ಬೆಂಗಳೂರು: ಸರ್ಕಾರಿ ಉದ್ಯೋಗದ (Job News) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅಭ್ಯರ್ಥಿಗಳ ಆಯ್ಕೆಗಾಗಿ ನವೆಂಬರ್ 13 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಪರೀಕ್ಷೆ ನಡೆಸಲಿದ್ದು, ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲ ಹಂತದಲ್ಲಿ 15 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ಒದಗಿಸಲು ನಿರ್ಧರಿಸಲಾಗಿದ್ದು, ಒಟ್ಟು 76 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಪ್ರವೇಶ ಪತ್ರವನ್ನು ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದ್ದು, ಪರೀಕ್ಷೆಯ ಮಾಹಿತಿಯನ್ನೂ ನೀಡಲಾಗಿದೆ. ಈ ಪರೀಕ್ಷೆ ಬರೆಯಲು ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನೂ ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತದೆ. ಕಳೆದ ಜುಲೈನಲ್ಲಿ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿತ್ತು.
ಕೇಂದ್ರಲೋಕ ಸೇವಾ ಆಯೋಗ (ಯುಪಿಎಸ್‌ಸಿ), ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್), ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ), ಗ್ರೂಪ್ ಸಿ ಹುದ್ದೆಗಳ ನೇಮಕ, ನ್ಯಾಯಾಲಯಗಳ ನೇಮಕ ಮತ್ತು ಏರ್ ಹೊಸ್ಟ್ರೇಸ್ ನೇಮಕಕ್ಕೆ ಸಂಬಂಧಿಸಿದಂತೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಈ ಯೋಜನೆ ಮೂಲಕ ಧನಸಹಾಯ ನೀಡಲಾಗುತ್ತದೆ. ಜತೆಗೆ ಮಾಸಿಕ ಶಿಷ್ಯವೇತನವನ್ನೂ ನಿಗದಿಪಡಿಸಲಾಗಿದೆ.
ನವೆಂಬರ್ 13 ರಂದು ಬೆಳಗ್ಗೆ 10.೩೦ ರಿಂದ ಯುಪಿಎಸ್‌ಸಿ, ಕೆಎಎಸ್ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ ನೀಡಲಾಗುವ ತರಬೇತಿಗೆ ಅಭ್ಯರ್ಥಿಗಳ ಆಯ್ಕೆಗೆ ಪರೀಕ್ಷೆ ನಡೆದರೆ, ಮಧ್ಯಾಹ್ನ 02.30 ರಿಂದ ಬ್ಯಾಂಕಿಂಗ್, ಆರ್‌ಆರ್‌ಬಿ ಮತ್ತು ಎಸ್‌ಎಸ್‌ಸಿ ಹುದ್ದೆಗಳಿಗೆ ನೀಡಲಾಗುವ ತರಬೇತಿಗೆ ಪರೀಕ್ಷೆ ನಡೆಸಲಾಗುತ್ತದೆ. 100 ಅಂಕಗಳಿಗೆ ಈ ಪರೀಕ್ಷೆ ನಡೆಯಲಿದ್ದು, ಬರೆಯಲು 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ.
ಪರೀಕ್ಷೆಗಿಂತ ಅರ್ಧಗಂಟೆ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ನಂತರ ಬರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೆಇಎ ಹೇಳಿದೆ. ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಗುರುತಿನ ಚೀಟಿಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬರಬೇಕು ಎಂದು ಸೂಚಿಸಲಾಗಿದೆ. ಅಭ್ಯರ್ಥಿಗಳು ಈ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅರ್ಹರನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆಗಳು ಇಂತಿವೆ: ಸಮಾಜ ಕಲ್ಯಾಣ ಇಲಾಖೆ: 9482300400 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: 8050770004 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: 8277799990.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://sw.kar.nic.in/swprelims/petccoaching/
ಇದನ್ನೂ ಓದಿ | Job News | ಸರ್ಕಾರಿ ಹುದ್ದೆಗೆ ಪರೀಕ್ಷೆ; 15 ಸಾವಿರ ಅಭ್ಯರ್ಥಿಗಳಿಗೆ ಸರ್ಕಾರದಿಂದ ಉಚಿತ ತರಬೇತಿ