ಲಕ್ನೋ: 2023ರ ಪ್ಲೇಸ್‌ಮೆಂಟ್ ಅಧಿವೇಶನದ ಮೊದಲ ದಿನದಂದು ಖರಗ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Indian Institute of Technology-IIT) ದಾಖಲೆ ಬರೆದಿದೆ. ಪ್ರಿ-ಪ್ಲೇಸ್‌ಮೆಂಟ್ ಆಫರ್‌ಗಳು (PPOs) ಸೇರಿದಂತೆ 700ಕ್ಕೂ ಹೆಚ್ಚು ಉದ್ಯೋಗಾವಕಾಶ ಪಡೆದುಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ. 19ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಆಫರ್‌ಗಳನ್ನು ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ. ಆ ಪೈಕಿ ಆರು ವಿದ್ಯಾರ್ಥಿಗಳಿಗೆ ಮೊದಲ ದಿನದಂದು 1 ಕೋಟಿ ರೂ.ಗಿಂತ ಹೆಚ್ಚಿನ ಪ್ಯಾಕೇಜ್ ಲಭಿಸಿದೆ ಎಂದು ಮೂಲಗಳು ತಿಳಿಸಿವೆ (Job news).
61ಕ್ಕೂ ಹೆಚ್ಚು ಕಂಪನಿಗಳು ಭಾಗಿ
“61ಕ್ಕೂ ಹೆಚ್ಚು ಕಂಪನಿಗಳು ನಮ್ಮ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿವೆ. ಮುಖ್ಯವಾಗಿ ಸಾಫ್ಟ್‌ವೇರ್, ಅನಾಲಿಟಿಕ್ಸ್, ಫೈನಾನ್ಸ್-ಬ್ಯಾಂಕಿಂಗ್, ಕನ್ಸಲ್ಟಿಂಗ್ ಮತ್ತು ಕೋರ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಉದ್ಯೋಗ ಲಭಿಸಿದೆ. ಆ್ಯಪಲ್, ಆರ್ಥರ್ ಡಿ ಲಿಟಲ್, ಡಾ ವಿನ್ಸಿ, ಕ್ಯಾಪಿಟಲ್ ಒನ್, ಡಿಇ ಶಾ, ಎಕ್ಸ್ಎಲ್ ಸರ್ವೀಸಸ್, ಗ್ಲೀನ್, ಗೂಗಲ್, ಗ್ರಾವಿಟನ್, ಮೈಕ್ರೋಸಾಫ್ಟ್, ಮೆಕಿನ್ಸೆ, ಕ್ವಾಂಟ್ಬಾಕ್ಸ್, ಡಾಟಾ ಬ್ರಿಕ್ಸ್, ಸ್ಕ್ವೇರ್ ಪಾಯಿಂಟ್, ಟಿಎಸ್ಎಂ, ಪಾಲೊ ಆಲ್ಟೊ ಮತ್ತಿತರ ಕ್ಷೇತ್ರಗಳ ಕಂಪೆನಿಗಳು ಆಫರ್ ನೀಡಿವೆ. ಹೈಬ್ರಿಡ್ ಮೋಡ್ ವಿಧಾನದಲ್ಲಿ ಸಂಸ್ಥೆಗಳು ಸಂದರ್ಶನಗಳನ್ನು ನಡೆಸುತ್ತಿವೆʼʼ ಎಂದು ಸಂಸ್ಥೆ ತಿಳಿಸಿದೆ.
ವೃತ್ತಿ ಅಭಿವೃದ್ಧಿ ಕೇಂದ್ರ(ಸಿಡಿಸಿ)ದ ಅಧ್ಯಕ್ಷ ಪ್ರೊಫೆಸರ್ ರಾಜೀಬ್ ಮೈಟಿ ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಲಭಿಸುವ ಅವಕಾಶಗಳ ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆʼʼ ಎಂದು ಹೇಳಿದ್ದಾರೆ.
ಸಿಡಿಸಿ ಈ ವರ್ಷ ಮೊದಲ ಬಾರಿಗೆ “ಅಕಾಡೆಮಿಯಾ ಇಂಡಸ್ಟ್ರಿ ಕಾನ್‌ಕ್ಲೇವ್ (Academia Industry Conclave (AIC) 2023” ಅನ್ನು ಆಯೋಜಿಸಿ ವಿದ್ಯಾರ್ಥಿಗಳು ಮತ್ತು ಕಂಪನಿ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಖರಗ್ಪುರ ಐಐಟಿ ನಿರ್ದೇಶಕ ಪ್ರೊಫೆಸರ್ ವಿ.ಕೆ.ತಿವಾರಿ ಮಾತನಾಡಿ, “ಹೆಚ್ಚಿನ ಪ್ರಮುಖ ಕಂಪನಿಗಳು ಆಗಸ್ಟ್‌ನಲ್ಲಿ ಇಂಟರ್ನ್‌ಶಿಪ್‌ಗಾಗಿ ಕ್ಯಾಂಪಸ್‌ಗೆ ಭೇಟಿ ನೀಡಿದ್ದವು. 2023-24ರ ಪದವಿ ಬ್ಯಾಚ್‌ನ ವಿದ್ಯಾರ್ಥಿಗಳು ಈ ಪ್ಲೇಸ್‌ಮೆಂಟ್ ಡ್ರೈವ್ ಬಗ್ಗೆ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಜತೆಗೆ ಕಂಪೆನಿಗಳು ಈ ಸಂಸ್ಥೆಯ ಪ್ರತಿಭೆಯನ್ನು ಬಳಸಿಕೊಳ್ಳಲು ಮುಂದಾಗಿರುವುದು ಉತ್ತಮ ಬೆಳವಣಿಗೆʼʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
“ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ನೇಮಕಾತಿ ಪ್ರತಿಕ್ರಿಯೆ ಮೇಲೆ ಪ್ರಭಾವ ಬೀರಿದೆ. ಅದಾಗ್ಯೂ ನಮ್ಮಲ್ಲಿನ ವಿದ್ಯಾರ್ಥಿಗಳು ಮೊದಲ ದಿನವೇ 700ಕ್ಕೂ ಹೆಚ್ಚು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಅದರಲ್ಲೂ ಆರು ವಿದ್ಯಾರ್ಥಿಗಳಿಗೆ 1 ಕೋಟಿ ರೂ.ಗಿಂತ ಹೆಚ್ಚಿನ ಪ್ಯಾಕೇಜ್ ಲಭಿಸಿದೆ. 19ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಆಫರ್‌ಗಳನ್ನು ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆʼʼ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಗೋಲ್ಡನ್ ಚಾನ್ಸ್; 540 ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇಶಾದ್ಯಂತದ ಐಐಟಿಗಳು ತಮ್ಮ ಪ್ಲೇಸ್‌ಮೆಂಟ್ ಡ್ರೈವ್ ಅನ್ನು ಈಗಾಗಲೇ ಪ್ರಾರಂಭಿಸಿವೆ. ದೆಹಲಿ ಐಐಟಿಯ ಸುಮಾರು 480 ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ಲಭಿಸಿದೆ. ಗುವಾಹಟಿ ಐಐಟಿ ತನ್ನ ಪ್ಲೇಸ್‌ಮೆಂಟ್ ಡ್ರೈವ್‌ನ ಮೊದಲ ದಿನದಂದು 59 ಕಂಪನಿಗಳಿಂದ 164 ಆಫರ್‌ಗಳನ್ನು ಸ್ವೀಕರಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