ಗುರುಗ್ರಾಮ: ಮೊಬೈಲ್ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ಸ್ಯಾಮ್‌ಸಂಗ್ ದೇಶಾದ್ಯಂತ ಇರುವ ತನ್ನ ಸಂಶೋಧನಾ ಘಟಕಗಳಲ್ಲಿ ಕಾರ್ಯನಿರ್ವಹಿಸಲು ಒಂದು ಸಾವಿರ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ (Job News) ಪ್ರಕಟಿಸಿದೆ.
2023ರ ವೇಳೆಗೆ ಈ ಎಂಜಿನಿಯರ್‌ಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಕಂಪನಿಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ನವ ಯುಗದ ತಂತ್ರಜ್ಞಾನಗಳಾದ ಆರ್ಟಿಫಿಷಿಯಲ್ ಇಂಟಲಿಜೆನ್ಸಿ (ಎಐ), ಮೆಷಿನ್ ಲರ್ನಿಂಗ್ (ಎಂಎಲ್), ಡೀಪ್ ಲರ್ನಿಂಗ್, ಇಮೇಪ್ ಪ್ರೊಸೆಸಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್, ಕನೆಕ್ಟಿವಿಟಿ, ಕ್ಲೌಡ್, ಬಿಗ್ ಡೇಟಾ, ಬಿಸ್ನೆಸ್ ಇಂಟಲಿಜೆನ್ಸಿ, ಪ್ರೆಡಿಕ್ಟೀವ್ ಅನಾಲಿಸೀಸ್, ಕಮ್ಯುನಿಕೇಷನ್ ನೆಟ್‌ವರ್ಕ್, ಸಿಸ್ಟಮ್ ಆನ್ ಎ ಚಿಪ್ ಮತ್ತು ಸ್ಟೋರೇಜ್ ಸಲ್ಯೂಷನ್ ಕುರಿತು ಈ ಎಂಜಿನಿಯರ್‌ಗಳು ಸಂಶೋಧನೆ ನಡೆಸಲಿದ್ದಾರೆ ಎಂದು ಅದು ಹೇಳಿದೆ.
“ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳಿಗೆ ಈ ನೇಮಕ ನಡೆಯುತ್ತಿದೆ. ಭಾರತದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತ ಪ್ರತಿಭಾವಂತ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ತಂತ್ರಜ್ಞಾನ, ಉತ್ಪನ್ನ, ವಿನ್ಯಾಸ, ಭಾರತೀಯ ಅಗತ್ಯಕ್ಕೆ ತಕ್ಕಂತೆ ಮೊಬೈಲ್‌ಗಳನ್ನು ರೂಪಿಸುವುದು ಮತ್ತಿತರ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇವರುಗಳು ಸಂಶೋಧನೆ ನಡೆಸಲಿದ್ದಾರೆʼʼ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಮೀರ್ ವಾದ್ವಾನ್ ಹೇಳಿದ್ದಾರೆ.
ವಿವಿಧ ಸ್ಟ್ರೀಮ್‌ಗಳಲ್ಲಿ ಅಂದರೆ ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೆಷನ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್, ಇನ್‌ಸ್ಟ್ರುಮೆಂಟೇಷನ್, ಕಮ್ಯುನಿಕೇಷನ್ ನೆರ್ಟ್‌ವರ್ಕ್ ಇತ್ಯಾದಿಗಳನ್ನು ಓದಿದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದಲ್ಲದೆ, ಗಣಿತ, ಕಂಪ್ಯೂಟಿಂಗ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ಕಲಿತವರಿಗೂ ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಒಂದು ಸಾವಿರ ಎಂಜಿನಿಯರ್‌ಗಳಲ್ಲಿ 200 ಎಂಜಿನಿಯರ್‌ಗಳನ್ನು ಐಐಟಿಗಳಿಂದ ನೇಮಕ ಮಾಡಿಕೊಳ್ಳಲಾಗುತ್ತದೆ.
ನೇಮಕ ಹೇಗೆ?
ಸ್ಯಾಮ್‌ಸಂಗ್ ಕಂಪನಿಯು ಪ್ರತಿಭಾವಂತರನ್ನು ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳುತ್ತದೆ. ಅನುಭವಿಗಳನ್ನು ನೇರವಾಗಿಯೂ ನೇಮಕ ಮಾಡಿಕೊಳ್ಳುವುದುಂಟು. ನೇಮಕಾತಿಯ ಮಾಹಿತಿಯನ್ನು ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆಗಾಗ ನೀಡುತ್ತಿರುತ್ತದೆ. ಅಲ್ಲದೆ ಕಂಪನಿಯ ಸಾಮಾಜಿಕ ಜಾಲತಾಣಗಳಲ್ಲಿಯೂ ಇದನ್ನು ಹಂಚಿಕೊಳ್ಳುತ್ತದೆ. ಇತ್ತೀಚೆಗೆ ಸ್ಯಾಮ್‌ಸಂಗ್ ಕಂಪನಿಯ ಹೆಸರಿನಲ್ಲಿಯೂ ವಂಚಕರು ಉದ್ಯೋಗ ನೀಡುವುದಾಗಿ ಅಭ್ಯರ್ಥಿಗಳನ್ನು ವಂಚಿಸಿದ ಪ್ರಕರಣಗಳು ವರದಿಯಾಗಿದ್ದವು. ಹೀಗಾಗಿ ಆಕಾಂಕ್ಷಿಗಳು ಎಚ್ಚರಿಕೆಯಿಂದ ಇರಬೇಕೆಂದು ಕಂಪನಿಯು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ಅಧಿಕೃತ ವೆಬ್ ಸೈಟ್: www.samsung.com/in
ಭಾರತದಲ್ಲಿರುವ ಸ್ಯಾಮ್‌ಸಂಗ್‌ನ ಸಂಶೋಧನಾ ಘಟಕಗಳು ಇದುವರೆಗೆ ಸುಮಾರು 7,500 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿವೆ. ಮಲ್ಟಿ ಕ್ಯಾಮರಾ ಸಲ್ಯೂಷನ್, ಟೆಲಿವಿಷನ್ಸ್, ಡಿಜಿಟಲ್ ಅಪ್ಲಿಕೇಷನ್ಸ್, 5G ಮೊಬೈಲ್ ಸಿಸ್ಟಮ್ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿ ಸಂಶೋಧನೆ ನಡೆಯುತ್ತಿದೆ. ಮೊಬೈಲ್ ಮಾತ್ರವಲ್ಲದೆ, ಸ್ಮಾರ್ಟ್ ವಾಚ್, ನೆಟ್‌ವರ್ಕ್ ಎಕ್ಯುಪ್‌ಮೆಂಟ್‌ಗಳ ಕುರಿತೂ ಸಂಶೋಧನೆಗಳು ನಡೆಯುತ್ತಿವೆ. ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಚುರುಕುಗೊಳಿಸಲು ಈ ನೇಮಕ ನಡೆಯುತ್ತಿದೆ.
ಇದನ್ನೂ ಓದಿ | 5G | ಕಳೆದ 12 ತಿಂಗಳಲ್ಲಿ ಟೆಲಿಕಾಂ ಸಂಬಂಧಿತ ಉದ್ಯೋಗ ಹೆಚ್ಚಳ