ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಉದ್ಯೋಗ ಸೇರಬೇಕು (Job News) ಎಂದು ಆಸೆ ಹೊತ್ತ ಆಕಾಂಕ್ಷಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwar) ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರವೇ 16000 ಪೊಲೀಸ್ ಕಾನ್‌ಸ್ಟೇಬಲ್ (Police Constable) ಸೇರಿದಂತೆ 20000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಗೃಹ ಇಲಾಖೆಯಲ್ಲಿ (Home department) ಖಾಲಿ ಇರುವ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಪ್ರಮುಖವಾಗಿರುವುದು ರಾಜ್ಯದಲ್ಲಿ ಸದ್ಯ ಖಾಲಿ ಇರುವ 16 ಸಾವಿರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳು. ಇವುಗಳ ಪೈಕಿ ಬೆಂಗಳೂರು ನಗರಕ್ಕೆ 2,500 ಹಾಗೂ ರಾಜ್ಯದ ಇತರೆ ಭಾಗಗಳಿಗೆ 3,500 ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಈಗಾಗಲೇ ಆರ್ಥಿಕ ಇಲಾಖೆಯೂ ಇದಕ್ಕೆ ಅನುಮತಿ ನೀಡಿದೆ ಎಂದು ತಿಳಿಸಿದ ಅವರು, ಮುಂದೆ ಹಂತ ಹಂತವಾಗಿ ಉಳಿದ ನೇಮಕಾತಿಗಳು ನಡೆಯಲಿವೆ ಎಂದಿದ್ದಾರೆ.
ರಾಜ್ಯ ಗೃಹ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಹೊರತಾಗಿ ಇನ್ನೂ 4000 ಇತರ ಹುದ್ದೆಗಳಿವೆ. ಅವುಗಳನ್ನೂ ಹಂತ ಹಂತವಾಗಿ ತುಂಬುವ ಕೆಲಸ ನಡೆಯಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಪಿಎಸ್‌ಐ ನೇಮಕಾತಿಗೂ ಕ್ರಮ ಎಂದ ಪರಮೇಶ್ವರ್
ರಾಜ್ಯದಲ್ಲಿ ನಡೆದಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ (PSI Scam)ದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಕೋರ್ಟ್ ತೀರ್ಪು ಮತ್ತು ನಿರ್ದೇಶನದ ಆಧಾರದಲ್ಲಿ 545 ಪಿಎಸ್ಐ ನೇಮಕಾತಿ ಪ್ರಕ್ರಿಯೆ ಜೊತೆಗೆ ಹೆಚ್ಚುವರಿಯಾಗಿ 400 ಪಿಎಸ್ ಐ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: PDO Recruitment 2023 : 150 ಪಿಡಿಒ ಹುದ್ದೆಗಳಿಗೆ ನೇಮಕ ಖಚಿತ; ಸದ್ಯವೇ ಅಧಿಸೂಚನೆ
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ನೇಮಕ; ಆ.6ರ ಲಿಖಿತ ಪರೀಕ್ಷೆ ಮುಂದೂಡಿಕೆ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) 3,484 (ಕಲ್ಯಾಣ ಕರ್ನಾಟಕದ 420) ಹುದ್ದೆಗಳ (KSP Recruitment) ನೇಮಕಕ್ಕೆ ಆಗಸ್ಟ್ 6 ರಂದು ನಡೆಯಬೇಕಿದ್ದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. “ಕಾರಣಾಂತರಗಳಿಂದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆ ನಡೆಸುವ ದಿನಾಂಕವನ್ನು ಬಳಿಕ ತಿಳಿಸಲಾಗುವುದು” ಎಂದು ಪ್ರಕಟಣೆ ತಿಳಿಸಲಾಗಿದೆ.
ಕಳೆದ ಮಾರ್ಚ್‌ನಲ್ಲಿಯೇ ಪೊಲೀಸ್ ಮಹಾ ನಿರ್ದೇಶಕರು ಟ್ವಿಟ್ಟರ್‌ನಲ್ಲಿ ಜುಲೈನಲ್ಲಿ ಈ ನೇಮಕಾತಿ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದರು. ಈಗಾಗಲೇ ಇಲಾಖೆಯು ಪರೀಕ್ಷಾ ಕೇಂದ್ರಗಳನ್ನು ಗುರುತಿಸುವ ಕೆಲಸ ಮಾಡಿತ್ತು. ಒಟ್ಟು 75 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುವ ಸಾಧ್ಯತೆಗಳಿದ್ದು, 800 ಮಂದಿ ಕುಳಿತು ಪರೀಕ್ಷೆ ಬರೆಯಬಹುದಾದಂತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿತ್ತು. ಪ್ರತಿ ವಿಭಾಗದಲ್ಲಿಯೂ 8000 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಸಿದ್ಧತೆ ನಡೆದಿತ್ತು. ಆದರೀಗ ಪರೀಕ್ಷೆಯನ್ನು ಮುಂದೂಡಲಾಗಿದೆ.