ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಗೆ ಬಂದಿದೆ. ಇದು ಸರ್ಕಾರಿ ನೇಮಕ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಲಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಹೊಸ ನೇಮಕಾತಿ (Job News) ಅಧಿಸೂಚನೆಗಳು ಪ್ರಕಟವಾಗುವುದಿಲ್ಲ.
ಆದರೆ ಈಗಾಗಲೇ ಚಾಲ್ತಿಯಲ್ಲಿರುವ ನೇಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲು, ನೇಮಕ ಪ್ರಕ್ರಿಯೆ ಮುಂದುವರಿಸಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಕೆಪಿಎಸ್‌ಸಿಯು ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಈಗಾಗಲೇ ನಿಗದಿಪಡಿಸಿದ ದಿನಾಂಕದಂದು ನಡೆಸಲಿದೆ ಎಂದು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ನೇಮಕಾತಿ ಪರೀಕ್ಷೆ ನಡೆಸಲು ಅಡ್ಡಿಯಿಲ್ಲ!
ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಹೊಸ ನೇಮಕಾತಿ ಪ್ರಕಟಣೆಗೆ ಅವಕಾಶವಿರುವುದಿಲ್ಲ. ಕೇವಲ ತುರ್ತು ಪ್ರಸ್ತಾವನೆಗಳಿಗೆ ಮಾತ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿನ ಪರಿಶೀಲನಾ ಸಮಿತಿಯು ಪರಿಶೀಲನೆ ನಡೆಸಿ ಅನುಮತಿ ನೀಡಲಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.
ಹೀಗಾಗಿ ಕೆಪಿಎಸ್‌ಸಿಯು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ (ಗ್ರೂಪ್ ಎ) 23 ಹುದ್ದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ 40 ಹುದ್ದೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿಗಳ (ಗ್ರೂಪ್ ಎ)- 400 ಹಾಗೂ ಕೃಷಿ ಇಲಾಖೆಯಲ್ಲಿನ ಸಹಾಯಕ ಕೃಷಿ ಅಧಿಕಾರಿ (ಗ್ರೂಪ್ -ಬಿ) 368 ಹುದ್ದೆಗಳ ನೇಮಕಕ್ಕೆ ಹೊರಡಿಸಬೇಕಾಗಿದ್ದ ಅಧಿಸೂಚನೆಗಳು ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಹೊರಡಿಸಬಹುದಾಗಿದೆ. ಆದರೆ ಈಗಾಗಲೇ ಅಧಿಸೂಚನೆ ಪ್ರಕಟವಾಗಿರುವ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಕೆಇಎಯಿಂದ ನೇಮಕಾತಿ
ಈ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಸಿದ್ಧತೆ ನಡೆಸಿದ್ದು, ಈ ನೇಮಕ ಪ್ರಕ್ರಿಯೆ ಚುನಾವಣೆಯ ಸಂದರ್ಭದಲ್ಲಿಯೇ ನಡೆಯುವ ಸಾಧ್ಯತೆಗಳಿವೆ.
ಪ್ರಾಧಿಕಾರವು ಮಾರ್ಚ್ 15 ರಂದೇ ಈ ನೇಮಕಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿತ್ತು. ಮಾರ್ಚ್ 24 ರಂದು ಅಧಿಸೂಚನೆ ಪ್ರಕಟಿಸಿದೆ. ಇದರ ಪ್ರಕಾರ ಏಪ್ರಿಲ್ 17 ರಿಂದ ಅರ್ಜಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮೇ.17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇ-ಅಂಚೆ ಕಚೇರಿಗಳಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಮೇ.20 ಕೊನೆಯ ದಿನವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಪ್ರಕಟಣೆ ನೋಡಲು ಇಲ್ಲಿ ಕ್ಲಿಕ್ (Click Here ) ಮಾಡಿ.
ಸದ್ಯ ಈ ನೇಮಕಾತಿ ಆರಂಭವಾಗುತ್ತದೆಯೇ ಇಲ್ಲವೇ ಎಂಬುದರ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಅಧಿಸೂಚನೆ ಪ್ರಕಟವಾಗಿರುವುದರಿಂದ ಈ ನೇಮಕ ಪ್ರಕ್ರಿಯೆ ನಡೆಸಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಕೆಲ ನೇಮಕಾತಿ ತಜ್ಞರು ಈ ನೇಮಕ ಪ್ರಕ್ರಿಯೆ ಆರಂಭವಾಗುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಕೆಇಎ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಇದನ್ನೂ ಓದಿ : KPSC Recruitment 2023 : ಕೆಪಿಎಸ್‌ಸಿಯಿಂದ ಸದ್ಯವೇ ನಾಲ್ಕು ಅಧಿಸೂಚನೆ; ಅರ್ಜಿ ಸಲ್ಲಿಸಲು ಅರ್ಹತೆಗಳೇನು?