Site icon Vistara News

Job News: ಹಟ್ಟಿ ಚಿನ್ನದ ಕಂಪನಿ ನೇಮಕ ತಾತ್ಕಾಲಿಕ ಸ್ಥಗಿತ

Job News

ಬೆಂಗಳೂರು: ಸರ್ಕಾರದ ಹೆಮ್ಮೆಯ ಗಣಿ ಸಂಸ್ಥೆ ʼದಿ ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ ಲಿಮಿಟೆಡ್‌ʼ ನಲ್ಲಿ ಉದ್ಯೋಗ ಪಡೆಯಬೇಕೆಂಬ ಕನಸು ಹೊತ್ತವರಿಗೆ ನಿರಾಸೆಯಾಗಿದೆ. ಇತ್ತೀಚೆಗೆ ಕಂಪನಿಯು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿ ಈಗ ನೇಮಕ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ಪ್ರಕಟಿಸಿದೆ.

ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ನೇಮಕಾತಿಯ ಬಗ್ಗೆ ಮುಂದಿನ ಪ್ರಕಟಣೆಯಲ್ಲಿ ಹಾಗೂ ಕಂಪನಿಯ ವೆಬ್‌ಸೈಟಿನಲ್ಲಿ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯು ʼತಿದ್ದುಪಡಿ ಉದ್ಯೋಗ ಪ್ರಕಟಣೆʼ ಹೆಸರಿನಲ್ಲಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್‌ 2 ರಂದು ಅಧಿಸೂಚನೆ ಹೊರಡಿಸಿದ್ದ ಹಟ್ಟಿ ಕಂಪನಿಯು ಒಟ್ಟು 216 ಸ್ಥಳೀಯ ವೃಂದದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿತ್ತು. ಇದರ ಬೆನ್ನಲ್ಲಿಯೇ ಅಂದರೆ ಜೂನ್‌ 3ರಂದು ಮತ್ತೊಂದು ಅಧಿಸೂಚನೆ ಹೊರಡಿಸಿ ಸ್ಥಳೀಯೇತರ 60 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಹೇಳಿತ್ತು. ಈಗ ಈ ಎರಡೂ ಆಧಿಸೂಚನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ.

ಮ್ಯಾನೇಜ್‌ ಮೆಂಟ್‌ ಟ್ರೇನಿ ಒಟ್ಟು 38 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಗಣಿ, ಅನ್ವೇಷಣೆ, ಲೋಹ, ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಕಂಪ್ಯೂಟರ್‌ ಸೈನ್ಸ್‌, ಇ & ಸಿ, ಸಿವಿಲ್‌, ಎಚ್‌ ಆರ್‌, ಅಕೌಂಟ್ಸ್‌, ಸರಕು ಮತ್ತು ಭದ್ರತಾ ವಿಭಾಗಗಳಲ್ಲಿ ಈ ಹುದ್ದೆಗಳಿರಲಿವೆ ಎಂದು ಕಂಪನಿ ಅಧಿಸೂಚನೆಯಲ್ಲಿ ಹೇಳಿತ್ತು.

ಇದನ್ನೂ ಓದಿ|ಸರ್ಕಾರದ ಹೊರಗುತ್ತಿಗೆ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ.33 ಮೀಸಲು ಜಾರಿ

ಅಲ್ಲದೆ, ಫಿಟ್ಟರ್‌ ಮತ್ತು ಎಲೆಕ್ಟ್ರಿಕಲ್‌ ದರ್ಜೆಯ ಒಟ್ಟು 152 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿತ್ತು. ಇದರೊಂದಿಗೆ ಜಿ-5 ದರ್ಜೆಯ ಒಟ್ಟು 11ಹುದ್ದೆಗಳಿಗೂ ನೇಮಕ ಮಾಡಿಕೊಳ್ಳುವ ಮಾಹಿತಿ ನೀಡಲಾಗಿತ್ತು. ಒಟ್ಟಾರೆಯಾಗಿದೆ ದಿ ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ ಲಿಮಿಟೆಡ್‌ 276 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿತ್ತು.

ಅಧಿಸೂಚನೆಯ ಪ್ರಕಾರ ಇಂದಿನಿಂದ (ಜೂನ್‌ 10) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಬೇಕಿತ್ತು. ಅರ್ಜಿ ಸಲ್ಲಿಸಲು ವೆಬ್‌ಗೆ ಭೇಟಿ ನೀಡಿದವರಿಗೆ ನೇಮಕಾತಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂಬ ಪ್ರಕಟಣೆ ಕಾಣಿಸುತ್ತಿದೆ. ಮುಂದೆ ನೇಮಕಾತಿ ಆರಂಭವಾದಾಗ ವೆಬ್‌ನಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿರುವುದರಿಂದ ಆಸಕ್ತರು ಆಗಾಗ ಕಂಪನಿಯ ವೆಬ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು. ವೆಬ್‌ ವಿಳಾಸ ಇಂತಿದೆ: https://huttigold.karnataka.gov.in

Exit mobile version