ನಿಲ್ದಾಣ ಸ್ಥಾಪನೆ ಮಾತ್ರವಲ್ಲ, ವಿಸ್ತರಣೆಯೂ ಉದ್ಯೋಗ ಸೃಷ್ಟಿಯಲ್ಲಿ (JOB NEWS) ಪ್ರಧಾನ ಪಾತ್ರ ವಹಿಸುತ್ತದೆ. ನೇರವಾಗಿ ಒಂದಷ್ಟು ಮಂದಿಯ ನೇಮಕಾತಿ ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಸಂಬಂಧಿತ ವ್ಯವಹಾರಗಳಿಗೆ ಪೂರಕವಾಗಿ ಹೊಸ ಹೊಸ ಜಾಬ್‌ಗಳು (Job opportunities) ಸಿಗುತ್ತವೆ. ಇದಕ್ಕೆ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ (Kempegowda International airport) ಒಂದು ಉದಾಹರಣೆ.

ಬೆಂಗಳೂರಿನ ವಿಮಾನ ನಿಲ್ದಾಣದ ಪ್ರಗತಿ ಇಡೀ ದೇಶಕ್ಕೆ ಮಾದರಿಯಾಗಿದೆ. ಕಳೆದ ವರ್ಷ ಎರಡನೇ ಟರ್ಮಿನಲ್‌ ಆರಂಭಕ್ಕೆ ಮುನ್ನ ವಿಮಾನ ನಿಲ್ದಾಣದಲ್ಲಿ 25 ಸಾವಿರ ಜನ ಉದ್ಯೋಗಿಗಳಿದ್ದರು. ಈಗ ಸಂಖ್ಯೆ ಈಗ 38 ಸಾವಿರಕ್ಕೆ ಏರಿದೆ. ಮುಂದಿನ ಎರಡು ವರ್ಷಗಳಲ್ಲಿ ಇದು 50 ಸಾವಿರಕ್ಕೆ ಏರಲಿದೆ. ಅಂದರೆ 12 ಸಾವಿರ ಹೊಸ ಜಾಬ್‌ಗಳು ಸೃಷ್ಟಿಯಾಗಲಿವೆ. ಇದು ಕೇವಲ ನೇರ ಉದ್ಯೋಗದ ಕಥೆ. ಇದರಿಂದ ಪರೋಕ್ಷವಾಗಿಯೂ ಇಷ್ಟೇ ಸಂಖ್ಯೆಯ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.

ಈ ವಿಚಾರಗಳನ್ನು ತಿಳಿಸಿದ್ದು ಬೇರೆ ಯಾರೂ ಅಲ್ಲ, ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹರಿ ಮರಾರ್. ಅವರು ಉದ್ಯೋಗಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದು ಅಕ್ಟೋಬರ್‌ 11ರಂದು ರಾಜಧಾನಿಯಲ್ಲಿ ನಡೆದ ಸೋಲ್ ಬೆಂಗಳೂರು ಬಿಸಿನೆಸ್ ಕಾನ್‌ಕ್ಲೇವ್‌ನಲ್ಲಿ. ಇಲ್ಲಿ ‘ಬೆಂಗಳೂರು ರೂಪಾಂತರ’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೊಸ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದರು.

ಮುಂದಿನ 2 ವರ್ಷಗಳಲ್ಲಿ ಇಂಡಿಗೋ, ವಿಮಾನ ನಿಲ್ದಾಣ ಆವರಣದಲ್ಲಿ ಏರ್ ಇಂಡಿಯಾ ಹಬ್ ನಿರ್ಮಾಣ ಆಗಲಿದೆ. ಇದರಿಂದ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಇನ್ನಷ್ಟು ಅಭಿವೃದ್ಧಿ ಇನ್ನಷ್ಟು ಉದ್ಯೋಗ

ಈಗ ನಿರ್ಮಾಣವಾಗಿರುವ ಎರಡನೇ ಟರ್ಮಿನಲ್‌ನ ಉಳಿದ ಭಾಗದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರ ಜತೆಗೆ 2,500 ಕೋಟಿ ವೆಚ್ಚದ ಏರ್‌ಪೋರ್ಟ್ ಸಿಟಿಯ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ. ಈ ಮೂಲಕ ಮುಂದಿನ 2 ವರ್ಷದಲ್ಲಿ 12 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದರು.

ಇನ್ನೊಂದು ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯತೆ

ಬೆಂಗಳೂರಿನಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆ, ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯ ಇದೆ ಎಂಬಂತೆ ಕಾಣಿಸುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ 2030ರ ವೇಳೆಗೆ ಸುಮಾರು 15 ಸಾವಿರ ಕೋಟಿ ಹೂಡಿಕೆ ಆಗಲಿದೆ ಎಂದು ಏರ್‌ಪೋರ್ಟ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹರಿ ಮರಾರ್ ತಿಳಿಸಿದರು.

ವಿಮಾನ ಯಾನಿಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳ

ಬೆಂಗಳೂರು ವಿಮಾನದಲ್ಲಿ ಪ್ರಯಾಣಿಕರ ಸಂಖ್ಯೆ 2021-22ರಲ್ಲಿ 1.62 ಕೋಟಿ ಇತ್ತು. ಅದು 2022-23ರ ಹೊತ್ತಿಗೆ 3.19 ಕೋಟಿಗೆ ಏರಿತ್ತು. 2024ರ ಹೊತ್ತಿಗೆ ಇದು 4 ಕೋಟಿಗೆ ಏರುವ ಸಾಧ್ಯತೆ ಇದೆ. ಇಷ್ಟೊಂದು ಪ್ರಯಾಣ ದಟ್ಟಣೆ ನಿಭಾಯಿಸಲು ಇನ್ನೊಂದು ವಿಮಾನ ನಿಲ್ದಾಣದ ಅಗತ್ಯತೆ ಇದೆ ಎಂದು ಮರಾರ್‌ ವಿವರಿಸಿದರು.

Exit mobile version