Site icon Vistara News

Job News: ಚಿನ್ನದ ಕಂಪನಿಯಲ್ಲಿ ಬಂಗಾರದಂತಹ ಕೆಲಸ!

Job News job news kannada

ಚಿನ್ನದ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರುವ ಕರ್ನಾಟಕ ಸರ್ಕಾರದ ಹೆಮ್ಮೆಯ ಗಣಿ ಸಂಸ್ಥೆ ʼದಿ ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ ಲಿಮಿಟೆಡ್‌ʼ ಸಿಹಿ ಸುದ್ದಿ (Job News) ನೀಡಿದೆ. ಕಂಪನಿಯು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಾರ್ಷಿಕ ಸುಮಾರು 650 ಕೋಟಿ ರೂ.ಗಳ ವಹಿವಾಟು ಹೊಂದಿರುವ ಈ ಗಣಿಕಂಪನಿಯಲ್ಲಿನ ವಿವಿಧ ವಿಭಾಗಗಳಲ್ಲಿ ಒಟ್ಟು 216 ಸ್ಥಳೀಯ ವೃಂದದ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್‌ 10 ರಂದು ಆರಂಭಗೊಳ್ಳಲಿದ್ದು, ಜುಲೈ 9 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಯಾವ್ಯಾವ ಹುದ್ದೆಗಳಿಗೆ ನೇಮಕ?

ಮ್ಯಾನೇಜ್‌ ಮೆಂಟ್‌ ಟ್ರೇನಿ ಒಟ್ಟು 29 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಗಣಿ, ಅನ್ವೇಷಣೆ, ಲೋಹ, ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಕಂಪ್ಯೂಟರ್‌ ಸೈನ್ಸ್‌, ಇ & ಸಿ, ಸಿವಿಲ್‌, ಎಚ್‌ ಆರ್‌, ಅಕೌಂಟ್ಸ್‌, ಸರಕು ಮತ್ತು ಭದ್ರತಾ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಹತೆ: ಸಂಬಂಧಿತ ವಿಷಯಗಳಲ್ಲಿ ಎಂಜಿನಿಯರಿಂಗ್‌ ಮಾಡಿದ (ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅನ್ವೇಷಣೆಯ ಹುದ್ದೆಗೆ ಎಮ್‌ಎಸ್‌ಸಿ ಜಿಯಾಲಜಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಲೋಹ ವಿಭಾಗದ ಹುದ್ದೆಗೆ ಮಿನರಲ್‌ ಡ್ರೆಸ್ಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ/ಬಿಇ/ಮೆಟಲರ್ಜಿ/ಬಿಇ ಕೆಮಿಕಲ್‌, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಎಚ್‌ಆರ್‌ ವಿಭಾಗದಲ್ಲಿನ ಮ್ಯಾನೇಜ್‌ಮೆಂಟ್‌ ಟ್ರೇನಿ ಹುದ್ದೆಗೆ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಸೋಷಿಯಲ್‌ ವರ್ಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಜತೆಗೆ ಪಿಎಂ&ಐಆರ್‌ ಅಥವಾ ಎಂಬಿಎ (ಎಚ್‌ಆರ್‌) ಪದವಿ ಪಡೆದಿರಬೇಕು. ಅಕೌಂಟ್ಸ್‌ ವಿಭಾಗದಲ್ಲಿನ ಹುದ್ದೆಗೆ ಎಮ್‌ಕಾಂ/ಎಂಎಸ್ಸಿ (ಗಣಿತ) ಎಮ್‌ಎ (ಸಂಖ್ಯಾಶಾಸ್ತ್ರ)/ಬಿಕಾಮ್‌ ಪದವಿಯೊಂದಿಗೆ ಹಣಕಾಸು/ಕಾಸ್ಟಿಂಗ್‌ ವಿಷಯದಲ್ಲಿ ಪಿಜಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಸರಕು ವಿಭಾಗದ ಹುದ್ದೆಗೆ ಯಾವುದೇ ಬಿಇ ಪದವಿಯೊಂದಿಗೆ ಐಐಎಮ್‌ಎಮ್‌ ಇನ್ಸ್‌ಟಿಟ್ಯೂಟ್‌ನಿಂದ ಪಿಜಿ ಡಿಪ್ಲೊಮೊ ಇನ್‌ ಮೆಟೀರಿಯಲ್‌ ಮ್ಯಾನೇಜ್‌ಮೆಂಟ್‌ ಪದವಿ ಪಡೆದಿರಬೇಕು. ಸೆಕ್ಯೂರಿಟಿ ವಿಭಾಗದ ಹುದ್ದೆಗೆ ಸಶಸ್ತ್ರ ಪಡೆ/ಅರೆ ಸೇನಾಪಡೆ/ ಪೊಲೀಸ್‌ ಸೇವೆಯಲ್ಲಿ ಕ್ಯಾಪ್ಟನ್‌ ಅಥವಾ ಸರಿಸಮಾನಾದ ರ‍್ಯಾಂಕ್‌ನಲ್ಲಿ ಎಂಟು ವರ್ಷಗಳ ಸೇವಾನುಭವ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ ಎಷ್ಟು?: ಮ್ಯಾನೇಜ್‌ಮೆಂಟ್‌ ಟ್ರೇನಿ ಹುದ್ದೆಗೆ ಪರೀಕ್ಷಾರ್ಥ ಅವಧಿಯಲ್ಲಿ 45 ಸಾವಿರ ರೂ. ಹಾಗೂ ನಂತರ 47,800-81,200  ರೂ. ವೇತನ ನೀಡಲಾಗುತ್ತದೆ.

