Site icon Vistara News

Job News: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಎಚ್‌ಸಿಎಲ್‌ ಟೆಕ್‌ನಿಂದ 10 ಸಾವಿರಕ್ಕೂ ಹೆಚ್ಚು ಫ್ರೆಶರ್‌ಗಳ ನೇಮಕ

Job News

Job News

ನವದೆಹಲಿ: ಐಟಿ ಸೇವೆಗಳ ದೈತ್ಯ ಎಚ್‌ಸಿಎಲ್‌ ಟೆಕ್‌ (HCLTech) ಶುಕ್ರವಾರ ತನ್ನ ನಾಲ್ಕನೇ ತ್ರೈ ಮಾಸಿಕ ವರದಿಯನ್ನು ಪ್ರಕಟಿಸಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅದರಂತೆ 2024-25ರ ಆರ್ಥಿಕ ವರ್ಷದಲ್ಲಿ 10,000ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಕ ಮಾಡಲಾಗುವುದು ಕಂಪನಿ ಎಂದು ತಿಳಿಸಿದೆ (Job News).

“24ರ ಹಣಕಾಸು ವರ್ಷದಲ್ಲಿ ನಾವು ಸುಮಾರು 15,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಗುರಿ ಹೊಂದಿದ್ದೇವೆ. ಈಗಾಗಲೇ 12,000ಕ್ಕೂ ಹೆಚ್ಚು ಮಂದಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆʼʼ ಎಂದು ಎಚ್‌ಸಿಎಲ್‌ ಟೆಕ್‌ನ ಮುಖ್ಯ ಪೀಪಲ್ ಆಫೀಸರ್ ರಾಮಚಂದ್ರನ್ ಸುಂದರರಾಜನ್ ತಿಳಿಸಿದ್ದಾರೆ. 2023-24ರ ಹಣಕಾಸು ವರ್ಷದ ನಾಲ್ಕನೇ ತ್ರೈ ಮಾಸಿಕದಲ್ಲಿ ಎಚ್‌ಸಿಎಲ್‌ ಟೆಕ್‌ 3,096 ಪ್ರೆಶರ್‌ಗಳನ್ನು ನೇಮಿಸಿದೆ. ಜತೆಗೆ ಕಂಪನಿಯು 2024ರ ಸಂಪೂರ್ಣ ಹಣಕಾಸು ವರ್ಷದಲ್ಲಿ 12,141 ಪ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿದೆ. ನಾಲ್ಕನೇ ತ್ರೈಮಾಸಿಕದ ವೇಳೆಗೆ ಅದರ ಒಟ್ಟು ಉದ್ಯೋಗಿಗಳ ಸಂಖ್ಯೆ 2,27,481ಕ್ಕೆ ತಲುಪಿದೆ.

”ಮುಂಬರುವ ವರ್ಷದಲ್ಲಿ ನೇಮಕಾತಿಯು ಇದೇ ರೀತಿಯಲ್ಲಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಬಹುಶಃ 10,000ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲು ಯೋಜನೆ ಹಾಕಿಕೊಂಡಿದ್ದೇವೆ. ಅಂದರೆ ನಾವು ಕ್ಯಾಂಪಸ್ ಮೂಲಕ ನೇಮಕಾತಿ ಮುಂದುವರಿಸುತ್ತೇವೆ” ಎಂದು ರಾಮಚಂದ್ರನ್ ಸುಂದರರಾಜನ್ ತಿಳಿಸಿದ್ದಾರೆ.

6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಮಾಹಿತಿ ತಂತ್ರಜ್ಞಾನದ ಸೇವೆಗಳ (IT Service) ದೈತ್ಯ ಕಂಪನಿಯಾದ ಟೆಕ್‌ ಮಹೀಂದ್ರಾದ ನಿವ್ವಳ ಲಾಭವು 2023-24ನೇ ಹಣಕಾಸು ವರ್ಷದ ಕೊನೆಯ ಅಥವಾ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 40.9ರಷ್ಟು ಕುಸಿದಿದೆ. ಅಂದರೆ ಟೆಕ್‌ ಮಹೀಂದ್ರಾದ ನಿವ್ವಳ ಲಾಭವು 661 ಕೋಟಿ ರೂ.ಗೆ ಇಳಿಕೆಯಾಗಿದೆ. ಆದರೂ ಟೆಕ್‌ ಮಹೀಂದ್ರಾ ಕಂಪನಿಯು 2024-25ನೇ ವಿತ್ತೀಯ ವರ್ಷದಲ್ಲಿ 6 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. ಇದರಿಂದಾಗಿ, ಈಗಷ್ಟೇ ಪದವಿ ಮುಗಿಸಿದವರಿಗೆ ಉದ್ಯೋಗ ಸಿಗಲಿದೆ.

ಟೆಲಿಕಾಮ್‌, ಕಮ್ಯುನಿಕೇಷನ್ಸ್‌, ಮೀಡಿಯಾ ಹಾಗೂ ಎಂಟರ್‌ಟೇನ್‌ಮೆಂಟ್‌ ವಿಭಾಗದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟೆಕ್‌ ಮಹೀಂದ್ರಾ ಕಂಪನಿಯ ನಿವ್ವಳ ಲಾಭದ ಪ್ರಮಾಣವು ಕುಸಿದೆ. ಆದರೆ, 2024-25ನೇ ಸಾಲಿನಲ್ಲಿ ಲಾಭದ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆ ಇದೆ” ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್‌ ಜೋಶಿ ಮಾಹಿತಿ ನೀಡಿದ್ದಾರೆ. 

“ಉದ್ಯಮದ ವಿಸ್ತರಣೆ, ಟ್ರೆಂಡ್‌ನಲ್ಲಿ ಬದಲಾವಣೆ, ಏಳಿಗೆಯನ್ನು ದೃಷ್ಟಿಯಲ್ಲಿಕೊಂಡು 2024-25ನೇ ಹಣಕಾಸು ವರ್ಷದಲ್ಲಿ 6 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಲು ಕಂಪನಿ ತೀರ್ಮಾನಿಸಿದೆ. ಪ್ರತಿಯೊಂದು ತ್ರೈಮಾಸಿಕದಲ್ಲೂ 1,500 ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸಾಂಸ್ಥಿಕ ಏಳಿಗೆ, ಕಾರ್ಯಾಚರಣೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಕಂಪನಿಯನ್ನು ಇನ್ನಷ್ಟು ಲಾಭದತ್ತ ಕೊಂಡೊಯ್ಯಲಾಗುವುದು” ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Job News: ಆಪಲ್ ನಿಂದ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ!

“ಕಂಪನಿಯ 50 ಸಾವಿರ ಉದ್ಯೋಗಿಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ ಕುರಿತು ತರಬೇತಿ ನೀಡಲಾಗುವುದು. ಆಧುನಿಕ ತಂತ್ರಜ್ಞಾನದ ಮೂಲಕ ಉದ್ಯಮವನ್ನು ಏಳಿಗೆಯತ್ತ ಕೊಂಡೊಯ್ಯುವ ದಿಸೆಯಲ್ಲಿ ಈ ಉಪಕ್ರಮ ಅಳವಡಿಸಿಕೊಳ್ಳುತ್ತಿದ್ದೇವೆ” ಎಂದು ಮೋಹಿತ್‌ ಜೋಶಿ ತಿಳಿಸಿದ್ದಾರೆ.

Exit mobile version