Site icon Vistara News

Job News | ಸರ್ಕಾರಿ ಹುದ್ದೆಗೆ ಪರೀಕ್ಷೆ; ಸರ್ಕಾರದ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Job News

ಬೆಂಗಳೂರು: ಕಳೆದ ಬಜೆಟ್‌ನಲ್ಲಿ ಪ್ರಕಟಿಸಿದಂತೆ ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗದ (Job News) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ೫೦ ಸಾವಿರ ಅಭ್ಯರ್ಥಿಗಳಿಗೆ ತರಬೇತಿ ಒದಗಿಸಲು ಕ್ರಮ ತೆಗೆದುಕೊಂಡಿದ್ದು, ಅರ್ಹ ಅಭ್ಯರ್ಥಿಗಳಿಂದ ಈಗ ಅರ್ಜಿ ಆಹ್ವಾನಿಸಿದೆ.

ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತದೆ. ಕಳೆದ ಜುಲೈನಲ್ಲಿ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿತ್ತು.

ಕೇಂದ್ರಲೋಕ ಸೇವಾ ಆಯೋಗ (ಯುಪಿಎಸ್‌ಸಿ), ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌), ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ), ಗ್ರೂಪ್‌ ಸಿ ಹುದ್ದೆಗಳ ನೇಮಕ, ನ್ಯಾಯಾಲಯಗಳ ನೇಮಕ ಮತ್ತು ಏರ್‌ ಹೊಸ್ಟ್ರೇಸ್‌ ನೇಮಕಕ್ಕೆ ಸಂಬಂಧಿಸಿದಂತೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಈ ಯೋಜನೆ ಮೂಲಕ ಧನಸಹಾಯ ನೀಡಲಾಗುತ್ತದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್‌ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ರಾಜ್ಯದ ನಿವಾಸಿಗಳಾಗಿರುವ ಹಾಗೂ ಕುಟುಂಬದ ವಾರ್ಷಿಕ ಆದಾಯ 5,00,000ರೂ.ಗಳಿಗಿಂತ ಕಡಿಮೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಲಿಂಕ್‌ ಇಲ್ಲಿದೆ: https://sw.kar.nic.in/swprelims/petccoaching/homekan.aspx

ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ನಡೆಸಲಾಗುತ್ತದೆ. ಅಭ್ಯರ್ಥಿಗಳು ಈ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅರ್ಹರನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆಯ ಪ್ರವೇಶ ಪತ್ರ ವಿತರಣೆ, ಪರೀಕ್ಷಾ ದಿನಾಂಕ, ತರಬೇತಿ ಸಂಸ್ಥೆಯ ಆಯ್ಕೆ ಹಾಗೂ ಕೌನ್ಸಿಲಿಂಗ್‌ ಮೊದಲಾದ ಮಾಹಿತಿಯನ್ನು ವೆಬ್‌ನಲ್ಲಿಯೇ ಒದಗಿಸಲಾಗುತ್ತದೆ. ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವೆಬ್‌ ವಿಳಾಸ ಇಂತಿದೆ: https://sw.kar.nic.in

ಶಿಷ್ಯ ವೇತನವೂ ಇದೆ!
ಸರ್ಕಾರಿ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನೂ ನಿಗದಿಪಡಿಸಲಾಗಿದೆ. ಯುಪಿಎಸ್‌ಸಿಯ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಮಾಸಿಕ 8 ಸಾವಿರದಂತೆ ಒಟ್ಟು 72 ಸಾವಿರ (9 ತಿಂಗಳಿಗೆ) ಶಿಷ್ಯವೇತನ ಪಡೆಯಲಿದ್ದಾರೆ. ಯಾವ ಪರೀಕ್ಷೆಗೆ ತರಬೇತಿ ಪಡೆಯುವ ಅಭ್ಯರ್ಥಿಗೆ ಎಷ್ಟು ಶಿಷ್ಯವೇತನ ನೀಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ;

ಸದ್ಯ ಮೊದಲ ಹಂತದಲ್ಲಿ 15 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ಒದಗಿಸಲು ನಿರ್ಧರಿಸಲಾಗಿದ್ದು, 65.78 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಕುರಿತ ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆಗಳು ಇಂತಿವೆ: ಸಮಾಜ ಕಲ್ಯಾಣ ಇಲಾಖೆ: 9482300400 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: 8050770004 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: 8277799990.

ಇದನ್ನೂ ಓದಿ| Job News | ಸರ್ಕಾರಿ ಹುದ್ದೆಗೆ ಪರೀಕ್ಷೆ; 15 ಸಾವಿರ ಅಭ್ಯರ್ಥಿಗಳಿಗೆ ಸರ್ಕಾರದಿಂದ ಉಚಿತ ತರಬೇತಿ

Exit mobile version