ಜಿ-8 ದರ್ಜೆಯ ಹುದ್ದೆಗಳೂ ಇವೆ!

ಐಟಿಐ ಫಿಟ್ಟರ್‌ ಮತ್ತು ಎಲೆಕ್ಟ್ರಿಕಲ್‌ ದರ್ಜೆಯ ಒಟ್ಟು 92 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಇವರ ದೈಹಿಕ  ಮತ್ತು ಸಹಿಷ್ಣುತೆ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಇದಲ್ಲದೆ, ಸೆಕ್ಯುರಿಟಿ ಗಾರ್ಡ್‌ನ 42, ಲ್ಯಾಬ್‌ ಟೆಕ್ನಿಷಿಯನ್‌ ಮತ್ತು ನರ್ಸಿಂಗ್‌ ಏಡ್‌ ತಲಾ ಒಂದು ಹುದ್ದೆಗೆ ನೇಮಕ ನಡೆಯಲಿದ್ದು, ಸೆಕ್ಯುರಿಟಿ ಗಾರ್ಡ್‌ ಹುದ್ದೆಗೆ ಪಿಯುಸಿ ಮತ್ತು ಐಟಿಐ ಮಾಡಿದವರು, ಲ್ಯಾಬ್‌ ಟೆಕ್ನಿಷಿಯನ್‌ ಹುದ್ದೆಗೆ ಈ ವಿಷಯದಲ್ಲಿ ಡಿಪ್ಲೊಮೊ ಮಾಡಿದವರು ಹಾಗೂ ನರ್ಸಿಂಗ್‌ ಹುದ್ದೆಗೆ ಎಎನ್‌ಎಮ್‌ ಮಾಡಿದವರು ಅರ್ಸಿ ಸಲ್ಲಿಸಬಹುದಾಗಿದೆ.

ವೇತನ ಎಷ್ಟು? : ಈ ಹುದ್ದೆಗಳಿಗೆ 20,920-42,660 ರೂ. ವೇತನ ಹಾಗೂ ಕೈಗಾರಿಕಾ ತುಟ್ಟು ಭತ್ಯೆ ನೀಡಲಾಗುತ್ತದೆ.

ವಯೋಮಿತಿ ಎಷ್ಟಿರುತ್ತದೆ?

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿಯ ಅಭ್ಯರ್ಥಿಗಳಿಗೆ 38 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ಇತ್ತ ಗಮನಿಸಿ

ಅರ್ಜಿ ಶುಲ್ಕ ಎಷ್ಟು?

ಪ.ಜಾ/ಪ.ಪಂ., ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ 100 ರೂ, ಹಿಂದುಳಿದ ವರ್ಗದ(2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ 300 ರೂ. ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 600 ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಆನ್‌ಲೈನ್‌ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೇಮೆಂಟ್‌ ಗೇಟ್‌ವೇ ಮೂಲಕ ಪಾವತಿಸಬಹುದಾಗಿದೆ.

ನೇಮಕಾತಿ ಅಧಿಸೂಚನೆ ಇಲ್ಲಿದೆ ನೋಡಿ

ನೇಮಕ ಪ್ರಕ್ರಿಯೆ ಹೇಗಿರುತ್ತದೆ?

ಪ್ರತಿ ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ್ನು (ಶೇ.50 weightage) ಹಾಗೂ ನೇಮಕಾತಿ ಪ್ರಾಧಿಕಾರವು ನಡೆಸುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (Computer Based Test- CBT) ಯಲ್ಲಿ ಪಡೆದ ಅಂಕಗಳನ್ನು (50% weightage) ಪರಿಗಣಿಸಿ ಅರ್ಹತಾ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗೆ 1:2 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ| Job News: ಸೇನಾಧಿಕಾರಿಯಾಗಬೇಕಾ? ಎನ್‌ಡಿಎ-ಎನ್‌ಎ ಪರೀಕ್ಷೆ ಬರೆಯಿರಿ

Exit mobile version