Site icon Vistara News

Agnipath | ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕ ಇಂದಿನಿಂದಲೇ ಶುರು

Agneepath Recruitment 2022

ನವ ದೆಹಲಿ: ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್‌ʼ (Agnipath) ಅಡಿಯಲ್ಲಿ ಮೊದಲಿಗೆ ಭಾರತೀಯ ವಾಯುಪಡೆಯು ʼಅಗ್ನಿವೀರʼ ರನ್ನು (ಸೈನಿಕರನ್ನು) ನೇಮಿಸಿಕೊಳ್ಳಲಿದ್ದು, ಇಂದಿನಿಂದಲೇ (ಜೂ.೨೪) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಅರ್ಹ ಪುರುಷ ಅಭ್ಯರ್ಥಿಗಳು ಮಾತ್ರ ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು, ಈಗಾಗಲೇ ಅಧಿಸೂಚನೆಯನ್ನು ವಾಯುಪಡೆಯು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳಿಗೆ ಹೆಸರು ನೋಂದಾಯಿಸಲು ವಿಶೇಷ ವೆಬ್‌ಸೈಟ್‌ ( https://agnipathvayu.cdac.in) ಆರಂಭಿಸಲಾಗಿದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಕ ದಿನಾಂಕ : ೨೪-೦೬-೨೦೨೨
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೦೫-೦೭-೨೦೨೨ (ಸಂಜೆ ೫ ಗಂಟೆಯವರೆಗೆ ಮಾತ್ರ)
ಮೊದಲ ಹಂತದ ಪರೀಕ್ಷೆ ಆರಂಭ: ಜುಲೈ ಕೊನೆಯ ವಾರ
ಅಗ್ನಿವೀರರ ಮೊದಲ ನೇಮಕ: ೧೧-೧೨-೨೦೨೨
ಅರ್ಜಿ ಶುಲ್ಕ : ೨೫೦ ರೂ. (ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿದೆ)
ಮಾಹಿತಿಗೆ ದೂರವಾಣಿ ಸಂಖ್ಯೆ: 20-25503105/25503106
ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌:
https://indianairforce.nic.in/agniveer/
ಅರ್ಜಿ ಸಲ್ಲಿಸಲು ವೆಬ್‌: https://agnipathvayu.cdac.in

ವಿದ್ಯಾರ್ಹತೆ ಏನು?
೧. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇಂಗ್ಲಿಷ್‌, ಫಿಜಿಕ್ಸ್‌ ಮತ್ತು ಮ್ಯಾಥ್‌ಮೆಟಿಕ್ಸ್‌ ಓದಿರಬೇಕಾದದು ಕಡ್ಡಾಯ. ಶೇ. ೫೦ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಥವಾ
೨. ಮೂರು ವರ್ಷಗಳ ಡಿಪ್ಲೊಮಾವನ್ನು ( ಮೆಕಾನಿಕಲ್‌/ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌/ ಆಟೋಮೊಬೈಲ್‌/ ಕಂಪ್ಯೂಟರ್‌ ಸೈನ್ಸ್‌/ ಇನ್‌ಸ್ಟ್ರುಮೆಂಟೇಷನ್‌ ಟೆಕ್ನಾಲಜಿ, ಇನ್‌ಫಾರ್ಮೆಷನ್‌ ಟೆಕ್ನಾಲಜಿ) ಪೂರ್ಣಗೊಳಿಸಿರಬೇಕು. ಶೇ. ೫೦ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಥವಾ
೩. ಎರಡು ವರ್ಷಗಳ ವೃತಿಪರ ಕೋರ್ಸ್‌ ಮಾಡಿರಬೇಕು (ಇಂಗ್ಲಿಷ್‌, ಪಿಕಿಕ್ಸ್‌ ಮತ್ತು ಮ್ಯಾಥ್‌ಮೆಟಿಕ್ಸ್‌ ಓದಿರಬೇಕು) ಶೇ. ೫೦ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಗಮನಿಸಿ: ಈ ಮೇಲಿನ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಇಂಗ್ಲಿಷ್‌ ವಿಷಯದಲ್ಲಿ ಶೇ. ೫೦ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕಾದದು ಕಡ್ಡಾಯ. ಒಂದು ವೇಳೆ ಇಂಗ್ಲಿಷ್‌ ವಿಷಯ (ಡಿಪ್ಲೊಮಾ/ವೃತ್ತಿಪರ ಕೋರ್ಸ್‌) ಇಲ್ಲದಿದ್ದರೆ ಎಸ್‌ಎಸ್‌ಎಲ್‌ಸಿಯಲ್ಲಿ ಇಂಗ್ಲಿಷ್‌ನಲ್ಲಿ ಶೇ.೫೦ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.

