ಬೆಂಗಳೂರು: ರಾಜ್ಯದ ನೂತನ ಸರ್ಕಾರವು ಉಪನ್ಯಾಸಕ ಹಾಗೂ ಪ್ರೌಢ ಶಾಲಾ ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ (Jobs News) ನೀಡಿದೆ. ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಖಾಸಗಿ ಅನುದಾನಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು 2 ವರ್ಷ ಹೆಚ್ಚಿಸಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶ ಹೊರಡಿಸಿದೆ. ʻʻಕೋವಿಡ್-19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳ ಹಾಗೂ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ, ಖಾಸಗಿ/ಅನುದಾನಿತ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳ ಮೊದಲ ನೇರ ನೇಮಕಾತಿಗೆ ಮಾತ್ರ ಅನ್ವಯವಾಗುವಂತೆ ದಿನಾಂಕ:23-06-2022 ರಿಂದ ಒಂದು ವರ್ಷದ ಅವಧಿಗೆ ಮಾತ್ರ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆʼʼ ಎಂದು ಆದೇಶದಲ್ಲಿ ಹೇಳಲಾಗಿದೆ.
ಕೋವಿಡ್-19ರ ಸಾಂಕ್ರಾಮಿಕ ಖಾಯಿಲೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಸೃಷ್ಟಿಯಾಗಿದ್ದರಿಂದ ಯಾವುದೇ ಅನುದಾನ ರಹಿತ ವಿದ್ಯಾ ಸಂಸ್ಥೆಗಳನ್ನು, ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ಅನುದಾನರಹಿತ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಆರ್ಥಿಕ ಮಿತವ್ಯಯದ ಕಾರಣ ಸಾಧ್ಯವಾಗಿರಲಿಲ್ಲ.
ಅಲ್ಲದೆ, 2020-21 ಮತ್ತು 2021-22ನೇ ಶೈಕ್ಷಣಿಕ ಸಾಲುಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತವಾಗಿದ್ದ ಕಾರಣ ಸಾವಿರಾರು ಅಭ್ಯರ್ಥಿಗಳು ವಯೋಮಿತಿ ಮೀರಿದ್ದರಿಂದಾಗಿ ಅವಕಾಶದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ/ಪ್ರೌಢಶಾಲೆ/ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಮಾತ್ರ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ನೀಡುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ.
ಮೊದಲ ನೇಮಕಾತಿಗೆ ಮಾತ್ರ ಈ ವಯೋಮಿತಿಯ ಸಡಿಲಿಕೆಯು ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಇದುವರೆಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು ಎಂದು ವಯೋಮಿತಿ ನಿಗದಿಪಡಿಸಲಾಗಿತ್ತು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 43 ವರ್ಷ ಎಂದು ತಿಳಿಸಲಾಗಿತ್ತು. ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45 ವರ್ಷ ಎಂದು ನಿಗದಿಪಡಿಸಲಾಗಿತ್ತು. ಈಗ ಗರಿಷ್ಠ ವಯೋಮಿತಿಯಲ್ಲಿ ಎರಡದು ವರ್ಷ ಸಡಿಲಿಕೆ ನೀಡಲಾಗಿದೆ.
ಇದನ್ನೂ ಓದಿ : KSP Recruitment : 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕ; ಜುಲೈನಲ್ಲಿ ಪರೀಕ್ಷೆ