ಬೆಂಗಳೂರು: ಕಳೆದ ಬಜೆಟ್‌ನಲ್ಲಿ ಪ್ರಕಟಿಸಿದಂತೆ ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗದ (Job News) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ೫೦ ಸಾವಿರ ಅಭ್ಯರ್ಥಿಗಳಿಗೆ ತರಬೇತಿ ಒದಗಿಸಲು ಕ್ರಮ ತೆಗೆದುಕೊಂಡಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತದೆ.
ಮುಂದಿನ 18 ತಿಂಗಳಿನಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ಕ್ರಮ ಬಹಳ ಮಹತ್ವ ಪಡೆದಿದೆ. ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ ಈ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ. ಈಗಾಗಲೇ ಈ ಇಲಾಖೆಗಳಲ್ಲಿ ಈ ತರಬೇತಿ ನೀಡುವ ಯೋಜನೆ ಜಾರಿಯಲ್ಲಿದ್ದು, ಇದನ್ನೀಗ ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತಿದೆ.
ಸದ್ಯ ಮೊದಲ ಹಂತದಲ್ಲಿ ೧೫ ಸಾವಿರ ಅಭ್ಯರ್ಥಿಗಳಿಗೆ ತರಬೇತಿ ಒದಗಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಕೇಂದ್ರಲೋಕ ಸೇವಾ ಆಯೋಗ (ಯುಪಿಎಸ್‌ಸಿ), ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್), ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ), ಗ್ರೂಪ್ ಸಿ ಹುದ್ದೆಗಳ ನೇಮಕ, ನ್ಯಾಯಾಲಯಗಳ ನೇಮಕ ಮತ್ತು ಏರ್ ಹೊಸ್ಟ್ರೇಸ್ ನೇಮಕಕ್ಕೆ ಸಂಬಂಧಿಸಿದಂತೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಈ ಯೋಜನೆ ಮೂಲಕ ಧನಸಹಾಯ ನೀಡಲಾಗುತ್ತದೆ.
ಯಾವ ಇಲಾಖೆಯ ಎಷ್ಟು ಅಭ್ಯರ್ಥಿಗಳಿಗೆ ಅವಕಾಶ?
ಯುಪಿಎಸ್‌ಸಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳು ದೆಹಲಿ, ಹೈದರಾಬಾದ್, ಚೆನ್ನೈ ಸೇರದಿಂತೆ ರಾಜ್ಯದಿಂದ ಹೊರಗಿನ ನಗರಗಳಲ್ಲಿಯೇ ಹೆಚ್ಚಾಗಿರುವುದರಿಂದ ತರಬೇತಿ ಶುಲ್ಕವೂ ಹೆಚ್ಚು ಕಡಿಮೆಯಾಗಿರುವುದರಿಂದ, ಶುಲ್ಕ ವ್ಯತ್ಯಾಸವನ್ನು ಒಪ್ಪಿಕೊಳ್ಳಲಾಗುತ್ತದೆ. ಉಳಿದಂತೆ ಕೆಎಎಸ್, ಬ್ಯಾಂಕಿಂಗ್, ಆರ್‌ಆರ್‌ಬಿ, ಗ್ರೂಪ್-ಸಿ ಮೊದಲಾದ ತರಬೇತಿ ಕೇಂದ್ರಗಳು ರಾಜ್ಯದಲ್ಲಿಯೇ ಇರುವ ಕಾರಣ ಒಂದೇ ತರಬೇತಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ನೀಡಲಾಗುವ ತರಬೇತಿ ಶುಲ್ಕದ ವಿವರ ಇಂತಿದೆ;
ಶಿಷ್ಯ ವೇತನವೂ ಇದೆ!
ಸರ್ಕಾರಿ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನೂ ನಿಗದಿಪಡಿಸಲಾಗಿದೆ. ಯುಪಿಎಸ್‌ಸಿಯ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಮಾಸಿಕ ೮ ಸಾವಿರದಂತೆ ಒಟ್ಟು ೭೨ ಸಾವಿರ (೯ ತಿಂಗಳಿಗೆ) ಶಿಷ್ಯವೇತನ ಪಡೆಯಲಿದ್ದಾರೆ. ಯಾವ ಪರೀಕ್ಷೆಗೆ ತರಬೇತಿ ಪಡೆಯುವ ಅಭ್ಯರ್ಥಿಗೆ ಎಷ್ಟು ಶಿಷ್ಯವೇತನ ನೀಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ;
ಯಾರು ಅರ್ಹರು? ಆಯ್ಕೆ ಹೇಗೆ?
ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ತರಬೇತಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ೮ ಲಕ್ಷ ರೂ. ಒಳಗೆ ವಾರ್ಷಿಕ ಆದಾಯ ಹೊಂದಿರಬೇಕೆಂದು ನಿಗದಿಪಡಿಸಲಾಗಿದೆ. ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗೆ, ಕೆಪಿಎಸ್‌ಸಿ, ಆರ್‌ಆರ್‌ಬಿ, ಎಸ್‌ಎಸ್‌ಸಿ, ಬ್ಯಾಂಕಿಂಗ್, ಗ್ರೂಪ್-ಸಿ ಮೊದಲಾದ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳ ವಾರ್ಷಿಕ ಆದಾಯವು ೫ ಲಕ್ಷ ರೂ.ಗಳ ಒಳಗೆ ಇರಬೇಕೆಂದು ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ನಾಲ್ಕು ಇಲಾಖೆಯ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಅರ್ಜಿ ಆಹ್ವಾನಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಟಿಸಿಎಸ್ ಅಥವಾ ಕೆಇಎ ಮೂಲಕ) ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ಈ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅರ್ಹರನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ನ್ಯಾಯಾಂಗ ಸೇವೆ ಮತ್ತು ಗಗನಸಖಿ ತರಬೇತಿಗಳಿಗೆ ನಿಗಧಿತ ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ತರಬೇತಿ ಕೇಂದ್ರ ಯಾವುದು?
ಬೆಂಗಳೂರಿನಲ್ಲಿ ಮತ್ತು ಬೆಂಗಳೂರಿನ ಹೊರಗೆ ಇರುವ ತರಬೇತಿ ಕೇಂದ್ರಗಳನ್ನು ಈ ಯೋಜನೆಯಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಇ-ಟೆಂಡರ್ ಕರೆದು ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯವೇ ಈ ಪ್ರಕ್ರಿಯೆಯು ಆರಂಭವಾಗಲಿದೆ. ಮೊದಲ ಹಂತದಲ್ಲಿ ಒಟ್ಟು ೧೫ ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಲು ೬೫.೭೮ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ| Job News | ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಸಿಬ್ಬಂದಿ ನೇಮಕಾತಿ ಆಯೋಗ