ಇದನ್ನೂ ಓದಿ| ಅಗ್ನಿಪಥ್‌ ಯೋಜನೆ ಬಗ್ಗೆ ವಾಯುಪಡೆ ಬಿಡುಗಡೆಗೊಳಿಸಿದ ವಿವರದಲ್ಲಿ ಏನೇನಿದೆ?

ದೈಹಿಕ ಅರ್ಹತೆಗಳೇನು?
ಅಭ್ಯರ್ಥಿಯು ಕನಿಷ್ಠ ೧೫೨.೫ ಸೆ.ಮೀ. ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು.
ಎದೆಯನ್ನು ಕನಿಷ್ಠ ೫ ಸೆಂ.ಮೀ. ಹಿಗ್ಗಿಸುವ ಸಾಮರ್ಥ್ಯವಿರಬೇಕು.
ಹಲ್ಲುಗಳ ಆರೋಗ್ಯ ಸೇರದಿಂತೆ ಅತ್ಯುತ್ತಮ ಆರೋಗ್ಯವನ್ನು ಅಭ್ಯರ್ಥಿಗಳು ಹೊಂದಿರಬೇಕು.

ವಾಯುಪಡೆಯ ಅಧಿಸೂಚನೆ ಇಲ್ಲಿದೆ ನೋಡಿ

ಪರೀಕ್ಷೆ ಹೇಗೆ?

ಒಟ್ಟು ಮೂರು ಹಂತದ ಪರೀಕ್ಷೆ ನಡೆಸಿ ಈ ನೇಮಕಾತಿ ನಡೆಯಲಿದೆ. ಮೊದಲಿಗೆ ಆನ್‌ಲೈನ್‌ನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಅಬ್ಜೆಕ್ಟೀವ್‌ ಮಾದರಿಯಲ್ಲಿ ಈ ಪರೀಕ್ಷೆ ಇರಲಿದ್ದು, ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬಹುದಾಗಿರುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಎರಡನೇ ಹಂತದ ಪರೀಕ್ಷೆಗೆ ಆಯ್ಕೆಯಾಗಲಿದ್ದಾರೆ. ಈ ಪರೀಕ್ಷೆಯ ಫಲಿತಾಂವನ್ನೂ ವೆಬ್‌ನಲ್ಲಿ ಒದಗಿಸಲಾಗುತ್ತದೆ.

ಎರಡನೇ ಹಂತದ ಪರೀಕ್ಷೆಯಲ್ಲಿ ಮೂಲ ದಾಖಲೆಗಳ ಪರಿಶೀಲನೆ, ವಿದ್ಯಾರ್ಹತೆಗೆ ಸಂಬಂಧಿಸಿದ ಮಾಹಿತಿಗಳ ಪರಿಶೀಲನೆ, ಇತರ ಕೌಶಲ, ಸಾಧನೆಗಳ ಮಾಹಿತಿ ಸಂಗ್ರಹ ನಡೆಯಲಿದೆ. ಮುಖ್ಯವಾಗಿ ಈ ಹಂತದಲ್ಲಿ ದೈಹಿಕ ಅರ್ಹತಾ ಪರೀಕ್ಷೆಯೂ ನಡೆಯಲಿದೆ. ಇದರಲ್ಲಿಯೂ ಅರ್ಹತೆ ಪಡೆದವರು ಮೂರನೇ ಹಂತದ ಪರೀಕ್ಷೆಗೆ ಆಯ್ಕೆಯಾಗಲಿದ್ದಾರೆ.

ಮೂರನೇ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಇದರಲ್ಲಿಯೂ ಆಯ್ಕೆಯಾದಲ್ಲಿ ಭಾರತೀಯ ವಾಯುಪಡೆಯು ʼಅಗ್ನಿವೀರರʼ ಹುದ್ದೆಗೆ ನೇಮಕ ಮಾಡಿಕೊಳ್ಳಲಿದೆ.

ಇದನ್ನೂ ಓದಿ | Agneepath | ಅಗ್ನಿವೀರರ ನೇಮಕ; ಸೇನಾ ರ‍್ಯಾಲಿಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ!

Exit mobile version